* ಕೇವಲ 250 ರು.ಗೆ ಕೋರ್ಬಿವ್ಯಾಕ್ಸ್ ಲಸಿಕೆ
* ಭಾರತದ ಅತಿ ಅಗ್ಗದ ಲಸಿಕೆ ಹೆಗ್ಗಳಿಕೆ ಸಾಧ್ಯತೆ
* ಎರಡೂ ಡೋಸ್ ಸೇರಿ 500 ರು. ದರ ಸಂಭವ
ಹೈದರಾಬಾದ್(ಜೂ.06): ಸ್ಥಳೀಯ ‘ಬಯೋಲಾಜಿಕಲ್ ಇ’ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕೋರ್ಬಿವ್ಯಾಕ್ಸ್, ದೇಶದಲ್ಲೇ ಅತ್ಯಂತ ಅಗ್ಗದ ದರದ ಲಸಿಕೆ ಎಂಬ ಹಿರಿಮೆಗೆ ಪಾತ್ರವಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಸಂಸ್ಥೆ ಒಂದು ಡೋಸ್‌ಗೆ 250 ರು. ದರ ನಿಗದಿಪಡಿಸುವ ಸಾಧ್ಯತೆ ಇದೆ. ಇದು 2 ಡೋಸ್ ಪಡೆಯಬೇಕಾದ ಲಸಿಕೆ ಆಗಿರುವ ಕಾರಣ, 2 ಡೋಸ್‌ಗೆ ಗರಿಷ್ಠ 500 ರು. ದರ ಆಗಲಿದೆ. ಹೀಗಾಗಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ಗೆ ಹೋಲಿಸಿದರೆ ಕೋರ್ಬಿವ್ಯಾಕ್ಸ್ ದೇಶದಲ್ಲೇ ಅತಿ ಅಗ್ಗದ ಲಸಿಕೆ ಆಗಿರುವ ಸಾಧ್ಯತೆ ಇದೆ.
undefined
ಸದ್ಯ ಸೀರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ 300 ರು. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರು.ನಂತೆ ಮಾರಾಟ ಮಾಡುತ್ತಿದೆ. ಇನ್ನು ಭಾರತ್ ಬಯೋಟೆಕ್ ಸಂಸ್ಥೆ ತನ್ನ ಕೋವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ 400 ರು. ಮತ್ತು ಖಾಸಗಿ ಆಸ್ಪತ್ರೆಗಳಿಗೆ 1200 ರು.ನಂತೆ ಮಾರಾಟ ಮಾಡುತ್ತಿದೆ. ಇನ್ನು ರಷ್ಯಾದ ಸ್ಪುಟ್ನಿಕ್ ಲಸಿಕೆಗೆ ಡಾ. ರೆಡ್ಡೀಸ್ ಸಂಸ್ಥೆ 995 ರು. ದರ ನಿಗದಿಪಡಿಸಿದೆ.
ಕೋರ್ಬಿವ್ಯಾಕ್ಸ್ ಸಂಸ್ಥೆಯ ಲಸಿಕೆ ಈಗಾಗಲೇ 2 ಸುತ್ತಿನ ಕ್ಲಿನಿಕಲ್ ಟ್ರಯಲ್ ನಡೆಸಿದ್ದು, ಅದರಲ್ಲಿ ಉತ್ತಮ ಫಲಿತಾಂಶ ಬಂದಿದೆ. ಮೂರನೇ ಹಂತದ ಪ್ರಯೋಗ ನಡೆಯುತ್ತಿದ್ದು, ಶೀಘ್ರವೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವ ಇರಾದೆಯಲ್ಲಿದೆ. ಸಂಸ್ಥೆ ಮಾಸಿಕ 8 ಕೋಟಿ ಡೋಸ್ ಉತ್ಪಾದನೆಯ ಸಾಮರ್ಥ್ಯ ಹೊಂದಿದ್ದು, ಕೇಂದ್ರ ಸರ್ಕಾರ ಈಗಾಗಲೇ 30 ಕೋಟಿ ಡೋಸ್ ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ 1500 ಕೋಟಿ ರು. ಮುಂಗಡ ಪಾವತಿಸಲು ನಿರ್ಧರಿಸಿದೆ.