
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಮಾ.26): ರಾಜಧಾನಿ ನಾಗರಿಕರಿಗೆ ಮತ್ತೊಂದು ‘ಶುಲ್ಕದ ಬರೆ’ ಎಳೆಯಲು ಸದ್ದಿಲ್ಲದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಿದ್ಧತೆ ನಡೆಸಿದ್ದು, ವಿದೇಶದ ಮಾದರಿಯಲ್ಲಿ ನಗರ ವ್ಯಾಪ್ತಿಯಲ್ಲಿ ‘ಪೇ ಪಾರ್ಕಿಂಗ್’ ವ್ಯವಸ್ಥೆ ಜಾರಿಗೆ ಮುಂದಾಗಿದೆ.ಯೋಜನೆ ಜಾರಿ ಬಳಿಕ ರಸ್ತೆಗಳಲ್ಲಿ ಕಂಡ ಕಂಡಲ್ಲಿ ವಾಹನ ನಿಲ್ಲಿಸದೇ ಸೂಚಿತ ಸ್ಥಳಗಳಲ್ಲಿ ಮಾತ್ರ ವಾಹನ ನಿಲ್ಲಿಸಬೇಕು. ಇದಕ್ಕೆ ಗಂಟೆ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ಪಾವತಿಸಬೇಕು. ಆ ನಿಯಮ ಉಲ್ಲಂಘಿಸಿದರೆ ಟೋಯಿಂಗ್ ಜೊತೆಗೆ ಹೆಚ್ಚುವರಿ ದಂಡ ಬೀಳಲಿದೆ..!ಕೆಲವೇ ದಿನಗಳಲ್ಲಿ ಜಯನಗರ, ಎಚ್‌ಎಸ್‌ಆರ್ ಲೇಔಟ್, ಕಬ್ಬನ್ ಪಾರ್ಕ್ ಹಾಗೂ ಕೋರಮಂಗಲ ಸೇರಿದಂತೆ ಪ್ರಮುಖ ಸ್ಥಗಳಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಜಿಬಿಎ ಸಜ್ಜಾಗಿದೆ. ಈ ಪಾರ್ಕಿಂಗ್ ನಿರ್ವಹಣೆ ಗುತ್ತಿಗೆ ತಮಿಳುನಾಡಿನ ಚೆನ್ನೈ ಮೂಲದ ಖಾಸಗಿ ಕಂಪನಿ ಪಾಲಾಗಿದೆ. ಈ ವ್ಯವಸ್ಥೆ ಅನುಷ್ಠಾನ ಸಂಬಂಧ ಸಂಚಾರ ವಿಭಾಗದ ಪೊಲೀಸರ ಜತೆ ಬುಧವಾರ ಜಿಬಿಎ ಮಹತ್ವದ ಸಭೆ ನಡೆಸಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ವಿದೇಶಗಳಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಇದ್ದು, ಜಾಗತಿಕ ಮಟ್ಟದಲ್ಲಿ ಐಟಿ ಸಿಟಿ ಎಂದು ಹೆಸರು ಪಡೆದಿರುವ ಬೆಂಗಳೂರಿನಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆಗೆ ಜಿಬಿಎ ಯೋಜಿಸಿದೆ. ಮೊದಲ ಹಂತದಲ್ಲಿ ಪ್ರಮುಖ ರಸ್ತೆಗಳಲ್ಲಿ ಅನುಷ್ಠಾನಗೊಳಿಸಿ ನಂತರ ಹಂತ ಹಂತವಾಗಿ ನಗರ ವ್ಯಾಪ್ತಿ ಕಾರ್ಯರೂಪಕ್ಕಿಳಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಪೇ ಪಾರ್ಕಿಂಗ್ ವ್ಯವಸ್ಥೆಯೂ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಿರ್ವಹಣೆಯಾಗಲಿದೆ. ಇದಕ್ಕೆ ಆ್ಯಪ್ ಅನ್ನು ಸಹ ಖಾಸಗಿ ಕಂಪನಿ ಅಭಿವೃದ್ಧಿಪಡಿಸಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನಿರ್ವಹಣೆಯ ಹೊಣೆಗಾರಿಕೆಯನ್ನು ಆ ಕಂಪನಿಗೆ ವಹಿಸಲಾಗಿದೆ. ಆಯಾ ರಸ್ತೆಗಳಲ್ಲಿ ವಾಹನ ನಿಲುಗಡೆ ಸ್ಥಳಗಳನ್ನು ಗುರುತಿಸಿ ಆ್ಯಪ್‌ನಲ್ಲಿ ಅಡಕ ಮಾಡಲಾಗಿದೆ. ಉದಾಹರಣೆ-ಜಯನಗರಕ್ಕೆ ಹೋಗಬೇಕಾದರೆ ನೀವು ಆ್ಯಪ್‌ನಲ್ಲಿ ಸರ್ಚ್ ಮಾಡಿದರೆ ಎಲ್ಲಿಲ್ಲಿ ವಾಹನ ನಿಲ್ಲಿಸಬಹುದು ಎಂಬ ಮಾಹಿತಿ ಸಿಗಲಿದೆ. ಆ ಸ್ಥಳಗಳಲ್ಲಿ ವಾಹನ ನಿಲ್ಲಿಸಬೇಕು. ಬೇರೆಡೆ ನಿಲ್ಲಿಸಿದರೆ ಆ ವಾಹನಗಳ ಬಗ್ಗೆ ಟೋಯಿಂಗ್ ಸಿಬ್ಬಂದಿಗೆ ಸಂದೇಶ ರವಾನೆಯಾಗಲಿದೆ. ಕೂಡಲೇ ಆ ವಾಹನವನ್ನು ಸಿಬ್ಬಂದಿ ಟೋಯಿಂಗ್ ಮಾಡಿ ಪಾರ್ಕಿಂಗ್ ಸ್ಥಳಕ್ಕೆ ತರಲಿದ್ದಾರೆ.
ಪೇ ಪಾರ್ಕಿಂಗ್‌ನಲ್ಲಿ ಪ್ರತಿ ಗಂಟೆಗೆ ದ್ವಿಚಕ್ರ ವಾಹನಗಳಿಗೆ 30 ರು ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 50 ರು ಶುಲ್ಕ ನಿಗದಿಪಡಿಸಲಾಗಿದೆ. ಪೇ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ ಕೂಡಲೇ ಆಟೋಮ್ಯಾಟಿಕ್ ಆಗಿ ಶುಲ್ಕ ಬೀಳುತ್ತದೆ. ಇದು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅತ್ಯಾಧುನಿಕ ವ್ಯವಸ್ಥೆ ಇದಾಗಿದ್ದು, ಅಲ್ಲೇ ಕ್ಯೂಆರ್ ಕೋಡ್ ಬಳಸಿ ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ ತೆರಳಬಹುದು. ಇದು ಕ್ಯಾಶ್‌ಲೆಸ್ ಹಾಗೂ ಮಾನವ ರಹಿತವಾಗಿ ನಿರ್ವಹಣೆ ಇರುತ್ತದೆ.
ಪೇ ಪಾರ್ಕಿಂಗ್‌ಗೆ ಕೆಲ ವಸತಿ ಪ್ರದೇಶಗಳ ರಸ್ತೆಗಳನ್ನು ಆಯ್ಕೆ ಮಾಡಿರುವುದಕ್ಕೆ ಸಂಚಾರ ವಿಭಾಗದ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಾಹನ ನಿಲುಗಡೆ ಪ್ರದೇಶಗಳಾಗಿ ರಾಜ್ಯ ಪತ್ರ ಸಹ ಹೊರಡಿಸಲಾಗಿದೆ. ಹೀಗಿರುವಾಗ ಆ ರಸ್ತೆಗಳಲ್ಲಿ ನಿಲುಗಡೆಗೆ ಶುಲ್ಕ ವಿಧಿಸಿದರೆ ಜನರ ವಿರೋಧ ವ್ಯಕ್ತವಾಗಲಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಆದರೆ ಈ ಮಾತಿಗೆ ಜಿಬಿಎ ಅಧಿಕಾರಿಗಳು, ಆ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಪೇ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಮಾರುಕಟ್ಟೆಗಳು ಹಾಗೂ ಶಾಲಾ-ಕಾಲೇಜುಗಳ ಬಳಿ ನಿಲ್ಲುವ ವಾಹನಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲು ಜಿಬಿಎ ಪ್ರಸ್ತಾಪಿಸಿದೆ. ಮಾರ್ಕೆಟ್‌ಗಳಿಗೆ ಖರೀದಿಗೆ ಬರುವ ಜನರು ಹಾಗೂ ಶಾಲೆಗಳಿಗೆ ಮಕ್ಕಳನ್ನು ಬಿಡಲು ಮತ್ತು ಕರೆದೊಯ್ಯಲು ಬರುವ ಪೋಷಕರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಂಡರೆ ರಸ್ತೆ ಬದಿ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಲಿದೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಆಹಾರ ಪದಾರ್ಥ ಹಾಗೂ ತರಕಾರಿ ಮಾರಾಟ ಮಾಡಲು ಅವಕಾಶವಿರುವುದಿಲ್ಲ. ಅಲ್ಲದೆ ಹೋಟೆಲ್ ಹಾಗೂ ಅಂಗಡಿಗಳಿಗೆ ಬಿಸಿ ತಟ್ಟಲಿದೆ. ರಸ್ತೆಯಲ್ಲಿ ವಾಹನ ನಿಲುಗಡೆ ಅವಕಾಶವಿಲ್ಲದೆ ಹೋದರೆ ಹೋಟೆಲ್‌ಗಳ ಗ್ರಾಹಕರ ಕೊರತೆ ಉದ್ಭವಿಸಲಿದೆ. ಆರ್ಥಿಕವಾಗಿ ಸಹ ಹೊಡೆತ ಬೀಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಬಿಎ ಚುನಾವಣೆಗೆ ಸರ್ಕಾರ ಸಿದ್ಧತೆ ನಡೆಸಿರುವ ಹೊತ್ತಿನಲ್ಲೇ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಜಿಬಿಎ ಅಧಿಕಾರಿಗಳು ಉತ್ಸುಕತೆ ತೋರಿರುವುದು ಚರ್ಚೆಗೆ ಕಾರಣವಾಗಿದೆ. ಈ ಪಾರ್ಕಿಂಗ್ ವ್ಯವಸ್ಥೆಯನ್ನೇ ಸರ್ಕಾರದ ವಿರುದ್ಧ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ ಪ್ರಯೋಗಿಸಲು ಅಸ್ತ್ರವಾಗಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ