ಬೆಂಗಳೂರು: ನಗರದ 35 ರಸ್ತೆಗಳಲ್ಲಿ ಇನ್ನು ಪೇ ಆ್ಯಂಡ್‌ ಪಾರ್ಕ್‌!

Kannadaprabha News   | Kannada Prabha
Published : Dec 20, 2025, 06:32 AM IST
Bengaluru Pay and park now available on 35 roads in the city

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ನಗರದ ಹೃದಯ ಭಾಗದ 35 ಪ್ರಮುಖ ರಸ್ತೆಗಳಲ್ಲಿ ಆನ್‌-ರೋಡ್ ಪಾವತಿಸಿದ ಪಾರ್ಕಿಂಗ್ ವ್ಯವಸ್ಥೆ ಜಾರಿ.. ಈ ಯೋಜನೆಯಡಿ, ಬೈಕ್‌ಗೆ ಗಂಟೆಗೆ 15 ರೂ. ಮತ್ತು ಕಾರಿಗೆ 30 ರೂ. ಶುಲ್ಕ ವಿಧಿಸಲಾಗುವುದು. ಈ ಕ್ರಮವು ಅನಧಿಕೃತ ಪಾರ್ಕಿಂಗ್ ತಡೆಯುವ ಮತ್ತು ವಾರ್ಷಿಕ 16 ಕೋಟಿ ಆದಾಯ.

ಬೆಂಗಳೂರು (ಡಿ.20): ಚರ್ಚ್‌ ಸ್ಟ್ರೀಟ್‌, ಬ್ರಿಗೇಡ್‌ ರಸ್ತೆ, ಮ್ಯೂಜಿಯಂ ರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ ಸೇರಿ ನಗರದ ಹೃದಯ ಭಾಗದಲ್ಲಿರುವ 35 ರಸ್ತೆಗಳ ಅಕ್ಕ-ಪಕ್ಕದಲ್ಲಿ ನಿಮ್ಮ ಬೈಕ್‌ ಮತ್ತು ಕಾರು ನಿಲ್ಲಿಸುವುದಕ್ಕೆ ಇನ್ಮುಂದೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಹಣ ವಸೂಲಿ ಮಾಡಲಿದೆ.

- ಒಂದು ತಾಸಿಗೆ ಬೈಕ್‌ಗೆ 15 ರು, ಕಾರಿಗೆ 30 ರು., ಇಡೀ ದಿನಕ್ಕೆ ಬೈಕ್‌ಗೆ 75 ರು, ಕಾರಿಗೆ 150 ರು. ಪಾವತಿಸಬೇಕಾಗಲಿದೆ. ಇದರೊಂದಿಗೆ ಮಾಸಿಕ ಪಾಸ್‌ ವ್ಯವಸ್ಥೆ ಸಹ ಜಾರಿಗೊಳಿಸಲಾಗುತ್ತಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕೇಂದ್ರ ನಗರ ಪಾಲಿಕೆಯು ಆನ್‌ ರೋಡ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಯೋಜನೆ ರೂಪಿಸಿದೆ. ಒಟ್ಟು 35 ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಮುಂದಾಗಿದ್ದು, ಈ ಮೂಲಕ ವಾರ್ಷಿಕ ಬರೋಬ್ಬರಿ 16 ಕೋಟಿ ರು. ಸಂಗ್ರಹಿಸುವುದಕ್ಕೆ ಯೋಜನೆ ಹಾಕಿಕೊಂಡಿದೆ.

ಎಂ.ಜಿ. ರಸ್ತೆಯ ಮಾದರಿಯಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸುವುದಕ್ಕೆ ಸ್ಥಳ ಮಾರ್ಕಿಂಗ್‌ ಮಾಡಲಾಗುತ್ತದೆ. ಗುರುತಿಸಿದ ಸ್ಥಳದಲ್ಲಿ ಮಾತ್ರ ವಾಹನ ನಿಲ್ಲಿಸುವುದಕ್ಕೆ ಅವಕಾಶ ಇರಲಿದೆ.

1,252 ವಾಹನ ಪಾಕಿಂಗ್‌:

ಆನ್‌ರೋಡ್‌ ಪಾಕಿಂಗ್‌ಗೆ ಗುರುತಿಸಲಾದ 35 ರಸ್ತೆಯಲ್ಲಿ ಒಟ್ಟು 1,252 ವಾಹನಗಳನ್ನು ಏಕಕಾಲಕ್ಕೆ ನಿಲುಗಡೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪೈಕಿ 926 ಬೈಕ್‌ ಹಾಗೂ 326 ಕಾರುಗಳನ್ನು ನಿಲ್ಲಿಸಬಹುದಾಗಿದೆ

23 ಕಿ.ಮೀ ರಸ್ತೆಯಲ್ಲಿ ಪಾರ್ಕಿಂಗ್‌:

ಕೇಂದ್ರ ನಗರ ಪಾಲಿಕೆಯು ಗುರುತಿಸಲಾಗಿರುವ 35 ರಸ್ತೆಯಲ್ಲಿ ಬೈಕ್‌ ಮತ್ತು ಕಾರು ನಿಲ್ಲಿಸುವುದಕ್ಕೆ ಒಟ್ಟು 11 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಆಹ್ವಾನಿಸಲಾಗಿದೆ. ಸುಮಾರು 23.33 ಕಿ.ಮೀ ಉದ್ದದ ರಸ್ತೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಗುತ್ತಿಗೆ ಪಡೆದವರು ಕೇಂದ್ರ ನಗರ ಪಾಲಿಕೆಗೆ ವಾರ್ಷಿಕವಾಗಿ ಹಣ ಪಾವತಿ ಮಾಡಬೇಕಾಗಲಿದೆ. ಮೂರು ವರ್ಷಕ್ಕೆ ಟೆಂಡರ್ ಆಹ್ವಾನಿಸಲಾಗಿದ್ದು, ಅಗತ್ಯವಿದ್ದರೆ ಮತ್ತೆ 2 ವರ್ಷ ವಿಸ್ತರಣೆಗೆ ಅವಕಾಶ ನೀಡುವುದಕ್ಕೆ ತೀರ್ಮಾನಿಸಲಾಗಿದೆ.

ಅನಧಿಕೃತ ಪಾರ್ಕಿಂಗ್‌ ನಿಷೇಧ: ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ವಾಹನ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ. ಅನಧಿಕೃತವಾಗಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌ ಮಾಡುವ ವಾಹನಗಳಿಗೆ ದಂಡ ವಿಧಿಸುವುದಕ್ಕೂ ಅವಕಾಶ ನೀಡಲಾಗಿದೆ. ಸದ್ಯ ಈ ರಸ್ತೆಗಳಲ್ಲಿ ಈಗಾಗಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅದಕ್ಕೆ ಅನುಗುಣವಾಗಿಯೇ ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಸಿಕ ಪಾಸ್‌: ಬೈಕ್‌ಗೆ ₹ 1500, ಕಾರಿಗೆ 3 ಸಾವಿರ

ನಗರದ ಕೇಂದ್ರ ಭಾಗ ಆಗಿರುವುದರಿಂದ ಕಚೇರಿ ಕೆಲಸಕ್ಕೆ ಬರುವ ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಮಾಸಿಕ ಪಾಸ್‌ ವ್ಯವಸ್ಥೆ ಸಹ ಜಾರಿಗೊಳಿಸಲಾಗುತ್ತಿದೆ. ಕಾರಿಗೆ 3 ಸಾವಿರ ರು. ಹಾಗೂ ಬೈಕ್‌ಗೆ 1500 ರು, ದರ ನಿಗದಿ ಪಡಿಸಲಾಗುತ್ತಿದೆ.

ಆನ್‌ ರೋಡ್‌ ಪಾರ್ಕಿಂಗ್‌ ರಸ್ತೆಗಳು ಯಾವುವು?

ದತ್ತಾತ್ರೇಯ ದೇವಸ್ಥಾನದ ವಾರ್ಡ್ 2ನೇ ದೇವಸ್ಥಾನದ ರಸ್ತೆ, ಸಂಪಿಗೆ ರಸ್ತೆ, ರೈಲ್ವೆ ಪ್ಯಾರಲಾಲ್ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಇಬ್ರಾಹಿಂ ಸಾಹೀಬ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್‌ನಿಂದ ಒಪಿಎಚ್ ರಸ್ತೆ, ಮೇನ್ ಗಾರ್ಡ್ ರಸ್ತೆಯಲ್ಲಿ ಸಫೀನಾ ಪ್ಲಾಜಾದಿಂದ ಡಿಸ್ಪೆನ್ಸರಿ ರಸ್ತೆ, ಡಿಕನ್ಸನ್ ರಸ್ತೆ, ಮಾವಳ್ಳಿ ಟ್ಯಾಂಕ್ ಬಂಡ್ ರಸ್ತೆ, ಸುಂಕೇನಹಳ್ಳಿ ವಾರ್ಡ್‌ನಲ್ಲಿ ಡಿವಿಜಿ ರಸ್ತೆ, ಶಂಕರ ಮಠ ರಸ್ತೆ, ಪಿಎಂಕೆ ರಸ್ತೆ, ಮಿಲ್ಲರ್ಸ್ ರಸ್ತೆ ಜಂಕ್ಷನ್, ಪ್ಲಾನೆಟೇರಿಯಂ ರಸ್ತೆ, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಸೇಂಟ್ ಜಾನ್ಸ್ ರಸ್ತೆ, ವಾಣಿ ವಿಲಾಸ ರಸ್ತೆ , ವಾಸವಿ ಟೆಂಪಲ್ ಸ್ಟ್ರೀಟ್, ಕನಕಪುರ ರಸ್ತೆ, ಡಯಗೋನಲ್ ರಸ್ತೆ, ಪಟ್ಟಾಲಮ್ಮ ರಸ್ತೆ, ಟಿ. ಮರಿಯಪ್ಪ ರಸ್ತೆ, ಕ್ಯಾಂಬ್ರಿಡ್ಜ್ ರಸ್ತೆ, ವುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ಮ್ಯಾಗ್ರತ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ಕ್ರೆಸೆಂಟ್ ರಸ್ತೆ, ಬ್ರಿಗೇಡ್ ರಸ್ತೆ, ಲ್ಯಾಂಗ್‌ಫೋರ್ಡ್ ರಸ್ತೆ, ಈಜಿಪುರ ರಸ್ತೆ, 100 ಅಡಿ ಮತ್ತು 80 ಅಡಿ ರಸ್ತೆ ಇಂದಿರಾ ನಗರ. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 35 ರಸ್ತೆಗಳಲ್ಲಿ ಆನ್‌ರೋಡ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಎಲ್ಲೆಂದರಲ್ಲಿ ಅನಧಿಕೃತ ವಾಹನ ನಿಲುಗಡೆಗೆ ಕಡಿವಾಣ ಹಾಕಲಾಗುವುದು. ಸರ್ಕಾರದ ನಿಯಮ ಪ್ರಕಾರ ಶುಲ್ಕ ವಿಧಿಸಲಾಗುವುದು.

- ಮಹೇಶ್ವರ್‌ ರಾವ್‌, ಮುಖ್ಯ ಆಯುಕ್ತರು, ಜಿಬಿಎ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮಕ್ಕೆ ಅವಕಾಶವೇ ಇಲ್ಲ! ಕೆಇಎ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು: ಹೇಗಿದೆ ಗೊತ್ತಾ ಇಂದಿನ ಸಿದ್ಧತೆ?
ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ