
ಬೆಂಗಳೂರು (ಮಾ.4) : ಹಕ್ಕಿ ಜ್ವರ ಸಂಬಂಧಿಸಿ ಬೆಂಗಳೂರು ನಗರ ಜಿಲ್ಲಾಡಳಿತ ತೀವ್ರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ ಕರೆ ನೀಡಿದ್ದಾರೆ.
ಹಕ್ಕಿ ಜ್ವರ ಭೀತಿ, ಆರೋಗ್ಯ ಇಲಾಖೆ ಮುನ್ಸೂಚನೆ:
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಕ್ಕಿ ಜ್ವರ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕರಪತ್ರ ಬಿಡುಗಡೆಗೊಳಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ಪಕ್ಷಿಗಳು ಅಥವಾ ಕೋಳಿಗಳ ಅನುಮಾನಾಸ್ಪದ, ಅಸಹಜ ಅಥವಾ ಹಠಾತ್ ಸಾವು ಗಮನಿಸಿದರೆ ಹತ್ತಿರದ ಪಶು ಇಲಾಖೆಗೆ ಮಾಹಿತಿ ನೀಡಬೇಕು. ಗ್ರಾ.ಪಂ ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ಹಕ್ಕಿ ಜ್ವರದ (ಹೆಚ್5ಎನ್1) ಬಗ್ಗೆ ಆರೋಗ್ಯ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಲ್ಲೂ ಈಗ ಹಕ್ಕಿಜ್ವರ ಭೀತಿ: 4000ಕ್ಕೂ ಹೆಚ್ಚು ಕೋಳಿಗಳ ಸಾವು
ಇದನ್ನೂ ಓದಿ:
ವ್ಯಾಧಿಗೊಳಗಾದ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದ ಹಕ್ಕಿಗಳನ್ನು ಕೈಯಿಂದ ಮುಟ್ಟಬಾರದು. ಮುಂಜಾಗೃತಾ ಕ್ರಮವಾಗಿ ಎಲ್ಲ ಕೋಳಿ ಸಾಕಾಣಿಕೆ ಫಾರಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಗಾ ವಹಿಸಬೇಕು. ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ವೈಯಕ್ತಿಕ ಆರೋಗ್ಯದ ಕಾಳಜಿ ವಹಿಸುವ ಕುರಿತು ಜಾಗೃತಿ ಮೂಡಿಸಬೇಕು. ಅಗತ್ಯ ಎನಿಸಿದಲ್ಲಿ ಚಿಕಿತ್ಸೆಗೆ ಯಾವುದೇ ಔಷಧಿಗಳ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದು ಪಶು ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
70 ಡಿಗ್ರಿ ಸೆಂಟಿಗ್ರೇಡ್‌ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿ:
ಕೋಳಿ ಮಾಂಸ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಈ ಕಾಯಿಲೆ ಮನುಷ್ಯರಿಗೆ ಬರುವುದಿಲ್ಲ. ಆದರೆ, ಸೋಂಕು ತಗುಲಿದ ಕೋಳಿಯ ಮಾಂಸ ಚೆನ್ನಾಗಿ ಬೇಯಿಸದೆ ಹಾಗೂ ಅವುಗಳ ಹಸಿ ಮೊಟ್ಟೆಗಳ ಸೇವನೆಯಿಂದ ರೋಗ ತಗಲುವ ಸಾಧ್ಯತೆಗಳಿರುತ್ತವೆ. ಆದ್ದರಿಂದ, ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್‌ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವೇ ಸೇವಿಸಬೇಕು. ಕೋಳಿ ಮಾಂಸವನ್ನು ಸಿದ್ಧಪಡಿಸಿದ ನಂತರ ಕೈಗಳನ್ನು ನಂಜುನಾಶಕದಿಂದ ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ಸೋಂಕಿತ ಹಸಿ ಮೊಟ್ಟೆಯನ್ನು ಸೇವಿಸಬಾರದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ್. ಎಂ. ಮೇಟಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶರತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಯಿಲೆ ಹೇಗೆ ಹರಡುತ್ತದೆ?
ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯಕೀಯ ಜೈವಿಕ ಸಂಸ್ಥೆಯ ವಿಜ್ಞಾನಿ ಡಾ.ರವೀಂದ್ರ ಹೆಗಡೆ ಮಾತನಾಡಿ, ಹಕ್ಕಿ ಜ್ವರವು ವೈರಾಣುಗಳಿಂದ ಉಂಟಾಗಿ, ಸೋಂಕು ತಗುಲಿದ ಹಕ್ಕಿಗಳಿಂದಾಗುವ ವಿಸರ್ಜನೆ, ಶ್ವಾಸೋಚ್ಛಾಸ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತದಿಂದ ಮುಂಜಾಗೃತ ಕ್ರಮಗಳು
‘ಹಕ್ಕಿಜ್ವರ ಪ್ರದೇಶ’ದ 1 ಕಿ.ಮೀ. ವ್ಯಾಪ್ತಿಯ ಕೋಳಿ ಕೊಲ್ಲಲು ಆದೇಶ
ರಾಜ್ಯದಲ್ಲಿ ಹಕ್ಕಿಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಸದ್ಯ ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರೋಗ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿಗಳನ್ನು ಕೊಂದು ಹೂಳುವಂತೆ ತಿಳಿಸಿದೆ. ಒಂದು ವೇಳೆ ರಾಜ್ಯದ ಇತರೆಡೆ ಕೋಳಿಜ್ವರ ಹಬ್ಬಿದರೂ ಅಲ್ಲೂ ಇದೇ ಮಾರ್ಗಸೂಚಿ ಅನ್ವಯ ಆಗುವ ಸಾಧ್ಯತೆ ಇದೆ.
ಭೋಪಾಲ್‌ನ ಎನ್‌ಐಎಚ್‌ಎಸ್‌ಎಡಿ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಆ್ಯನಿಮಲ್ ಡಿಸೀಸಸ್) ಲ್ಯಾಬ್ ಇವೆರಡು ಜಿಲ್ಲೆಗಳಲ್ಲಿ ಕೋಳಿಜ್ವರ ಪತ್ತೆ ಆಗಿರುವುದನ್ನು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಹಕ್ಕಿಜ್ವರ ಕಂಡುಬಂದ ಕೋಳಿಫಾರಂ ಅಥವಾ ಜಾಗದಿಂದ ಸುತ್ತಲ 3 ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ಪ್ರದೇಶವಾಗಿ ಗುರುತಿಸಬೇಕು. ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿಗಳನ್ನು ಕೊಂದು ಆಳವಾದ ಗುಂಡಿ ತೋಡಿ ಹೂಳಬೇಕು (ಮೊಟ್ಟೆಯನ್ನೂ ಕೂಡ). ಹೀಗೆ ಹೂಳುವವರು ಸುರಕ್ಷತೆಗೆ ಪಿಪಿಪಿ ದಿರಿಸು ಧರಿಸಬೇಕು. ಜೊತೆಗೆ ಹತ್ತು ದಿನಗಳ ಕಾಲ ಐಸೋಲೆಟ್ ಆಗಿರಬೇಕು. ಯಾವುದೇ ರೀತಿ ಜ್ವರ ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಂಯೋಜಿತ ರೋಗ ನಿಗಾ ಯೋಜನಾ ನಿರ್ದೇಶಕ ಡಾ.ಅನ್ಸಾರ್ ಅಹ್ಮದ್ ತಿಳಿಸಿದರು.
ಇದನ್ನೂ ಓದಿ: ರಾಜ್ಯಕ್ಕೆ ಹಕ್ಕಿ ಜ್ವರ ಲಗ್ಗೆ: ಸೋಂಕಿಗೆ 2 ಕೋಳಿ ಬಲಿ: ಸಚಿವ ಡಾ.ಎಂ.ಸಿ.ಸುಧಾಕರ್
ಕೋಳಿಫಾರಂನ ಮೊಟ್ಟೆ, ಮಾಂಸ, ತ್ಯಾಜ್ಯಗಳು ಸೋಂಕಿತ ಪ್ರದೇಶ ವ್ಯಾಪ್ತಿಯಿಂದ ಹೊರಬಾರದಂತೆ ನೋಡಿಕೊಂಡು ಎಲ್ಲವನ್ನೂ ಅಲ್ಲೇ ನಾಶಪಡಿಸಬೇಕು. 10 ಕಿ.ಮೀ. ವ್ಯಾಪ್ತಿಯ ಎಲ್ಲ ಪೌಲ್ಟ್ರಿಗಳು, ಮೊಟ್ಟೆ ಅಂಗಡಿಗಳನ್ನು ತಕ್ಷಣವೇ ಮುಚ್ಚಬೇಕು. ಜೊತೆಗೆ 10 ಕಿ.ಮೀ. ವ್ಯಾಪ್ತಿಯೊಳಗೆ ಜ್ವರ ಪೀಡಿತರ ಕುರಿತು ನಿಗಾ ವಹಿಸಬೇಕು ಎಂದು ತಿಳಿಸಿದೆ.
ಇನ್ನು, 70 ಡಿಗ್ರಿ ಸೆಂಟಿಗ್ರೇಡ್‌ಗಿಂತ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಬೇಯಿಸಿ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಬಹುದು. ಕೋಳಿ ಮಾಂಸದ ಅಡುಗೆ ತಯಾರು ಮಾಡುವವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅಡುಗೆಗಾಗಿ ಕೋಳಿಮಾಂಸವನ್ನು ತಯಾರು ಮಾಡಿದ ಬಳಿಕ ನಂಜುನಾಶಕದಿಂದ ಕೈಗಳನ್ನು ಶುಚಿಗೊಳಿಸಿಕೊಳ್ಳಬೇಕು ಎಂದು ಪಶುಸಂಗೋಪನಾ ಇಲಾಖೆ ಮಾರ್ಗಸೂಚಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ