
ಹಾಸನ (ಸೆ.21): ಬೇಲೂರಿನಲ್ಲಿ ಗಣಪತಿ ಮೂರ್ತಿಯ ಮೇಲೆ ಚಪ್ಪಲಿ ಇಟ್ಟಿದ್ದ ಪ್ರಕರಣದ ಕುರಿತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೇವಲ ಮಾನಸಿಕ ಅಸ್ವಸ್ಥರ ಕೃತ್ಯವಲ್ಲ, ಬದಲಾಗಿ ಹಿಂದೂ ಸಮಾಜವನ್ನು ಕೆರಳಿಸುವ ಒಂದು ವ್ಯವಸ್ಥಿತ ಷಡ್ಯಂತ್ರ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೇಲೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಘಟನೆಯ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು. 'ಯಾಕೆ ಹಿಂದೂ ಸಮಾಜವನ್ನೇ ಪದೇ ಪದೇ ಕೆಣಕುತ್ತಾರೆ? ಹಿಂದೆಯೂ ಹಸುವಿನ ಕೆಚ್ಚಲು ಕತ್ತರಿಸಿದಾಗ, ಗಣೇಶೋತ್ಸವದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದಾಗಲೂ ಇದೇ ರೀತಿ 'ಮಾನಸಿಕ ಅಸ್ವಸ್ಥರು' ಅಥವಾ 'ಕಿಡಿಗೇಡಿಗಳು' ಎಂಬ ಕಥೆಗಳನ್ನು ಹೇಳಲಾಗುತ್ತದೆ. ಇದು ಮಾನಸಿಕ ಅಸ್ವಸ್ಥತೆಯೋ ಅಥವಾ ಅಸ್ವಸ್ಥರ ನಾಟಕವೋ? ಎಂದು ಪ್ರಶ್ನಿಸಿದರು.
ಘಟನೆ ನಡೆಸಿದ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಪೊಲೀಸರು ಹೇಳಿರುವುದಕ್ಕೆ ಸಿ.ಟಿ. ರವಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 'ಒಂದು ವೇಳೆ ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದರೆ, ಮುಖ ಮುಚ್ಚಿಕೊಂಡು ದೇವಾಲಯಕ್ಕೆ ಪ್ರವೇಶಿಸುವಷ್ಟು ಬುದ್ಧಿ ಆಕೆಗೆ ಹೇಗೆ ಬಂತು? ಗಣೇಶನ ಮೂರ್ತಿ ಮೇಲೆ ಚಪ್ಪಲಿ ಇಡುವಷ್ಟು ಪ್ರಜ್ಞೆ ಅವಳಿಗಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು. ಇದು ಶಾಂತಿ ಕದಡಲು ಮತ್ತು ಹಿಂದೂ-ಮುಸ್ಲಿಂ ನಡುವೆ ಜಗಳ ತಂದಿಡಲು ನಡೆಯುತ್ತಿರುವ ಷಡ್ಯಂತ್ರದ ಒಂದು ಭಾಗ. ಇದಕ್ಕೆ ದೇಶಿ ಹಾಗೂ ವಿದೇಶಿ ರಾಷ್ಟ್ರವಿರೋಧಿ ಶಕ್ತಿಗಳ ಬೆಂಬಲ ಇರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಪೊಲೀಸರು ಕೇವಲ ಊಹೆಗಳ ಮೇಲೆ ಹೇಳಿಕೆಗಳನ್ನು ನೀಡದೆ, ತಕ್ಷಣವೇ ಸಮಗ್ರ ತನಿಖೆ ನಡೆಸಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದರು. 'ಮುಖದಲ್ಲಿ ಕ್ಲಾರಿಟಿ ಸಿಗುತ್ತಿಲ್ಲ, ಅನುಮಾನದ ಮೇಲೆ ತಂಡಗಳನ್ನು ರಚಿಸಿದ್ದೇವೆ ಎಂಬ ಉತ್ತರ ನಮಗೆ ಬೇಕಾಗಿಲ್ಲ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಟಕಟೆಗೆ ನಿಲ್ಲಿಸಬೇಕು. ಪೂರ್ತಿ ತಲೆ ಕೆಟ್ಟವರು ಇಂತಹ ಕೆಲಸ ಮಾಡುವುದಿಲ್ಲ. ಇಂತಹ ಕೆಲಸಗಳ ಹಿಂದೆ ಬೇರೆಯವರ ಕೈವಾಡ ಇರಬಹುದು, ಅವರನ್ನು ಬಳಸಿಕೊಂಡು ಬೇರೆಯವರು ಈ ಕೃತ್ಯ ಎಸಗಿರಬಹುದು' ಎಂದರು.
ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟ ಆಡಬೇಡಿ ಎಂದು ಎಚ್ಚರಿಸಿದ ಅವರು, 'ಭಾವನೆಗಳ ಜೊತೆ ಆಟವಾಡಿದರೆ ಏನಾಗುತ್ತದೆ ಎಂದು ಬ್ರಿಟಿಷರು ಹಿಂದೆಯೇ ಅನುಭವಿಸಿದ್ದಾರೆ. ಈ ಹೋರಾಟದಲ್ಲಿ ತಾವು ಬೇಲೂರು ಜನರೊಂದಿಗೆ ಇರುವುದಾಗಿ ಸಿ.ಟಿ. ರವಿ ಸ್ಪಷ್ಟಪಡಿಸಿದರು.
ಮಹಿಳೆ ಪತ್ತೆಯಾಗಿಲ್ಲವೆಂದರೆ ನಾಳೆ ಬೇಲೂರು ಬಂದ್:
ಬೇಲೂರಲ್ಲಿ ಗಣಪತಿಗೆ ಚಪ್ಪಲಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಅವರು, ಸಂಜೆ ವೇಳೆಗೆ ಆರೋಪಿ ಬಗ್ಗೆ ಪತ್ತೆ ಮಾಡಿಲ್ಲವೆಂದರೆ ನಾಳೆ ಬೆಳಗ್ಗೆಯಿಂದ ಬೇಲೂರು ಬಂದ್‌ಗೆ ಕರೆ ನೀಡುತ್ತೇವೆ. ಈ ಪ್ರತಿಭಟನೆ ಯಲ್ಲಿ ಎಲ್ಲರೂ ಭಾಗಿ ಆಗಬೇಕು. ನಾಳೆ ಸಂತೆ ಇದೆ ಆದರೂ ಎಲ್ಲಾ ರೈತಪಿ ಜನರು ಬಂದ್ ನಲ್ಲಿ ಕರೆ ಕೊಡ್ತಿದು ರಾಜ್ಯ ವ್ಯಾಪಿ ಹೋರಾಟ ಆಗುತ್ತದೆ. ಮಹಿಳೆ ಬಗ್ಗೆ ಪೊಲೀಸ್ ಮರೆಮಾಚ್ತಾ ಇದ್ದಾರೆ ಅನ್ನೊ ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ