ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸಮರ್ಥ್, ವರ್ಕ್ ಫ್ರಂ ಹೋಮ್‌ನಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ (ಡಿ.09): ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಕೆಲವು ದಿನ ಮನೆಯಿಂದ ಕೆಲಸ ಮಾಡುವುದಾಗಿ ಆಫೀಸಿನಲ್ಲಿ ಕೇಳಿಕೊಂಡು ವರ್ಕ್ ಫ್ರಂ ಹೋಮ್ ಮೇಲೆ ಮನೆಗೆ ಹೋಗಿದ್ದಾನೆ. ಮನೆಯಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿದವನೇ ಹಾರ್ಟ್ ಅಟ್ಯಾಕ್‌ನಿಂದ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ.
ಹೌದು, ಹೃದಯಘಾತದಿಂದ ಸಾಫ್ಟ್‌ವೇರ್ ಇಂಜಿನಿಯರ್ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ. ಈ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ, ರಾಮೇನಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ. ಮೃತ ಇಂಜಿನಿಯರ್‌ನನ್ನು ಸಮರ್ಥ್ (26) ಎಂದು ಗುರುತಿಸಲಾಗಿದೆ. ಗ್ರಾಮದ ಕಾಫಿ ಬೆಳೆಗಾರರಾದ ಹೇಮಂತ್ ಹಾಗೂ ಸರಳ ಎಂಬುವವರ ಪುತ್ರ ಸಮರ್ಥ್ ಚಿಕ್ಕವನಿಂದಲೇ ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸುತ್ತಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದನು. ಓದು ಮುಗಿದ ನಂತರ ಪ್ರತಿಭಾವಂತನಾಗಿದ್ದ ಸಮರ್ಥ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದನು.
ಮದುವೆ ವಯಸ್ಸಿಗೆ ಬಂದಿದ್ದ ಮಗನಿಗೆ ರಾತ್ರಿ ಪಾಳಿಯ ಕೆಲಸ ಇದ್ದುದರಿಂದ ನೀನು ಮನೆಗೆ ಬಂದು ಇಲ್ಲಿಂದಲೇ ಕೆಲಸ ಮಾಡಬಹುದಾ ಎಂದು ಮನೆಯಲ್ಲಿ ತಂದೆ ತಾಯಿ ಕೇಳಿದ್ದಾರೆ. ಈ ಬಗ್ಗೆ ಕಚೇರಿಯಲ್ಲಿ ವರ್ಕ್ ಫ್ರಂ ಹೋಮ್ ಕೇಳಿಕೊಂದು ಕೆಲವು ದಿನಗಳ ಹಿಂದೆ ಮನೆಗೆ ಹೋಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಮನೆಯಲ್ಲಿ ರಾತ್ರಿಯಿಂದ ಬೆಳಗಾಗುವವರೆಗೂ ಕೆಲಸ ಮಾಡುತ್ತಿದ್ದ ಸಮರ್ಥ್ ಬೆಳಗ್ಗಿನ ಜಾವ ಎಲ್ಲರೂ ಎದ್ದು ದೈನಿಕ ಕೆಲಸ ಶುರು ಮಾಡುವ ವೇಳೆಗೆ ಮಲಗುತ್ತಿದ್ದನು. ನಂತರ, ಸಂಜೆ ವೇಳೆ ಎದ್ದು ಒಂದಷ್ಟು ದಿನಚರಿ ಮುಗಿಸಿದ ನಂತರ ಪುನಃ ಕೆಲಸ ಆರಂಭಿಸುತ್ತಿದ್ದನು.
ಇದನ್ನೂ ಓದಿ: ಹೆಂಡ್ತಿ ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಮನನೊಂದು ನೇಣಿಗೆ ಶರಣಾದ ಗಂಡ; ಮಗಳಿಗೊಂದು ಗಿಫ್ಟ್ ತಂದಿಟ್ಟ!
ಆದರೆ, ಮಮೊನ್ನೆ ರಾತ್ರಿಯ ಕೆಲಸ ಮುಗಿಸಿದ ಸಮರ್ಥ್ ಎಂದಿನಂತೆ, ಬೆಳಗ್ಗೆ ತಿಂಡಿ ತಿಂದು ಮಲಗಿ ಸಂಜೆ ಮೇಲೆ ಎದ್ದಿದ್ದಾನೆ. ಸಂಜೆ ಹಾಸಿಗೆಯಿಂದ ಎದ್ದು ನೀರು ಕುಡಿದಿದ್ದಾನೆ. ತಕ್ಷಣವೇ ತಾನಿದ್ದ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ನಿದ್ದೆ ಇಲ್ಲದೇ ಅಸ್ವಸ್ಥಗೊಂಡಿರಬಹುದು ಎಂದು ಮನೆಯವರು ಕೂಡಲೇ ಆಸ್ಪತ್ರೆಗೆ ಕರೆ ಮಾಡಿ ವೈದ್ಯರನ್ನು ಮನೆಗೆ ಕರೆಸಿಕೊಂಡಿದ್ದಾರೆ. ವೈದ್ಯರು ಬಂದು ತಪಾಸಣೆ ಮಾಡಿದಾಗ ಅದಾಗಲೇ ಇಂಜಿನಿಯರ್ ಸಮರ್ಥ ಜೀವ ಹೋಗಿದೆ. ಆತನ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.