
ಬೆಂಗಳೂರು (ಸೆ.1): ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ನಾಲ್ಕನೇ ರೈಲಿನ ಸಂಚಾರ ಪರೀಕ್ಷೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.
ಆರ್.ವಿ.ರಸ್ತೆ - ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಈ ಮಾರ್ಗವನ್ನು ಕಳೆದ ಆ.10ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಸದ್ಯ ಮೂರು ರೈಲುಗಳು 25 ನಿಮಿಷಕ್ಕೊಮ್ಮೆ ಆವರ್ತನದಲ್ಲಿ ಇಲ್ಲಿ ಸಂಚರಿಸುತ್ತಿವೆ. ಇದೀಗ ನಾಲ್ಕನೇ ರೈಲಿನ ಸೇರ್ಪಡೆಯಿಂದಾಗಿ 18-20 ನಿಮಿಷಕ್ಕೆ ರೈಲುಗಳ ನಡುವಿನ ಸಂಚಾರ ತಗ್ಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.
ನಾಲ್ಕನೇ ರೈಲಿನ ಆರು ಬೋಗಿಗಳು ಕೊಲ್ಕತ್ತಾದಿಂದ ಹೊರಟು ಆಗಸ್ಟ್ 15ರಂದು ಎಲ್ಲವೂ ಹೆಬ್ಬಗೋಡಿ ಮೆಟ್ರೋ ಡಿಪೋ ತಲುಪಿವೆ. ಇಲ್ಲಿ ಜೋಡಣೆ ಮಾಡಲಾಗಿದ್ದು, ಸಿಬಿಟಿಸಿ ಸಿಗ್ನಲಿಂಗ್ ತಂತ್ರಜ್ಞಾನದ ಪರೀಕ್ಷೆ ನಡೆಸಲಾಗುತ್ತಿದೆ. ರಾತ್ರಿ ವೇಳೆ ಸಂಚಾರ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಪರೀಕ್ಷೆಗೆ ಸಮಯ ಹಿಡಿಯಲಿದೆ. ಇದು ಮುಗಿದ ಬಳಿಕ ಸಂಚಾರ ಸೇವೆಗೆ ಅನುವು ಮಾಡಿಕೊಡಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಈ ಮಾರ್ಗ ಆರಂಭದ ಬಳಿಕ ಸರಾಸರಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಲಕ್ಷದಿಂದ 9.15 ಲಕ್ಷಕ್ಕೆ ತಲುಪಿದೆ. ರೈಲುಗಳ ಕೊರತೆಯಿಂದಾಗಿ ಹಳದಿ ಮಾರ್ಗದ ಆರ್.ವಿ.ರಸ್ತೆ, ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣ ಸೇರಿ ಕೆಲ ನಿಲ್ದಾಣಗಳಲ್ಲಿ ಜನ ದಟ್ಟಣೆ ಉಂಟಾಗುತ್ತಿದೆ. ರೈಲಿಗಾಗಿ 25 ನಿಮಿಷ ಕಾಯುವಂತಾಗಿದ್ದು, ಶೀಘ್ರವೇ ಇನ್ನಷ್ಟು ರೈಲುಗಳನ್ನು ಸೇರ್ಪಡೆ ಮಾಡುವಂತೆ ಈ ಭಾಗದ ಪ್ರಯಾಣಿಕರ ಒತ್ತಾಯ ಹೆಚ್ಚಾಗಿದೆ.
ಸೆಪ್ಟೆಂಬರ್ ಅಂತ್ಯಕ್ಕೆ ಇನ್ನೊಂದು ರೈಲು ಕೊಲ್ಕತ್ತಾದ ತಿತಾಘಡ್ ರೈಲ್ ಸಿಸ್ಟಂನಿಂದ ಬರುವ ನಿರೀಕ್ಷೆಯಿದೆ. ಇನ್ನೆರಡು ರೈಲುಗಳು ಸೇರ್ಪಡೆ ಆದಲ್ಲಿ 11ಲಕ್ಷ ಪ್ರಯಾಣಿಕರ ಸಂಖ್ಯೆ ದಾಟಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ