
ಬೆಂಗಳೂರು (ಜ.20): ಬೆಳಗಾವಿ ಜಿಲ್ಲೆಯಲ್ಲಿರುವ ಹಿಡಕಲ್ ಅಣೆಕಟ್ಟೆಯಿಂದ ಪಕ್ಕದ ಹುಬ್ಬಳ್ಳಿ- ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನಾವು ಬಳಸುತ್ತಿರುವುದು ಕೇವಲ 0.58 ಟಿಎಂಸಿ ಅಡಿ ನೀರು ಅಷ್ಟೇ. ಈ ವಿಚಾರದಲ್ಲಿ ರೈತರು ಹಾಗೂ ಸಾರ್ವಜನಿಕರ ವಿರೋಧ ಸರಿಯಲ್ಲ. ಕೈಗಾರಿಕೆಗಳು ಬೆಳೆಯಬೇಕು ಎಂದರೆ, ನೀರನ್ನು ಕೊಡಬೇಕಾದ್ದು ಸರ್ಕಾರದ ಮೂಲಭೂತ ಕರ್ತವ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, 'ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದ ನ್ಯಾಯಾಧೀಕರಣ ತೀರ್ಪಿನಲ್ಲಿ ಕೈಗಾರಿಕಾ ಬೆಳವಣಿಗೆ ಸಲುವಾಗಿಯೇ ಹಿಡಕಲ್ ಜಲಾಶಯದಿಂದ 4 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಇದರಲ್ಲಿ ನಾವು ಕೇವಲ ಪ್ರತಿ ನಿತ್ಯ 45 ದಶ ಲಕ್ಷ ಲೀಟರ್ (0.58 ಟಿಎಂಸಿ) ನೀರು ಮಾತ್ರ ಬಳಸಲು ತೀರ್ಮಾನಿಸಿದ್ದೇವೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಜನರಿಗೆ ತೊಂದರೆ ಆಗುವಂಥ ಯಾವ ಅಂಶವೂ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಸರಕಾರವೇನೂ ಹಿಡಕಲ್ ಅಣೆಕಟ್ಟೆಯಿಂದ ನೀರು ಕೊಡಲು ಮುಂದಾಗಿಲ್ಲ. ಕೆಳಭಾಗದ ನದಿಯಿಂದ ಈ ನೀರನ್ನು ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ಪೂರೈಸುತ್ತೇವೆ. ನೆರೆಹೊರೆಯ ಜಿಲ್ಲೆಗಳ ಜನರ ನಡುವೆ ಪರಸ್ಪರ ಅನ್ಯೋನ್ಯತೆ ಇರಬೇಕು. ಹಿಡಕಲ್ ಜಲಾಶಯದಿಂದ ಈಗ ಕೃಷಿ ಭೂಮಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಅಬಾಧಿತವಾಗಿ ಇರಲಿದೆ. ಕುಡಿಯುವ ನೀರಿಗೂ ತೊಂದರೆ ಆಗುವುದಿಲ್ಲ. ಯೋಜನೆಯ ವಿರುದ್ಧ ಮಾತನಾಡುತ್ತಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಇದನ್ನೂ ಓದಿ: 2ನೇ ಏರ್ಪೋರ್ಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆ ಶೀಘ್ರ ಸಭೆ: ಸಚಿವ ಎಂ.ಬಿ.ಪಾಟೀಲ್
ಇಟ್ಟಿಗೆ ಕಾರ್ಮಿಕರ ಮೇಲೆ ಹಲ್ಲೆ ಮಾಡಿದವರ ಬಂಧನ: ವಿಜಯಪುರದ ಎಪಿಎಂಸಿ ವ್ಯಾಪ್ತಿಯಲ್ಲಿ ಇರುವ ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ನಡೆದಿರುವ ಹಲ್ಲೆ ಅಮಾನವೀಯವಾಗಿದೆ. ತಪ್ಪಿತಸ್ಥರನ್ನು ಬಂಧಿಸಿದ್ದು, ಕಠಿಣ ಕಾನೂನು ಕ್ರಮವನ್ನೂ ಜರುಗಿಸಲಾಗುವುದು. ಈ ಘಟನೆಯ ಬಗ್ಗೆ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ವಿಧಾನಸೌಧದಲ್ಲಿ ಸೋಮವಾರ ಉತ್ತರಿಸಿದ್ದಾರೆ. ಇಟ್ಟಿಗೆ ಭಟ್ಟಿಯಲ್ಲಿ ನಡೆದಿರುವ ಘಟನೆ ಬಗ್ಗೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠರ ಜತೆ ಮಾತನಾಡಿ, ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಅಲ್ಲಿನ ಜಿಲ್ಲಾಧಿಕಾರಿಗಳು ಕರ್ತವ್ಯದ ಮೇಲೆ ಬೆಂಗಳೂರಿನಲ್ಲೇ ಇದ್ದಾರೆ. ಅವರೊಂದಿಗೂ ಈ ಬಗ್ಗೆ ಮಾತನಾಡಿರುವೆ. ತಪ್ಪಿತಸ್ಥರನ್ನು ಹಾಗೆಯೇ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ