ರಾಜಧಾನಿಯಲ್ಲಿ ಎಲ್ಲೂ ಸಿಗುತ್ತಿಲ್ಲ ಭಾರತ್‌ ಅಕ್ಕಿ; ಬೇಡಿಕೆ ಹೆಚ್ಚು ಕ್ಷಣಮಾತ್ರದಲ್ಲಿ ಖಾಲಿ!

By Kannadaprabha NewsFirst Published Mar 2, 2024, 5:03 AM IST
Highlights

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಭಾರತ್‌ ಅಕ್ಕಿ’ ಯೋಜನೆ ಜಾರಿಯಾಗಿ ಒಂದು ತಿಂಗಳಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ₹65ರಿಂದ ₹90 ವರೆಗೆ ದರ ಇರುವಾಗ ಕೇವಲ ₹29ಕ್ಕೆ ಕೇಜಿ ಅಕ್ಕಿ ಕೊಡುವ ಯೋಜನೆಗೆ ಶ್ರೀಸಾಮಾನ್ಯ ಬೆರಗಾಗಿದ್ದ. ಆದರೆ, ಯೋಜನೆ ಆರಂಭಗೊಂಡು ಕೆಲವೇ ದಿನಗಳಲ್ಲಿ ಯೋಜನೆಗೆ ಅಕ್ಕಿ ಕೊರತೆಯ ವಿಘ್ನ ಕಾಡಲು ಶುರುವಾಗಿದೆ.

ಬೆಂಗಳೂರು (ಫೆ.2): ‘ರಿಲಾಯನ್ಸ್‌, ಕಿರಾಣಿ ಅಂಗಡಿಗಳು ಸುತ್ತಿದರೂ, ಮೊಬೈಲ್‌ ವ್ಯಾನ್‌ಗಳಿಗಾಗಿ ಕಾದು ಕುಳಿತರೂ ಮೋದಿ ಅಕ್ಕಿ ಸಿಗುತ್ತಿಲ್ಲ. ಆರಂಭದ ಒಂದೆರಡು ವಾರ ಅಲ್ಲಲ್ಲಿ ಅಕ್ಕಿ ಸಿಕ್ಕಿದರೂ ಈಗಂತೂ ಅಕ್ಕಿಯ ಸುಳಿವೇ ಇಲ್ಲ..' ಇದು ಮಲ್ಲೇಶ್ವರದ ಸುಬ್ರಹ್ಮಣ್ಯ ಅವರ ಮಾತು. ಬಡ ಜನರಿಗೆ ಆಸರೆಯಾಗಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿದ್ದ ಕೆಜಿಗೆ ಕೇವಲ ₹29ಕ್ಕೆ ಅಕ್ಕಿ ಕೊಡುವ ಕೇಂದ್ರ ಸರ್ಕಾರದ ಭಾರತ್‌ ಅಕ್ಕಿಗಾಗಿ ಹುಡುಕಾಡಿ ಬೇಸತ್ತು ಬೇಸರ ಹೊರ ಹಾಕಿದ್ದು ಹೀಗೆ. ಒಬ್ಬರದ್ದು ಮಾತ್ರವಲ್ಲ, ಅನೇಕರ ಅಭಿಪ್ರಾಯ ಇದಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಭಾರತ್‌ ಅಕ್ಕಿ’ ಯೋಜನೆ ಜಾರಿಯಾಗಿ ಒಂದು ತಿಂಗಳಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ₹65ರಿಂದ ₹90 ವರೆಗೆ ದರ ಇರುವಾಗ ಕೇವಲ ₹29ಕ್ಕೆ ಕೇಜಿ ಅಕ್ಕಿ ಕೊಡುವ ಯೋಜನೆಗೆ ಶ್ರೀಸಾಮಾನ್ಯ ಬೆರಗಾಗಿದ್ದ. ಆದರೆ, ಯೋಜನೆ ಆರಂಭಗೊಂಡು ಕೆಲವೇ ದಿನಗಳಲ್ಲಿ ಯೋಜನೆಗೆ ಅಕ್ಕಿ ಕೊರತೆಯ ವಿಘ್ನ ಕಾಡಲು ಶುರುವಾಗಿದೆ.

ಮೈಸೂರು : ಭಾರತ್ ಅಕ್ಕಿ ಸಾರ್ವಜನಿಕರಿಗೆ ವಿತರಣೆಗೆ ಚಾಲನೆ

ರಾಜ್ಯದ ಎಲ್ಲೆಡೆ ಭಾರತ್‌ ಅಕ್ಕಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಎಷ್ಟೇ ಅಕ್ಕಿ ಬಂದರೂ ಕ್ಷಣಮಾತ್ರದಲ್ಲಿ ಖಾಲಿಯಾಗುತ್ತಿದೆ. ಇದರಿಂದ ಜನರಿಗೆ ವಿತರಿಸಲು ಅಕ್ಕಿ ದಾಸ್ತಾನಿನ ಕೊರತೆ ಎದುರಾಗಿದ್ದು, ಕೇಂದ್ರ ಸರ್ಕಾರ ಅಕ್ಕಿಗಾಗಿ ವರ್ತಕರು ಹಾಗೂ ಗಿರಣಿಗಳ ಮಾಲೀಕರ ಮೊರೆ ಹೋಗಿದೆ. ಬಡವರ ಪರವಾದ ಯೋಜನೆಯೊಂದು ಪೂರ್ವ ಸಿದ್ಧತೆಯಿಲ್ಲದೆ ಜಾರಿಗೆ ಬಂದಿದ್ದರಿಂದ ಅಡಕತ್ತರಿಗೆ ಸಿಲುಕಿಕೊಂಡಂತಾಗಿದೆ.

ಈ ನಡುವೆ ಸಾರ್ವಜನಿಕರು ಭಾರತ್‌ ಅಕ್ಕಿಗಾಗಿ ಯಾರನ್ನು ಕೇಳಬೇಕು? ಅಕ್ಕಿ ಎಲ್ಲಿ ಸಿಗುತ್ತದೆ? ಎಷ್ಟು ಪ್ರಮಾಣದಲ್ಲಿ ಖರೀದಿಸಬಹುದು? ಅಕ್ಕಿ ಹೊತ್ತ ಮೊಬೈಲ್‌ ವಾಹನಗಳನ್ನು ಹುಡುಕಿಕೊಂಡು ಎಲ್ಲೆಲ್ಲಿ ಅಲೆಯಬೇಕು ಎಂಬುದು ಗೊತ್ತಾಗದೆ ಗೊಂದಲಕ್ಕೆ ಸಿಲುಕಿಕೊಂಡಿದ್ದಾರೆ.

ಭಾರತ್‌ ಅಕ್ಕಿ ಬಗ್ಗೆ ಆರಂಭದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ಕೇಂದ್ರ ಸರ್ಕಾರ ಆ ನಂತರ ಸಮರ್ಪಕವಾಗಿ ಅಕ್ಕಿ ವಿತರಣೆ ಮಾಡುವಲ್ಲಿ ಸೋತಿದೆ. ರಿಲಾಯನ್ಸ್‌ ಮಾಲ್‌ಗಳಲ್ಲಿ ಅಕ್ಕಿ ಸಿಗುತ್ತಿಲ್ಲ. ಮೊಬೈಲ್‌ ವಾಹನ ಯಾರ ಕಣ್ಣಿಗೂ ಕಾಣುತ್ತಿಲ್ಲ. ಇದು ಐದು ಮೊಬೈಲ್‌ ವಾಹನಗಳು, ರಿಲಾಯನ್ಸ್‌ ಮಾಲ್‌ಗಳು ಇರುವ ಬೆಂಗಳೂರಿನ ಸ್ಥಿತಿಯಾದೆ, ಇನ್ನು ಬೇರೆ ಜಿಲ್ಲೆಗಳ ಪರಿಸ್ಥಿತಿ ಇದಕ್ಕಿಂತ ಭಿನ್ನ. ಒಂದೇ ಮೊಬೈಲ್‌ ವಾಹನ ಇಡೀ ಜಿಲ್ಲೆ, ತಾಲೂಕು ಸುತ್ತಿ ಅಕ್ಕಿ ಮಾರಾಟ ಮಾಡಬೇಕಿದ್ದು, ಮೊಬೈಲ್ ವಾಹನ ಕಾದು ಸುಸ್ತಾಗಿದ್ದೆ ಹೆಚ್ಚು ಎನ್ನುವುದು ಕಡೂರಿನ ಮಲ್ಲೇಶಪ್ಪ ಅವರ ಅಭಿಪ್ರಾಯ. 2 ಸಾವಿರ ಟನ್‌ ಮಾರಾಟ

ಬೆಂಗಳೂರಿನಲ್ಲಿ 5 ಮೊಬೈಲ್ ವ್ಯಾನ್‍ಗಳೂ ಸೇರಿದಂತೆ ರಾಜ್ಯ ಚಿಕ್ಕಮಗಳೂರು, ಮಂಡ್ಯ, ಮೈಸೂರು, ಉಡುಪಿ, ರಾಯಚೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಮೊಬೈಲ್‌ ವ್ಯಾನ್‌ ಮೂಲಕ ಮಾರಾಟ ಆಗುತ್ತಿದೆ. ಭಾರತ್ ಅಕ್ಕಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯಿದ್ದು, ಈವರೆಗೆ ಸುಮಾರು 2 ಸಾವಿರ ಟನ್ ಅಕ್ಕಿ ಮಾರಾಟ ಮಾಡಲಾಗಿದೆ. ಸದ್ಯ ರಿಲಾಯನ್ಸ್‌ ಮಾಲ್‌ಗಳಲ್ಲಿ ಅಕ್ಕಿ ಮಾರಾಟ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ಸ್ಟಾರ್‌ ಬಜಾರ್‌ನಲ್ಲೂ ಅಕ್ಕಿ ಲಭ್ಯವಾಗಲಿದೆ ಎಂದು ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್) ಹೇಳಿದೆ.

ಬಡ ಜನರಿಗೆ ಕೇಂದ್ರದ ಬಂಪರ್ ಕೊಡುಗೆ: ಭಾರತ್ ಬ್ರಾಂಡ್ ಅಕ್ಕಿ ಕೆಜಿಗೆ 29ರೂ. ತೊಗರಿಬೇಳೆ 60ರೂ.ಗೆ ಮಾರಾಟ!

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಸಮೀಪದ ನಾಫೆಡ್ ಕಚೇರಿ ಆವರಣ, ಮೊಬೈಲ್ ವ್ಯಾನ್‍ಗಳು ಮತ್ತು ರಿಲಯನ್ಸ್ ಮಾಲ್‌ಗಳಲ್ಲಿ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಆಸಕ್ತರು ಹೆಸರು ಮತ್ತು ಮೊಬೈಲ್‌ ಸಂಖ್ಯೆ ಕೊಟ್ಟು ಪ್ರತಿ ವ್ಯಕ್ತಿ 10 ಕೆ.ಜಿ. ಅಕ್ಕಿ ಖರೀದಿಸಬಹುದು. ಕೆಲವೆಡೆ ಗೋಧಿ ಹಿಟ್ಟು ಕೂಡ ವಿತರಿಸಲಾಗುತ್ತಿದೆ. ಪ್ರತಿ ಕೆ.ಜಿ.ಗೆ ₹27.50 ರಂತೆ 10 ಕೆ.ಜಿ. ಗೋಧಿ ಹಿಟ್ಟು ಖರೀದಿಸಬಹುದು. ಬೆಂಗಳೂರು ಹೊರತುಪಡಿಸಿ ಆಯ್ದ ಜಿಲ್ಲೆಗಳಲ್ಲಿ ಕಡಲೆ ಬೇಳೆಯನ್ನು ಪ್ರತಿ ಕೆ.ಜಿ.ಗೆ ₹60ರಂತೆ 5 ಕೆ.ಜಿ. ಬ್ಯಾಗ್ ನೀಡಲಾಗುತ್ತಿದೆ ಎಂದು ನಾಫೆಡ್‍ನ ಕರ್ನಾಟಕ ವಿಭಾಗದ ಮುಖ್ಯಸ್ಥೆ ಜ್ಯೋತಿ ಪಾಟೀಲ್ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಪ್ರಸ್ತುತ ದಕ್ಷಿಣ ಭಾರತದ ಕರ್ನಾಟಕದಲ್ಲಿ ಮಾತ್ರ ಅಕ್ಕಿ ಮಾರಾಟ ಆರಂಭಿಸಿದ್ದು, ಬೇರೆ ರಾಜ್ಯಗಳಲ್ಲಿ ಇನ್ನೂ ಆರಂಭವಾಗಿಲ್ಲ. ಭಾರತ್ ಅಕ್ಕಿ ಗುಣಮಟ್ಟದಿಂದ ಕೂಡಿದ್ದು, ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಅಕ್ಕಿಯ ಕೊರತೆ ಕಂಡು ಬರುತ್ತಿದೆ. ಬೇಡಿಕೆಗೆ ತಕ್ಕಂತೆ ಅಕ್ಕಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಕ್ಕಿಯ ದಾಸ್ತಾನು ಕಡಿಮೆಯಿದೆ. ಗಿರಣಿಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಸಂಗ್ರಹದ ನಂತರ ಅಕ್ಕಿ ಮಾರಾಟ ಪ್ರಕ್ರಿಯೆ ಜಾಸ್ತಿಯಾಗಲಿದೆ.

-ಜ್ಯೋತಿ ಪಾಟೀಲ್, ಕರ್ನಾಟಕ ವಿಭಾಗದ ಮುಖ್ಯಸ್ಥೆ, ನಾಫೆಡ್

click me!