ಪೊಲೀಸರಿಗೆ ಜಾತಿ ಹೇಳಿಲ್ವಾ? ಹಾಗಿದ್ರೆ ನೀವು ಬುಡಗ ಜಂಗಮ!

Published : May 21, 2025, 05:24 AM IST
ಪೊಲೀಸರಿಗೆ ಜಾತಿ ಹೇಳಿಲ್ವಾ? ಹಾಗಿದ್ರೆ ನೀವು ಬುಡಗ ಜಂಗಮ!

ಸಾರಾಂಶ

ಅಪರಾಧ ಪ್ರಕರಣಗಳಲ್ಲಿ ದೂರುದಾರರು ಜಾತಿ ಹೇಳದೆ ಹೋದರೂ ಪ್ರಾಥಮಿಕ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಪೊಲೀಸರೇ ಜಾತಿ ನಮೂದಿಸುತ್ತಾರೆ. ಅದರಲ್ಲಿ ಎಲ್ಲರೂ ಬುಡಗ ಜಂಗಮರು..! ಇದು ಜಾತಿ ಸಮೀಕ್ಷಾ ವರದಿ ಅಲ್ಲ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಮೇ.21): ಅಪರಾಧ ಪ್ರಕರಣಗಳಲ್ಲಿ ದೂರುದಾರರು ಜಾತಿ ಹೇಳದೆ ಹೋದರೂ ಪ್ರಾಥಮಿಕ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಪೊಲೀಸರೇ ಜಾತಿ ನಮೂದಿಸುತ್ತಾರೆ. ಅದರಲ್ಲಿ ಎಲ್ಲರೂ ಬುಡಗ ಜಂಗಮರು..! ಇದು ಜಾತಿ ಸಮೀಕ್ಷಾ ವರದಿ ಅಲ್ಲ. ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುವ ಎಫ್‌ಐಆರ್‌ಗಳನ್ನು ಪರಿಶೀಲಿಸಿದಾಗ ಜಾತಿ ಉಲ್ಲೇಖ ವಿವಾದ ಬೆಳಕಿಗೆ ಬಂದಿದೆ. ಈ ವಿಚಾರವು ಪೊಲೀಸರ ಕಣ್ತಪ್ಪಿನಿಂದಾಗಿರುವ ಪ್ರಮಾದವೇ ಅಥವಾ ತಾಂತ್ರಿಕ ದೋಷವೇ ಎಂಬುದು ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಮಗಳ ಜತೆ ಅನುಚಿತ ವರ್ತನೆ ಆರೋಪದ ಮೇರೆಗೆ ಕಬ್ಬನ್ ಪಾರ್ಕ್ ಠಾಣೆಗೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿ ದೂರು ಕೊಟ್ಟಿದ್ದರು. ಈ ದೂರಿನ ಮೇರೆಗೆ ದಾಖಲಾದ ಎಫ್‌ಐಆರ್‌ನಲ್ಲಿ ದೂರುದಾರರು ಬುಡಗ ಜಂಗಮ ಎಂದು ಉಲ್ಲೇಖವಾಗಿದೆ. ಅದೇ ರೀತಿ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅ‍ವರನ್ನು ಮೈದಾನಕ್ಕೆ ನುಗ್ಗಿ ಅಪ್ಪಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಸ್ಟಾರ್‌ಗಳು ವಿಡಿಯೋ ಹಾಕಿದ್ದರು. 

ಈ ಪ್ರಕರಣದ ಆರೋಪಿಗಳ ಜಾತಿ ಹೆಸರನ್ನು ಬುಡಗ ಜಂಗಮ ಎಂದು ನಮೂದಿಸಲಾಗಿದೆ. ಆದರೆ ಈ ಎರಡು ಪ್ರಕರಣಗಳ ದೂರುದಾರರು ಅಥವಾ ಆರೋಪಿತರು ಆ ಸಮುದಾಯಕ್ಕೆ ಸೇರಿದ್ದವರಲ್ಲ ಎನ್ನಲಾಗಿದೆ. ಹೀಗಿದ್ದರೂ ಜಾತಿ ಕಾಲಂನಲ್ಲಿ ಅನ್ಯ ಜಾತಿ ಹೆಸರನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಇದೇ ರೀತಿ ಸೈಬರ್ ವಂಚನೆ ಕೃತ್ಯಗಳು ಹಾಗೂ ಕಳ್ಳತನ ಹೀಗೆ ಹಲವು ಪ್ರಕರಣಗಳ ಎಫ್‌ಐಆರ್‌ನಲ್ಲಿ ಸಹ ಅನ್ಯಜಾತಿಯವರಿಗೆ ಬುಡಗ ಜಂಗಮ ಎಂದು ನಮೂದಿಸಿರುವುದು ಪತ್ತೆಯಾಗಿದೆ.

ಇಂದಿರಾ ಗಾಂಧಿ ಕನಸು ಸಿದ್ದು ನನಸು: ಸಿಎಂಗೆ ರಾಹುಲ್ ಗಾಂಧಿ ಶ್ಲಾಘನೆ

ಪೊಲೀಸರ ತಪ್ಪು: ಎಸ್‌ಸಿಆರ್‌ಬಿ: ಎಫ್‌ಐಆರ್‌ನ ಜಾತಿ ಕಾಲಂ ಭರ್ತಿಯಲ್ಲಿ ಸ್ಥಳೀಯ ಪೊಲೀಸರ ತಪ್ಪಿನಿಂದ ಅನ್ಯ ಸಮುದಾಯದವರಿಗೆ ಬುಡಗ ಜಂಗಮ ಎಂದು ಉಲ್ಲೇಖವಾಗಿರುವುದಾಗಿ ರಾಜ್ಯ ಅಪರಾಧ ದಾಖಲಾತಿ ಕೇಂದ್ರ (ಎಸ್‌ಸಿಆರ್‌ಬಿ) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವೆಬ್‌ಸೈಟ್‌ನಲ್ಲಿ ಎಬಿಸಿಡಿ ಹೀಗೆ ಇಂಗ್ಲೀಷ್ ಅಕ್ಷರಗಳಲ್ಲಿ ಜಾತಿಗಳನ್ನು ಅಡಕಗೊಳಿಸಲಾಗಿದೆ. ಅಂತೆಯೇ ಎಫ್‌ಐಆರ್ ಅಪ್‌ಲೋಡ್ ಮಾಡುವಾಗ ‘ಬಿ’ ಅಕ್ಷರ ಒತ್ತಿದರೆ ಆ ಅಕ್ಷರದಿಂದ ಆರಂಭವಾಗುವ ಬ್ರಾಹ್ಮಣ, ಬುಡಗ ಜಂಗಮ ಸೇರಿದಂತೆ ಎಲ್ಲ ಜಾತಿಗಳು ಬರುತ್ತವೆ. ಹೀಗಾಗಿ ಎಫ್‌ಐಆರ್‌ನಲ್ಲಿ ಬುಡಗ ಜಂಗಮ ಜಾತಿ ಉಲ್ಲೇಖದ ತಾಂತ್ರಿಕ ದೋಷಕ್ಕೆ ಪೊಲೀಸರೇ ಕಾರಣರಾಗಿದ್ದಾರೆ ಎಂದು ಎಸ್‌ಸಿಆರ್‌ಬಿ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌