ಮಹಾರಾಷ್ಟ್ರದ ಮಳೆಯಿಂದ ಬೆಳಗಾವಿಗೆ ಜಲಕಂಟಕ: ನದಿಗಳಲ್ಲಿ ಪ್ರವಾಹದ ಆತಂಕ

Published : Jul 25, 2024, 10:12 AM ISTUpdated : Jul 25, 2024, 12:32 PM IST
ಮಹಾರಾಷ್ಟ್ರದ ಮಳೆಯಿಂದ ಬೆಳಗಾವಿಗೆ ಜಲಕಂಟಕ: ನದಿಗಳಲ್ಲಿ ಪ್ರವಾಹದ ಆತಂಕ

ಸಾರಾಂಶ

ಕೃಷ್ಣಾ ನದಿಯಲ್ಲಿ 2.20 ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದು ದೂದ್ ಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಾಂಡೇಯ ನದಿಗಳೂ ಪ್ರವಾಹ ಮಟ್ಟದಲ್ಲಿ ಹರಿಯುತಿವೆ. ಇದರಿಂದ ಬೆಳಗಾವಿಯ 21ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಕಾಣಿಸಿದೆ. 

ಬೆಳಗಾವಿ (ಜು.25): ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಷ್ಣಾ ಸೇರಿ ಹಲವು ನದಿಗಳ ನೀರಿನ ಮಟ್ಟ ನಿತ್ಯ ಏರಿಕೆಯಾಗುತ್ತಲೇ ಇದೆ. ಕೃಷ್ಣಾ ನದಿಯಲ್ಲಿ 2.20 ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದು ದೂದ್ ಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಾಂಡೇಯ ನದಿಗಳೂ ಪ್ರವಾಹ ಮಟ್ಟದಲ್ಲಿ ಹರಿಯುತಿವೆ. ಇದರಿಂದ ಬೆಳಗಾವಿಯ 21ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಕಾಣಿಸಿದೆ. 

ಮಳೆ ಮುಂದುವರಿದರೆ ಮತ್ತಷ್ಟು ಗ್ರಾಮಗಳಿಗೆ ನದಿ ನೀರು ನುಗ್ಗುವ ಆತಂಕದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಬೆಳಗಾವಿ ಜಿಲ್ಲೆಯಲ್ಲಿ 427ಕ್ಕೂ ಹೆಚ್ಚು ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 50ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸುವ ನಡೆಯುತ್ತಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂಧಗಂಗಾ ನದಿಗಳು ಪ್ರವಾಹಮಟ್ಟದಲ್ಲಿ ಹರಿಯುತ್ತಿರುವು ದರಿಂದ ಈಗಾಗಲೇ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ 33ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿದ್ದು, ಅಸ್ತವ್ಯಸ್ತಗೊಂಡಿದೆ.

ವಿಧಾನಸಭೆ, ಮೇಲ್ಮನೆಯಲ್ಲಿ ಮುಡಾ ಅಕ್ರಮ ಕೋಲಾಹಲ: ಸದನದಲ್ಲಿ ರಾತ್ರಿಯಿಡೀ ಧರಣಿ

50 ಕುಟುಂಬಗಳ ರಕ್ಷಣೆ: ಕೃಷ್ಣಾ ನದಿಗೆ ಆಲಮಟ್ಟಿ ಡ್ಯಾಂನಿಂದ 2.20 ಲಕ್ಷ ಕ್ಯುಸೆಗೂ ಹೆಚ್ಚು ನೀರು ಬಿಡಲಾಗುತ್ತಿದ್ದು, ಇದರಿಂದ ಬೆಳ ಗಾವಿ ಜಿಲ್ಲೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಮಾಂಗ ಎಂಬಲ್ಲಿ 50ಕ್ಕೂ ಅಧಿಕ ಕುಟು ೦ಬಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿವೆ. ಅವ ರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಸದ್ಯ ಹುಲಗಬಾಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ. 

21 ಗ್ರಾಮಗಳಿಗೆ ಪ್ರವಾಹ ಭೀತಿ: ಇನ್ನು ಹಿಡಕಲ್, ಶಿರೂರು ಜಲಾಶಯ ಹಾಗೂ ಬಳ್ಳಾರಿ ನಾಲಾಗಳಿಂದ 40 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹಿರಿಬಿಟ್ಟ ಪರಿಣಾಮ, ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ತುಂಬಿಹರಿಯುತ್ತಿವೆ. ಹೀಗಾಗಿ ಗೋಕಾಕಮತ್ತು ಮೂಡಲಗಿ ತಾಲೂಕಿನ 21 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ನದಿಪಾತ್ರದಿಂದ ದೂರವಿರುವಂತೆ ಈಗಾಗಲೇ ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದೆ. ಇನ್ನು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮಕ್ಕೆ ಈಗಾಗಲೇ ಕೃಷ್ಣಾ ನದಿ ನೀರು ಪ್ರವೇಶವಾಗಿದೆ. ಗ್ರಾಮದ ಹೊರವಲಯದ ಸುಗಂಧಾದೇವಿ ದೇವಸ್ಥಾನ ಜಲಾವೃತವಾಗಿದೆ. ನಾಲ್ಕಕ್ಕೂ ಅಧಿಕ ಮನೆಗಳಿಗೆ ನದಿ ನೀರು ನುಗ್ಗಿದೆ. 

ಕುಂದರಗಿ ಮಠ ಜಲಾವೃತ: ತಾಲೂಕಿನ ಕುಂದರಗಿ ಗ್ರಾಮದ ಶ್ರೀ ಕುಂದರಗಿ ಅಡವಿಸಿದ್ದೇಶ್ವರ ಮಠ ನೀರಿನಿಂದ ಆವೃತ ವಾಗಿದ್ದು, ಮಠದಲ್ಲಿ ಶ್ರೀಮಠ ಪೀಠಾಧಿಪತಿ ಶ್ರೀ ಅಮರ ಸಿದ್ದೇಶ್ವರ ಶ್ರೀಗಳು ಜಾನುವಾರುಗಳ ಸಮೇತ ಸ್ಥಳಾಂತರಗೊಂಡಿದ್ದಾರೆ. 

ಬಾಗಲಕೋಟೆಯಲ್ಲೂ ಆತಂಕ: ಕೋಟೆ ಜಿಲ್ಲೆಯಲ್ಲೂ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿ ಪ್ರವಾಹಮಟ್ಟದಲ್ಲಿ ಹರಿಯುತ್ತಿವೆ. ಜಮಖಂಡಿ ತಾಲೂಕಿನ ಮುತ್ತೂರಿನಲ್ಲಿ ಕೃಷ್ಣಾ ನದಿ ಪ್ರವಾಹ ಸೃಷ್ಟಿಸಿದ್ದು, ಗ್ರಾಮಸ್ಥರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಸದ್ಯ ಘಟಪ್ರಭಾ ಜಲಾಶಯದಿಂದ ಈಗ 31 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಒಂದು ವೇಳೆ 45ರಿಂದ 50 ಸಾವಿರ ಕ್ಯುಸೆಕ್‌ಗೆ ನೀರು ಹರಿಸಲು ಆರಂಭಿಸಿದರೆ ಮುಧೋಳ ಸೇರಿ ಬಹುತೇಕ ಕಡೆ ಪ್ರವಾಹದ ಭೀತಿ ಎದುರಾಗಲಿದೆ.

ಆಂಧ್ರ ಪ್ರದೇಶಕ್ಕೆ ಮಾತ್ರ ಹೆಚ್ಚುವರಿ ತಂಬಾಕು ಮಾರಾಟಕ್ಕೆ ಕೇಂದ್ರ ಸರ್ಕಾರದಿಂದ ಓಕೆ: ಕರ್ನಾಟಕಕ್ಕೆ ಇಲ್ಲ

ಕೆಆರ್‌ಎಸ್ ಭರ್ತಿ, ಟಿಬಿ, ಹೇಮಾವತಿ ಡ್ಯಾಂ ಸ್ವಲ್ಪ ಬಾಕಿ: ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲೊಂದಾದ ಕೃಷ್ಣರಾಜಸಾಗರ ಭರ್ತಿಯಾಗಿದೆ. ಇನ್ನೊಂದು ಪ್ರಮುಖ ಜಲಾಶಯ ಹೇಮಾವತಿ ಡ್ಯಾಂ ಬಹುತೇಕ ಭರ್ತಿಯಾಗಿದೆ. ಉತ್ತರ ಕರ್ನಾಟಕದ ತುಂಗಭದ್ರಾ ಜಲಾಶಯ ಭರ್ತಿಗೆ ಇನ್ನು 2 ಅಡಿಗಳಷ್ಟೇ ಬಾಕಿ ಇದೆ. ತುಂಗಭದ್ರಾ ಡ್ಯಾಂನಲ್ಲಿ 99 ಟಿಎಂಸಿ ನೀರು ಶೇಖರಣೆ ಯಾಗಿದ್ದು, ಗುರುವಾರ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ