ಬೆಳಗಾವಿ(ಡಿ.16): ಮತಾಂತರ ನಿಷೇಧ ಕಾಯ್ದೆಯನ್ನು(Anti Conversion Bill) ಮುಂಬರುವ ಬುಧವಾರ ಇಲ್ಲವೇ ಗುರುವಾರ (ಡಿ.22 ಅಥವಾ 23) ಮಂಡಿಸುವ ಕುರಿತು ಬಿಜೆಪಿ ಶಾಸಕಾಂಗ(BJP legislature party) ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದ್ದು, ಪ್ರತಿಪಕ್ಷಗಳ ದಾಳಿಯನ್ನು ಸಮರ್ಥ ಎದುರಿಸಲು ಎಲ್ಲರೂ ಸನ್ನದ್ಧರಾಗುವಂತೆ ಸಚಿವರು, ಶಾಸಕರಿಗೆ ಸಂದೇಶ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಬೆಳಗಾವಿ(Belagavi) ತಾಲೂಕಿನ ಕಾಕತಿಯ ಖಾಸಗಿ ಹೋಟೆಲೊಂದರಲ್ಲಿ ಬುಧವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಕುರಿತು ಶಾಸಕರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಈ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೂ ಮುನ್ನ ಸಚಿವರು ಮತ್ತು ಶಾಸಕರನ್ನು ಪರಿಗಣಿಸುವ ಮೂಲಕ ಪ್ರತಿಪಕ್ಷಗಳ ದಾಳಿಯನ್ನು ಎದುರಿಸಲು ಈಗಲೇ ಎಲ್ಲರನ್ನೂ ಸಜ್ಜುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
undefined
Anti-Conversion Bill: ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರೋದ್ಯಾಕೆ ಬಿಜೆಪಿ ಸರ್ಕಾರ.?
ರಾಜ್ಯದಲ್ಲಿನ ಅತಿವೃಷ್ಟಿಬಗ್ಗೆ ಪ್ರಸ್ತಾಪಿಸಿದ್ದು, ಅಕಾಲಿಕ ಮಳೆಯಿಂದ ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಕಂದಾಯ ಸಚಿವ ಆರ್. ಅಶೋಕ(R Ashok) ಅವರು ಮಳೆಯಿಂದ ಹಾನಿಗೀಡಾಗಿರುವ ಬೆಳೆಗಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ಅಗತ್ಯ ಪರಿಹಾರ ಕಾರ್ಯವನ್ನೂ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ತಿಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಕೋವಿಡ್ ವೈರಸ್ ಸೋಂಕಿನ ಭೀತಿಯಿಂದ ಎರಡು ವರ್ಷಗಳ ನಂತರ ಬೆಳಗಾವಿ ಸುವರ್ಣವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ(Winter Session) ನಡೆಯುತ್ತಿದೆ. ಈ ಅಧಿವೇಶನದಲ್ಲಿ ನಾವೆಲ್ಲರೂ ಪ್ರತಿಪಕ್ಷಗಳ ವಿರುದ್ಧ ನಿಲ್ಲಬೇಕು ಎಂದು ಸಿಎಂ ಶಾಸಕರಿಗೆ ಕರೆ ನೀಡಿದ್ದಾರೆ ಎನ್ನಲಾಗಿದೆ.
Anti Conversion Bill: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಒಂದಷ್ಟು ಮಾಹಿತಿ ಬಿಚ್ಚಿಟ್ಟ ಕಾನೂನು ಸಚಿವ
ಇದೇ ವೇಳೆ ಶಾಸಕರು ತಮ್ಮ ಅನುದಾನವನ್ನು ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೋವಿಡ್ ಹಿನ್ನೆಲೆಯಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಕಡಿತಗೊಳಿಸಲಾಗಿತ್ತು. ಮತ್ತೆ ಅನುದಾನ ನೀಡುವಂತೆ ಇದೆ ವೇಳೆ ಎಲ್ಲ ಶಾಸಕರು ಪ್ರಸ್ತಾಪಿಸಿದರು ಎನ್ನಲಾಗಿದೆ. ಅಲ್ಲದೇ, ಗುತ್ತಿಗೆದಾರರಿಂದ ಶೇ.40 ರಷ್ಟುಕಮೀಷನ್ ಆರೋಪ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣಾ ಫಲಿತಾಂಶದ ಕುರಿತು ಪರಾಮರ್ಶೆ ಮಾಡಲಾಗಿದೆ ಎನ್ನಲಾಗಿದೆ. ಅದರಲ್ಲಿಯೂ ವಿಶೇಷವಾಗಿ ಬೆಳಗಾವಿ ವಿಧಾನ ಪರಿಷತ್ ಚುನಾವಣೆ ಸೋಲಿನ ಆತ್ಮಾವಲೋಕನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ವಿರುದ್ಧ ಹೋರಾಟ ಮಾಡುವುದಾಗಿ ಬಹಿರಂಗ ಹೇಳಿಕೆ ನೀಡಿದೆ. ಇದರ ಜೊತೆಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಿಟ್ ಕಾಯಿನ್ ಅವ್ಯವಹಾರ ಸೇರಿದಂತೆ ಹಲವು ವಿಚಾರ ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ. ಇದಕ್ಕೆ ಬಿಜೆಪಿ ಪ್ರತಿ ತಂತ್ರ ಹೆಣೆದಿದೆ.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ ಸುರಾನ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
ರಮೇಶ, ಕವಟಗಿಮಠ ಗೈರು:
ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಭೆಗೆ ಹಾಜರಾಗಿದ್ದರೆ, ಅವರ ಸಹೋದರ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಗೈರಾಗಿದ್ದರು. ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಕೂಡ ಗೈರಾಗಿದ್ದಾರೆ. ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಕವಟಗಿಮಠ ಅವರು ಸಭೆಗೆ ಗೈರಾಗಿದ್ದಾರೆ ಎನ್ನಲಾಗಿದೆ.