ಕೋಗಿಲು ಲೇಔಟ್ ತೆರವು: ಸರ್ಕಾರದ ಮನೆಗಾಗಿ ಪಟ್ಟು ಹಿಡಿದವರು ರಾತ್ರೋರಾತ್ರಿ ಪರಾರಿ! 25 ಅರ್ಹರು ಮಾತ್ರ ಪತ್ತೆ!

Published : Jan 12, 2026, 10:23 AM IST
Bengaluru Kogilu Layout

ಸಾರಾಂಶ

ಯಲಹಂಕದ ಕೋಗಿಲು ಲೇಔಟ್‌ನಲ್ಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ಪೊಲೀಸ್ ತನಿಖೆ ಚುರುಕಾಗುತ್ತಿದ್ದಂತೆ, ಹೊರರಾಜ್ಯದ ಅನೇಕ ಕುಟುಂಬಗಳು ರಾತ್ರೋರಾತ್ರಿ ಜಾಗ ಖಾಲಿ ಮಾಡುತ್ತಿದ್ದು, 167 ಒತ್ತುವರಿದಾರರಲ್ಲಿ ಕೇವಲ 25 ಮಂದಿ ಮಾತ್ರ ಅರ್ಹರಿರಬಹುದು ಎಂದು ಶಂಕಿಸಲಾಗಿದೆ.

ಬೆಂಗಳೂರು (ಜ.12): ಯಲಹಂಕ ಸಮೀಪದ ಕೋಗಿಲು ಲೇಔಟ್‌ನಲ್ಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಈಗ ಹೊಸ ತಿರುವು ಪಡೆದುಕೊಂಡಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆಯನ್ನು ತೀವ್ರಗೊಳಿಸುತ್ತಿದ್ದಂತೆಯೇ, ಲೇಔಟ್‌ನಲ್ಲಿದ್ದ ಅಕ್ರಮ ನಿವಾಸಿಗಳು ಜಾಗ ಖಾಲಿ ಮಾಡುತ್ತಿದ್ದಾರೆ.

ಖಾಲಿಯಾಗುತ್ತಿದೆ ಲೇಔಟ್

ಕಳೆದ ಕೆಲವು ದಿನಗಳಿಂದ ಪೊಲೀಸರು ಒತ್ತುವರಿದಾರರ ಹಿನ್ನೆಲೆ ಮತ್ತು ದಾಖಲೆಗಳನ್ನು ಜಾಲಾಡಲು ಆರಂಭಿಸಿದ್ದಾರೆ. ತನಿಖೆ ಚುರುಕಾಗುತ್ತಿದ್ದಂತೆಯೇ, ಲೇಔಟ್‌ನಲ್ಲಿದ್ದ ಉತ್ತರ ಪ್ರದೇಶ, ಆಂಧ್ರಪ್ರದೇಶ ಮೂಲದ ಅನೇಕ ಕುಟುಂಬಗಳು ಮನೆಗಳನ್ನು ಖಾಲಿ ಮಾಡಿ ಪರಾರಿಯಾಗುತ್ತಿವೆ. ವಿಶೇಷವಾಗಿ ಕೋಗಿಲು ಲೇಔಟ್‌ನ ಫಕೀರ್ ಬಡಾವಣೆಯ ಕೆಳಭಾಗದಲ್ಲಿದ್ದ ಹೊರರಾಜ್ಯದ ಕುಟುಂಬಗಳು ಈಗ ಕಾಣಿಸುತ್ತಿಲ್ಲ. 'ನಮ್ಮ ಬಳಿ ಎಲ್ಲಾ ಸರಿಯಾದ ದಾಖಲೆಗಳಿವೆ' ಎಂದು ವಾದಿಸುತ್ತಿದ್ದವರೂ ಕೂಡ ಪೊಲೀಸ್ ವಿಚಾರಣೆಗೆ ಹೆದರಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

25 ಜನರ ಮೇಲೆ ಮಾತ್ರ ಒಲವು

ಒಟ್ಟು 167 ಒತ್ತುವರಿದಾರರ ಪೈಕಿ ಕೇವಲ 25 ಜನರು ಮಾತ್ರ ಮನೆ ಪಡೆಯಲು ಅರ್ಹರು ಎಂಬ ಪ್ರಾಥಮಿಕ ವರದಿ ಲಭ್ಯವಾಗಿದೆ. ಆದರೆ, ಈ 25 ಜನರ ಹಿನ್ನೆಲೆಯನ್ನೂ ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಅವರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಮೂಲ ಸ್ಥಳದ ಬಗ್ಗೆ ತನಿಖೆ ನಡೆಯುತ್ತಿದೆ. ಅರ್ಹರ ಪಟ್ಟಿ ಇನ್ನೂ ಅಂತಿಮವಾಗದ ಕಾರಣ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸಲ್ಲಿಕೆಯಾಗಿಲ್ಲ.

ಸರ್ಕಾರದ ಎಚ್ಚರಿಕೆಯ ನಡೆ

ಅಕ್ರಮವಾಗಿ ನೆಲೆಸಿರುವವರು ಮತ್ತು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಸೌಲಭ್ಯ ಪಡೆಯಲು ಯತ್ನಿಸುತ್ತಿರುವವರ ವಿರುದ್ಧ ಸರ್ಕಾರ ಕಠಿಣ ನಿಲುವು ತಳೆದಿದೆ. ಅಂತಿಮ ವರದಿ ಬರುವವರೆಗೂ ಮನೆ ಹಂಚಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದ್ದು, ಪ್ರತಿಯೊಂದು ದಾಖಲೆಯನ್ನು ಹತ್ತು ಬಾರಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಿನಲ್ಲಿ, ಕೋಗಿಲು ಲೇಔಟ್‌ನಲ್ಲಿ ದಶಕಗಳಿಂದ ನಡೆಯುತ್ತಿದ್ದ ಅಕ್ರಮಗಳಿಗೆ ಈಗ ಬ್ರೇಕ್ ಬೀಳುವ ಲಕ್ಷಣಗಳು ದಟ್ಟವಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರದಾ-ಬೇಡ್ತಿ ನದಿ ಜೋಡಣೆ: ಭುಗಿಲೆದ್ದ ಜಲ ಸಂಘರ್ಷ, ಪರವಾಗಿ ನಿಂತ ಬಸವರಾಜ್ ಬೊಮ್ಮಾಯಿ
Karnataka News Live: ಕೋಗಿಲು ಲೇಔಟ್ ತೆರವು - ಸರ್ಕಾರದ ಮನೆಗಾಗಿ ಪಟ್ಟು ಹಿಡಿದವರು ರಾತ್ರೋರಾತ್ರಿ ಪರಾರಿ! 25 ಅರ್ಹರು ಮಾತ್ರ ಪತ್ತೆ!