
ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಿಟ್‌ಕಾಯಿನ್ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಜಾರಿ ನಿರ್ದೇಶನಾಲಯ (ಇಡಿ) ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ‘ಶ್ರೀಕಿ’, ರಾಬಿನ್ ಖಂಡೇವಾಲ ಹಾಗೂ ಸುನೀಶ್ ಹೆಗ್ಡೆ ಯನ್ನು ಬಂಧಿಸಲಾಗಿದ್ದು, ಇಡಿ ಅಧಿಕಾರಿಗಳು ನಿನ್ನೆ ತಡರಾತ್ರಿ ಈ ಮೂವರನ್ನೂ ಬಂಧಿಸಿದ್ದಾರೆ.
ಇಂದು ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ಮೂವರನ್ನು ತಮ್ಮ ಕಸ್ಟಡಿಗೆ ಪಡೆದ ಇಡಿ ಅಧಿಕಾರಿಗಳು. ಇಡಿ ವಿಶೇಷ ಕೋರ್ಟ್ ಆದೇಶ ಹಿನ್ನೆಲೆ 10 ದಿನಗಳ ಕಾಲ ಇಡಿ ವಶಕ್ಕೆ ಪಡೆಯಲಾಗಿದೆ. ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆದಿರುವ ಈ ಬಿಟ್‌ಕಾಯಿನ್ ಹಗರಣದಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪ್ರಮುಖ ಆರೋಪಿಯಾಗಿದ್ದಾನೆ. ಹ್ಯಾಕಿಂಗ್, ಡಿಜಿಟಲ್ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಸಂಬಂಧ ಹಲವು ಗಂಭೀರ ಆರೋಪಗಳು ಈತನ ಮೇಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸುನೀಶ್ ಹೆಗ್ಡೆ ಹಾಗೂ ಪ್ರಸಿದ್ಧ ಶೆಟ್ಟಿ ಸೇರಿದಂತೆ ಇನ್ನಿತರರು ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಹ್ಯಾಕಿಂಗ್ ಮತ್ತು ವಂಚನೆ ಪ್ರಕರಣಗಳನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆ ಹಂತದಲ್ಲಿದೆ.
ಇದಕ್ಕೂ ಮುನ್ನ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಈ ಹಗರಣದ ತನಿಖೆಯ ಭಾಗವಾಗಿ, ಏಪ್ರಿಲ್ 21ರಂದು ಇಡಿ ಅಧಿಕಾರಿಗಳು ಏಕಕಾಲದಲ್ಲಿ 12 ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್, ಹ್ಯಾಕರ್ ಶ್ರೀಕಿ, ಹಕೀಬ್ ಖಾನ್ ಸೇರಿದಂತೆ ಹಲವರ ಮನೆಗಳು ಹಾಗೂ ಕಚೇರಿಗಳ ಮೇಲೆ ಈ ದಾಳಿ ನಡೆದಿತ್ತು. ಸುಮಾರು 24 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಅಧಿಕಾರಿಗಳು ಪರಿಶೋಧನೆಯನ್ನು ಮುಕ್ತಾಯಗೊಳಿಸಿದ್ದರು.
ಈ ಪ್ರಕರಣದಲ್ಲಿ ಹಣದ ಹಾದಿ, ಕ್ರಿಪ್ಟೋಕರೆನ್ಸಿ ವ್ಯವಹಾರಗಳು ಹಾಗೂ ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ಇಡಿ ಅಧಿಕಾರಿಗಳು ಸವಿಸ್ತಾರವಾಗಿ ತನಿಖೆ ನಡೆಸುತ್ತಿದ್ದಾರೆ. ಡಿಜಿಟಲ್ ಸಾಕ್ಷ್ಯಗಳು ಹಾಗೂ ಬ್ಯಾಂಕಿಂಗ್ ವ್ಯವಹಾರಗಳ ಪರಿಶೀಲನೆಯೂ ಮುಂದುವರಿದಿದೆ. ಒಟ್ಟಾರೆ, ಬಿಟ್‌ಕಾಯಿನ್ ಹಗರಣ ಪ್ರಕರಣ ಮತ್ತೊಮ್ಮೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇಡಿ ಬಂಧನದ ಬಳಿಕ ತನಿಖೆ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ