ನಿತ್ಯಾನಂದ ಪರಾರಿ!: ಗುಜರಾತ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

By Web Desk  |  First Published Nov 22, 2019, 7:49 AM IST

ನಿತ್ಯಾನಂದ ಪರಾರಿ!| ವಿದೇಶಕ್ಕೆ ಹೋಗಿದ್ದಾನೆ, ಹುಡುಕಾಟ ವ್ಯರ್ಥ| ಗುಜರಾತ್‌ ಪೊಲೀಸರಿಂದ ಸ್ಫೋಟಕ ಮಾಹಿತಿ| ನೇಪಾಳ ಮೂಲಕ ಈಕ್ವೆಡಾರ್‌ಗೆ?


ಬೆಂಗಳೂರು[ನ.22]: ಶಾಲೆಗೆ ಸೇರಿದ ವಿದ್ಯಾರ್ಥಿನಿಯರನ್ನು ಅಕ್ರಮವಾಗಿ ಬಂಧಿಸಿ, ದೇಣಿಗೆ ಸಂಗ್ರಹಕ್ಕೆ ಬಳಸಿಕೊಂಡ ಆರೋಪ ಹೊತ್ತಿರುವ ಕರ್ನಾಟಕದ ರಾಮನಗರ ಜಿಲ್ಲೆ ಬಿಡದಿ ನಿತ್ಯಾನಂದ ಧ್ಯಾನಾಶ್ರಮದ ಧರ್ಮಗುರು ನಿತ್ಯಾನಂದ ಒಂದು ವರ್ಷದ ಹಿಂದೆಯೇ ಭಾರತದಿಂದ ಪರಾರಿಯಾಗಿದ್ದಾನೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ವಿದ್ಯಾರ್ಥಿನಿಯರ ಪೋಷಕರು ನೀಡಿದ ದೂರಿನ ಅನ್ವಯ ತನಿಖೆ ನಡೆಸುತ್ತಿರುವ ಅಹಮದಾಬಾದ್‌ ಪೊಲೀಸರು, ತಕ್ಷಣಕ್ಕೆ ನಿತ್ಯಾನಂದನ್ನು ಭಾರತದಲ್ಲಿ ಹುಡುಕುವುದು ವ್ಯರ್ಥ ಪ್ರಯತ್ನ. ಕಾರಣ, ಕರ್ನಾಟಕದಲ್ಲಿ ತನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗುತ್ತಲೇ ಆತ ಭಾರತ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ಈ ಕುರಿತು ಇದುವರೆಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಜೊತೆಗೆ ಆತನ ಗಡೀಪಾರು ಕೋರಿ ಇದುವರೆಗೆ ಕೇಂದ್ರ ಗೃಹ ಸಚಿವಾಲಯ ಅಥವಾ ಗುಜರಾತ್‌ ಪೊಲೀಸರಿಂದ ಯಾವುದೇ ಕೋರಿಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Tap to resize

Latest Videos

ಮಕ್ಕಳಿಗೆ ನಿತ್ಯಾ ಏನ್ಮಾಡ್ತಾನೆ? ವಿಡಿಯೋದಲ್ಲಿ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಶಿಷ್ಯೆ

ಪರಾರಿ:

ವಿದ್ಯಾರ್ಥಿನಿಯರ ಅಕ್ರಮ ಬಂಧನ ಪ್ರಕರಣ ಸಂಬಂಧ ಗುರುವಾರ ಮಾಹಿತಿ ನೀಡಿರುವ ಅಹಮದಾಬಾದ್‌ ಗ್ರಾಮೀಣ ಪೊಲೀಸ್‌ ಅಧೀಕ್ಷಕ ಆರ್‌.ವಿ. ಅಸಾರಿ, ‘ನಿತ್ಯಾನಂದ ವಿದೇಶಕ್ಕೆ ಪರಾರಿಯಾಗಿದ್ದಾನೆ. ಹೀಗಾಗಿ ಆತನನ್ನು ಇಲ್ಲಿ ಹುಡುಕುವುದು ಸಮಯ ವ್ಯರ್ಥ ಮಾಡಿದಂತೆ. ಅಗತ್ಯ ಬಿದ್ದರೆ ಸೂಕ್ತ ಮಾಧ್ಯಮದ ಮೂಲಕ (ಭಾರತದ ವಿದೇಶಾಂಗ ಇಲಾಖೆ) ಮೂಲಕ ಆತನನ್ನು ವಿದೇಶದಿಂದಲೇ ಕಸ್ಟಡಿಗೆ ತೆಗೆದುಕೊಳ್ಳಲು ಯತ್ನಿಸುತ್ತೇವೆ. ಭಾರತಕ್ಕೆ ಆಗಮಿಸಿದರೆ ಆತನನ್ನು ಬಂಧಿಸುತ್ತೇವೆ’ ಎಂದಿದ್ದಾರೆ. ‘ಇನ್ನು ಮತ್ತಿಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿ ಒತ್ತೆ ಇರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರವೇ ನಿತ್ಯಾನಂದನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನ ಇಬ್ಬರು ಅನುಯಾಯಿಗಳನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಈವರೆಗೂ ನಿತ್ಯಾನಂದನ ವಿರುದ್ಧ ಬಲವಾದ ಸಾಕ್ಷ್ಯ ಸಿಕ್ಕಿಲ್ಲ. ವಿಚಾರಣೆ ಮುಂದುವರಿದಿದ್ದು, ಬಲವಾದ ಸಾಕ್ಷ್ಯ ಸಿಕ್ಕರೆ ಆತನ ಬಂಧನಕ್ಕೆ ಕ್ರಮ ಜರುಗಿಸಲಾಗುತ್ತದೆ’ ಎಂದು ಉಪ ಪೊಲೀಸ್‌ ವರಿಷ್ಠ ಕೆ.ಟಿ. ಕಮಾರಿಯಾ ಹೇಳಿದ್ದಾರೆ.

ನೇಪಾಳ ಮೂಲಕ ಪರಾರಿ?:

‘ಒಂದು ವರ್ಷದ ಹಿಂದೆಯೇ ನಿತ್ಯಾನಂದನ ಪಾಸ್‌ಪೋರ್ಟ್‌ ಅವಧಿ ಮುಗಿದಿತ್ತು. ಆದ್ದರಿಂದ ಆತ ನೇಪಾಳಕ್ಕೆ ತೆರಳಿ, ಅಲ್ಲಿ ನಕಲಿ ಪಾಸ್‌ಪೋರ್ಟ್‌ ಮೂಲಕ ದಕ್ಷಿಣ ಅಮೆರಿಕದ ಈಕ್ವೆಡಾರ್‌ಗೆ ತೆರಳಿರಬಹುದು’ ಎಂದು ಮೂಲಗಳು ಹೇಳಿವೆ. ರಿಪಬ್ಲಿಕ್‌ ಟೀವಿ ಸುದ್ದಿವಾಹಿನಿಯ ವರದಿ ಪ್ರಕಾರ ಆತ ಈಕ್ವೆಡಾರ್‌ನಲ್ಲಿ ಅಥವಾ ವೆಸ್ಟ್‌ ಇಂಡೀಸ್‌ ದ್ವೀಪ ಸಮೂಹದ ಟ್ರಿನಿಡಾಡ್‌ ಮತ್ತು ಟೊಬ್ಯಾಗೋದಲ್ಲಿ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಬಿಡದಿ ಬಿಟ್ಟು ಬಿಲ ಸೇರಿಕೊಂಡ ನಿತ್ಯಾನಂದ, ಸಿಕ್ಕಿತು ಮತ್ತೊಂದು ಪುರಾವೆ

‘ನಿತ್ಯಾನಂದ ಈಗಲೂ ವಿಡಿಯೋ ಮೂಲಕ ಪ್ರವಚನಗಳನ್ನು ನೀಡುತ್ತಿದ್ದರೂ ಅವನ್ನು ಎಲ್ಲಿಂದ ನೀಡುತ್ತಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಅಜ್ಞಾತ ಸ್ಥಳದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾನೆ’ ಎಂದು ಮೂಲಗಳು ಹೇಳಿವೆ.

ಈ ನಡುವೆ, ಬುಧವಾರ ನಿತ್ಯಾನಂದ ಅವರ ಮುಖ್ಯ ಆಶ್ರಮವಿರುವ ಬಿಡದಿಗೆ ಬಾಲಕಿಯರ ಅಕ್ರಮ ಬಂಧನ ಪ್ರಕರಣದ ತನಿಖೆ ನಡೆಸುತ್ತಿರುವ ಅಹಮದಾಬಾದ್‌ ಪೊಲೀಸರು ಬಂದಿದ್ದರು. ಆದರೆ ಅವರನ್ನು ಮುಖ್ಯ ಗೇಟ್‌ನಲ್ಲೇ ತಡೆಯಲಾಯಿತು. ಒಳಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಅಲ್ಲಿಗೆ ತೆರಳಿದ ಕೆಲವು ಮಾಧ್ಯಮ ಪ್ರತಿನಿಧಿಗಳನ್ನೂ ಗೇಟ್‌ನಲ್ಲೇ ತಡೆದ ವಾಚ್‌ಮನ್‌ಗಳು, ‘ನಿತ್ಯಾನಂದ ಅವರು ಊರಲ್ಲಿಲ್ಲ’ ಎಂದು ಹೇಳಿ ವಾಪಸ್‌ ಕಳಿಸಿದರು ಎಂದು ವರದಿಯಾಗಿದೆ.

click me!