'ಗ್ಯಾರಂಟಿಗಳ ಅಡ್ಡಪರಿಣಾಮದಿಂದ ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತಾಗಿದೆ'- ಎಚ್‌ಡಿಕೆ

By Ravi Janekal  |  First Published Sep 11, 2023, 12:36 PM IST

ಸಾಲಸೋಲ ಮಾಡಿ ಕ್ಯಾಬ್, ಆಟೋ ಓಡಿಸಿಕೊಂಡು ಬದುಕುತ್ತಿದ್ದವರು ಬೀದಿ ಪಾಲಾಗಿದ್ದಾರೆ. ನಿತ್ಯದ ಬದುಕು ಸಾಗಿಸುವುದೇ ದುಸ್ತರ ಎನ್ನುವ ಸ್ಥಿತಿಯಲ್ಲಿ ಅವರಿದ್ದಾರೆ. ಇನ್ನು, ಸರಕಾರಿ ಸಾರಿಗೆಯಷ್ಟೇ ಉತ್ತಮವಾಗಿ ಸೇವೆ ಒದಗಿಸುತ್ತಿರುವ ಖಾಸಗಿ ಬಸ್ ಜಾಲವನ್ನು ಸರಕಾರ ಹಾಳು ಮಾಡಿದೆ. ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ಸೆ.11): ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆ ಒಕ್ಕೂಟ ಸೋಮವಾರ(ಸೆ.11) ಬೆಂಗಳೂರು ಬಂದ್ ಗೆ ಕರೆ ನೀಡಿದೆ. ಆಟೋ ಟ್ಯಾಕ್ಸಿ ಕ್ಯಾಬ್ ಸೇವೆಗಳು ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ ಇದರಿಂದಾಗಿ ಸಾರ್ವಜನಿಕರು ಸಹ ತೊಂದರೆಪಡುವಂತಾಗಿದೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದು 'ಗ್ಯಾರಂಟಿಗಳ ಅಡ್ಡಿ ಪರಿಣಾಮ'ದ ತೀವ್ರತೆ ಜನರಿಗೆ ತಟ್ಟುತ್ತಿದೆ ಎಂದು ರಾಜ್ಯ ಸರ್ಕಾರದ ಶಕ್ತಿ ಯೋಜನೆ ಬಗ್ಗೆ ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಅಡ್ಡಪರಿಣಾಮದಿಂದ ಜನರಿಗೆ ತೊಂದರೆಯಾಗುವುತ್ತಿರುವುದಲ್ಲದೆ, ಸರ್ಕಾರಿ ಸೌಲಭ್ಯಗಳ ಹಂಚಿಕೆಯಲ್ಲಿನ ಅಸಮಾನತೆ, ಪಕ್ಷಪಾತವು ಅರಾಜಕತೆ ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ 'ಶಕ್ತಿ' ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ ಎಂದು ಕಿಡಿಕಾರಿದ್ದಾರೆ.

Tap to resize

Latest Videos

ಈ ಬಂದ್ ನಿಂದ ಸರಕಾರಿ ಸಾರಿಗೆಗೆ ಪರ್ಯಾಯವಾಗಿದ್ದ ಖಾಸಗಿ ಸಾರಿಗೆ ಜಾಲ ಸಂಪೂರ್ಣ ಸ್ಥಗಿತವಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು, ವಿಮಾನ ನಿಲ್ದಾಣಕ್ಕೆ ತೆರಳುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಸಾಗಣೆಯಲ್ಲಿ ವ್ಯತ್ಯಯ ಆಗಿ ಸರ್ಕಾರದ ಪ್ರತಿಷ್ಠೆಯಿಂದ ಸಾಮಾನ್ಯ ಜನರು ಸಂಕಷ್ಟಪಡುವಂತಾಗಿದೆ ಎಂದಿದ್ದಾರೆ.

ಖಾಸಗಿ ಸಾರಿಗೆ ಒಕ್ಕೂಟದೊಂದಿಗೆ ಕಾಟಾಚಾರಕ್ಕೆ ಕರೆದು ಮಾತನಾಡುವುದಲ್ಲ. ವಾಸ್ತವತೆಗೆ ತಕ್ಕಂತೆ ಕಷ್ಟದಲ್ಲಿರುವ ಅವರಿಗೆ ನೆರವಾಗಬೇಕು. ನುಡಿದಂತೆಯೇ ನಡೆದು, 'ಗ್ಯಾರಂಟಿ ಬಾಧಿತರ' ಬದುಕಿಗೆ ಪರಿಹಾರ ಒದಗಿಸಬೇಕು ತಕ್ಷಣವೇ ಬಂದ್ ನಿರತರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಖಾಸಗಿ ಸಾರಿಗೆ ಚಾಲಕರೊಂದಿಗೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಸರಕಾರವು ಖಾಸಗಿ ಸಾರಿಗೆ ಒಕ್ಕೂಟದವರ ಬೇಡಿಕೆಗಳನ್ನು ಪ್ರತಿಷ್ಠೆ ಪಕ್ಕಕ್ಕಿಟ್ಟು ಮಾನವೀಯತೆಯಿಂದ ಪರಿಶೀಲಿಸಬೇಕು. ಅವರ ಬೇಡಿಕೆಗಳು ಈಡೇರಿಸಲಾಗದ ಅಸಾಧ್ಯ ಡಿಮ್ಯಾಂಡ್ ಗಳೇನೂ ಅಲ್ಲ. ಅವರಿಗೂ ಕುಟುಂಬಗಳಿವೆ, ತಂದೆತಾಯಿ, ಮಕ್ಕಳು ಇರುತ್ತಾರೆ ಎನ್ನುವುದನ್ನು ಸರಕಾರ ಮರೆಯಬಾರದು ಎಂದಿದ್ದಾರೆ. 

ಸಾಲಸೋಲ ಮಾಡಿ ಕ್ಯಾಬ್, ಆಟೋ ಓಡಿಸಿಕೊಂಡು ಬದುಕುತ್ತಿದ್ದವರು ಬೀದಿ ಪಾಲಾಗಿದ್ದಾರೆ. ನಿತ್ಯದ ಬದುಕು ಸಾಗಿಸುವುದೇ ದುಸ್ತರ ಎನ್ನುವ ಸ್ಥಿತಿಯಲ್ಲಿ ಅವರಿದ್ದಾರೆ. ಇನ್ನು, ಸರಕಾರಿ ಸಾರಿಗೆಯಷ್ಟೇ ಉತ್ತಮವಾಗಿ ಸೇವೆ ಒದಗಿಸುತ್ತಿರುವ ಖಾಸಗಿ ಬಸ್ ಜಾಲವನ್ನು ಸರಕಾರ ಹಾಳು ಮಾಡಿದೆ. ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತೆ ಮಾಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
 

click me!