ಬೆಂಗಳೂರಿಗರೇ ಎಚ್ಚರ...! ರಸ್ತೆ ಅಗೆದರೆ ಬೀಳುತ್ತೆ ಭಾರೀ ದಂಡ!

By Web DeskFirst Published Dec 12, 2018, 8:21 AM IST
Highlights

ಸರ್ಕಾರಿ, ಖಾಸಗಿ ಸಂಸ್ಥೆಗೆ .25 ಲಕ್ಷ, ಸಾರ್ವಜನಿಕರಿಗೆ 10 ಲಕ್ಷ ದಂಡ ವಿಧಿಸಿ| ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಬಿಬಿಎಂಪಿಗೆ ಸರ್ಕಾರದ ಆದೇಶ

ಬೆಂಗಳೂರು[ಡಿ.12]: ಬಿಬಿಎಂಪಿಯಿಂದ ಅನುಮತಿ ಪಡೆಯದೆ ಪಾಲಿಕೆಯ ರಸ್ತೆ ಅಗೆಯುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ .25 ಲಕ್ಷ, ಸಾರ್ವಜನಿಕರಿಗೆ 10 ಲಕ್ಷ ದಂಡ ವಿಧಿಸುವುದಕ್ಕೆ ಸರ್ಕಾರ ಆದೇಶಿಸಿ ಕಟ್ಟಿನಿಟ್ಟಾಗಿ ಜಾರಿಗೊಳಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿದೆ.

ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ನಗರದ ರಸ್ತೆಗಳ ಅಭಿವೃದ್ಧಿಗೆ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿದೆ. ಆದರೆ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಕೊಳವೆ, ಕೇಬರ್‌, ಓಎಫ್‌ಸಿ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗೆ ರಾತ್ರೋರಾತ್ರಿ ರಸ್ತೆಗಳನ್ನು ಅಗೆದು ಹಾಳು ಮಾಡಲಾಗುತ್ತಿತ್ತು.

ಇದರಿಂದ ಸರ್ಕಾರ ಮತ್ತು ಪಾಲಿಕೆ ಗೌರವಕ್ಕೆ ಧಕ್ಕೆಯಾಗುತ್ತಿದೆ. ಅನಧಿಕೃತವಾಗಿ ರಸ್ತೆ ಅಗೆಯುವವರಿಗೆ ವಿಧಿಸುವ ದಂಡ ಪರಿಷ್ಕರಣೆ ಸೇರಿದಂತೆ ರಸ್ತೆ ಅಗೆಯುವ ಸರ್ಕಾರಿ ಸಂಸ್ಥೆಗಳ ಮೇಲೆಯೂ ದಂಡ ವಿಧಿಸುವುದಕ್ಕೆ ಪಾಲಿಕೆ ಸಭೆಯಲ್ಲಿ ತೀರ್ಮಾನಿಸಿ ಸರ್ಕಾರ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಪ್ರಸ್ತಾವನೆಯನ್ನು ಅಂಗೀಕರಿಸಿ ಸೋಮವಾರ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಈವರೆಗೆ ಅನಧಿಕೃತವಾಗಿ ರಸ್ತೆ ಅಗೆಯುವುದಕ್ಕೆ ಕೇವಲ 50 ಸಾವಿರ ದಂಡ ವಿಧಿಸಲಾಗುತಿತ್ತು. ಇದೀಗ ಸರ್ಕಾರ ದಂಡದ ಪ್ರಮಾಣವನ್ನು ವೈಯಕ್ತಿಕವಾಗಿ (ಸಾರ್ವಜನಿಕ) ಮನೆಗಳಿಗೆ ಕೈಗೊಳ್ಳುವ ಕಾಮಗಾರಿಗೆ 10 ಲಕ್ಷ ಗಳಿಗೆ, ಸರ್ಕಾರಿ ಸಂಸ್ಥೆ ಅಥವಾ ಖಾಸಗಿ ಕಂಪನಿಗಳು ಕಾಮಗಾರಿಯನ್ನು ಅನುಮತಿ ಇಲ್ಲದೇ ರಸ್ತೆ ಅಗೆಯುವುದಕ್ಕೆ 25 ಲಕ್ಷ ದಂಡವನ್ನು ವಿಧಿಸಲು ಪಾಲಿಕೆ ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ.

ಅಲ್ಲದೇ ನಗರದ ರಸ್ತೆಗಳ ಒಡೆತನ ಮತ್ತು ನಿರ್ವಹಣೆಯ ಅಧಿಕಾರವನ್ನು ಬಿಬಿಎಂಪಿ ಹೊಂದಿರುವುದರಿಂದ ರಸ್ತೆ ಕತ್ತರಿಸುವುದಕ್ಕೆ ಅನುಮತಿ ನೀಡುವ ಪರಮಾಧಿಕಾರ ಹೊಂದಿರುವ ಏಕೈಕ ಸಂಸ್ಥೆ ಬಿಬಿಎಂಪಿಯಾಗಿದೆ. ಹಾಗಾಗಿ, ಸರ್ಕಾರಿ, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರ ರಸ್ತೆ ಅಗೆಯುವುದಕ್ಕೆ ನಿಗದಿತ ಶುಲ್ಕವನ್ನು ಪಾವತಿ ಮಾಡಿ ಆನ್‌ಲೈನ್‌ ಮೂಲಕ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ಸೂಚಿಸಿದೆ.

ಗ್ಯಾಸ್‌ ಪೈಪ್‌ಲೈನ್‌ನಿಂದ ಅನಿಲ ಸೋರಿಕೆಯಾದ ಸಂದರ್ಭದಲ್ಲಿ ತಕ್ಷಣ ತುರ್ತು ದುರಸ್ತಿ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಬಳಿಕ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಸರ್ಕಾರಿ ಸೌಮ್ಯದ ಸಂಸ್ಥೆಗಳಿಗೆ ಎಚ್‌ಡಿಡಿ ಮಾದರಿಯಲ್ಲಿ ಓಎಫ್‌ಸಿ ಕೊಳವೆ ಅಳವಡಿಕೆ ಸಂದರ್ಭದಲ್ಲಿ ಪುನಃ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಅಗೆದಲ್ಲಿ ಅದನ್ನು ವಾಪಸ್‌ ಪಾಲಿಕೆಯಿಂದಲೇ ಮುಚ್ಚಿಸಲಾಗುತ್ತದೆ. ಅದಕ್ಕೆ ಅಗತ್ಯವಾಗುವ ಮೊತ್ತವನ್ನು ಅಗೆದಿರುವ ಸಂಸ್ಥೆಗಳು ಪಾವತಿಸಬೇಕು.

ಹೊಸದಾಗಿ ರಸ್ತೆ ಡಾಂಬರಿಕರಣ ಮತ್ತು ಅಭಿವೃದ್ಧಿ ಮಾಡಿದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ರಸ್ತೆ ಅಗೆಯುವಂತಿಲ್ಲ. ರಸ್ತೆ ಅಭಿವೃದ್ಧಿಗಿಂತ ಮೊದಲೇ ಅನುಮತಿ ಪಡೆದುಕೊಂಡಿದ್ದರೆ, ಅನುಮತಿ ಅಸಿಂಧುವಾಗಲಿದೆ ಎಂದು ತಿಳಿಸಿದ್ದು, ರಸ್ತೆ ಅಗೆಯುವ ಅನುಮತಿಯ ಯಾವುದೇ ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದಕ್ಕೆ ಬಿಬಿಎಂಪಿ ಅವಕಾಶ ನೀಡಲಾಗಿದೆ.

click me!