ಬಿಎಂಟಿಸಿ ಟಿಕೆಟ್ ಹಣ ಗುಳುಂ: ಸ್ವಂತ UPI ಸ್ಕ್ಯಾನರ್ ಬಳಸಿ ಹಣ ಲೂಟಿ ಮಾಡುತ್ತಿದ್ದ 3 ಕಂಡಕ್ಟರ್‌ಗಳ ಅಮಾನತು!

Published : Jan 20, 2026, 03:01 PM IST
BMTC Bus Conductor

ಸಾರಾಂಶ

ಬಿಎಂಟಿಸಿ ಆದಾಯಕ್ಕೆ ಕನ್ನ ಹಾಕುತ್ತಿದ್ದ ಮೂವರು ನಿರ್ವಾಹಕರನ್ನು ಅಮಾನತುಗೊಳಿಸಲಾಗಿದೆ. ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್‌ ಬಳಸಿ ಟಿಕೆಟ್ ಹಣವನ್ನು ಸ್ವಂತ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ ಈ ಅಕ್ರಮವನ್ನು ಸಂಸ್ಥೆ ಪತ್ತೆಹಚ್ಚಿದೆ.  ಬಿಎಂಟಿಸಿ ಶೀಘ್ರದಲ್ಲೇ ಡೈನಾಮಿಕ್ ಕ್ಯೂಆರ್ ಕೋಡ್ ಜಾರಿ ಮಾಡಲಿದೆ

ಬೆಂಗಳೂರು (ಜ.20): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಆದಾಯಕ್ಕೆ ಕನ್ನ ಹಾಕುತ್ತಿದ್ದ ಮೂವರು ನಿರ್ವಾಹಕರನ್ನು (BMTC Bus Conductors) ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಅಧಿಕೃತ ಸ್ಕ್ಯಾನರ್‌ಗಳ ಬದಲಿಗೆ ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್‌ಗಳನ್ನು (Personal UPI Scanner) ಬಳಸಿ ಟಿಕೆಟ್ ಮೊತ್ತವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ ಗಂಭೀರ ಅಕ್ರಮವನ್ನು ಸಂಸ್ಥೆಯು ಪತ್ತೆಹಚ್ಚಿದೆ.

ತಪಾಸಣೆ ವೇಳೆ ಬಯಲಾದ ಅಕ್ರಮ

ಡಿಸೆಂಬರ್ 2025 ರಲ್ಲಿ ನಡೆಸಲಾದ ನಿಯಮಿತ ತಪಾಸಣೆಯ ಸಂದರ್ಭದಲ್ಲಿ ಬಿಎಂಟಿಸಿ ತನಿಖಾ ತಂಡವು ಈ ಅಕ್ರಮವನ್ನು ಪತ್ತೆಹಚ್ಚಿದೆ. ಈ ಮೂವರು ಸಿಬ್ಬಂದಿಗಳು ಟಿಕೆಟ್ ವಿತರಣೆಗಾಗಿ ಬಿಎಂಟಿಸಿ ಒದಗಿಸಿದ ಅಧಿಕೃತ ಯುಪಿಐ ಸ್ಕ್ಯಾನರ್‌ಗಳನ್ನು ಬಳಸದೆ, ಪ್ರಯಾಣಿಕರಿಂದ ಬರುವ ಹಣವನ್ನು ತಮ್ಮ ವೈಯಕ್ತಿಕ ಕ್ಯೂಆರ್ ಕೋಡ್ (QR Code) ಮೂಲಕ ಸಂಗ್ರಹಿಸುತ್ತಿದ್ದರು. ಇದು ಸಂಸ್ಥೆಯ ನಿಯಮಗಳು ಮತ್ತು ಹಣಕಾಸು ಶಿಸ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ಅಮಾನತುಗೊಂಡ ಸಿಬ್ಬಂದಿ ಮತ್ತು ಲೂಟಿ ಮಾಡಿದ ಮೊತ್ತದ ವಿವರ:

  • ಸುಮಾರು 1 ಲಕ್ಷಕ್ಕೂ ಅಧಿಕ ರೂಪಾಯಿಗಳನ್ನು ಈ ನಿರ್ವಾಹಕರು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ.
  • ಸುರೇಶ್ (ಟೋಕನ್ ನಂ. 9574, ಡಿಪೋ 23): ಇವರು ಬರೋಬ್ಬರಿ 47,257 ರೂ. ಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದರು.
  • ಮಂಚೇಗೌಡ (ಟೋಕನ್ ನಂ. 3460, ಡಿಪೋ 3): ಡ್ರೈವರ್ ಕಮ್ ಕಂಡಕ್ಟರ್ ಆಗಿದ್ದ ಇವರು 54,358 ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು.
  • ಅಶ್ವಕ್ ಖಾನ್ (ಟೋಕನ್ ನಂ. 10151, ಡಿಪೋ 14): ಇವರಿಂದ 3,206 ರೂ. ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ.
  • ಈ ಆರೋಪಗಳು ವಿಚಾರಣೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಸಾರಿಗೆ ಸಚಿವರ ಖಡಕ್ ಸೂಚನೆ

ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕಾಪಾಡುವುದು ಸಂಸ್ಥೆಯ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಮುಂದೆ ಬರಲಿದೆ ಡೈನಾಮಿಕ್ ಕ್ಯೂಆರ್ ಕೋಡ್!

ಇಂತಹ ವಂಚನೆಗಳನ್ನು ತಡೆಗಟ್ಟಲು ಬಿಎಂಟಿಸಿ ಶೀಘ್ರದಲ್ಲೇ ಡೈನಾಮಿಕ್ ಕ್ಯೂಆರ್-ಆಧಾರಿತ (Dynamic QR) ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಇದು ಹೆಚ್ಚು ಸುರಕ್ಷಿತ ಮತ್ತು ಪಾರದರ್ಶಕವಾಗಿದ್ದು, ಟಿಕೆಟ್ ಹಗರಣಗಳಿಗೆ ಮುಕ್ತಿ ಹಾಡಲಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ, ಎಲ್ಲಾ ಡಿಪೋ ವ್ಯವಸ್ಥಾಪಕರು ಸಿಬ್ಬಂದಿಯ ಮೇಲೆ ನಿಗಾ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಆರ್‌ಟಿಒ ಬ್ರಹ್ಮಾಂಡ ಭ್ರಷ್ಟಾಚಾರ, ಕೂತಲ್ಲೇ ಗುಜರಾತ್, ಮಹಾರಾಷ್ಟ್ರ ವಾಹನಗಳಿಗೆ ಎಫ್‌ಸಿ!
ನಟಿ ಪವಿತ್ರಾ ಗೌಡಗೆ 'ಮನೆ ಊಟ' ಕೊಡಲೇಬೇಡಿ; ಸೆಷನ್ಸ್ ಕೋರ್ಟ್ ಊಟದ ಆದೇಶಕ್ಕೆ ಹೈಕೋರ್ಟ್ ತಡೆ!