ರೆಡ್ಡಿಯಿಂದ ಚುನವಣೆಯಲ್ಲಿ ಬಿಜೆಪಿಗೆ ಹಿನ್ನಡೆ: ಬಿಎಸ್‌ವೈ ಕಿಡಿ!

By Web DeskFirst Published Nov 30, 2018, 10:51 AM IST
Highlights

ಸಿದ್ದು ಪುತ್ರನ ಸಾವಿನ ಕುರಿತು ರೆಡ್ಡಿ ಆಡಿದ ಮಾತಿನಿಂದ ಪಕ್ಷಕ್ಕೆ ಧಕ್ಕೆಯುಂಟಾಗಿದೆ. ಚುನಾವಣೆಯಲ್ಲಿ ಪಕ್ಷ ಸೋಲಲು ಕೂಡ ಅವರೇ ಕಾರಣ ಎಂದು ಬಿ. ಎಸ್ ಯಡಿಯೂರಪ್ಪ ಜನಾರ್ದನ ರೆಡ್ಡಿ ವಿರುದ್ಧ ಕಿಡಿ ಕಾರಿದ್ದಾರೆ.

ಬೆಂಗಳೂರು[ನ.30]: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೇಳಿಕೆ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆ ಮತ್ತು ಕೋರ್‌ ಕಮಿಟಿ ಸಭೆಗಳಲ್ಲಿ ಉಪಚುನಾವಣೆಯ ಸೋಲಿನ ಕುರಿತು ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಬಳ್ಳಾರಿ ಉಪಚುನಾವಣೆಯಲ್ಲಿ ಇತರ ಹಲವು ಅಂಶಗಳ ಜೊತೆಗೆ ಮಾಜಿ ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಕುರಿತು ರೆಡ್ಡಿ ಆಡಿದ ಮಾತು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿತು. ಮುಂದಿನ ದಿನಗಳಲ್ಲಿ ಜನರ ಭಾವನೆಯನ್ನು ಕೆರಳಿಸುವಂಥ ಹೇಳಿಕೆಗಳನ್ನು ನೀಡದಂತೆ ಪಕ್ಷದ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದರು ಎನ್ನಲಾಗಿದೆ.

ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಸಾಕಷ್ಟು ಹಣ ವ್ಯಯಿಸಿತು. ಜೊತೆಗೆ ಇಡೀ ಮಂತ್ರಿ ಮಂಡಲ ಅಲ್ಲಿ ಬಂದು ಕುಳಿತಿತು. ಮೇಲಾಗಿ ಇದು ಸಾರ್ವತ್ರಿಕ ಚುನಾವಣೆ ಆಗಿಲ್ಲದೇ ಇದ್ದುದರಿಂದ ಜನರು ಕೂಡ ಇಲ್ಲಿನ ಆಡಳಿತಾರೂಢ ಪಕ್ಷದೆಡೆಗೆ ವಾಲಿದರು. ಆದರೆ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಮತ್ತೆ ಬಿಜೆಪಿಯನ್ನು ಗೆಲ್ಲಿಸುವ ವಿಶ್ವಾಸವಿದೆ. ಅಲ್ಲದೆ, ಆ ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಲಿಂಗಾಯತ ಮತದಾರರನ್ನು ಸೆಳೆಯುವ ಸಂಬಂಧ ಆ ಸಮುದಾಯದ ಮುಖಂಡರನ್ನು ಮುಂಚೂಣಿಗೆ ತರಬೇಕು ಎಂದು ತಿಳಿಸಿದರು.

ಅದೇ ರೀತಿ ರಾಮನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್‌ ಅವರು ಕೊನೆಯ ಕ್ಷಣದಲ್ಲಿ ಮೋಸ ಮಾಡಿ ಕಾಂಗ್ರೆಸ್ಸಿಗೆ ವಾಪಸಾದರು. ಇದನ್ನು ನಿರೀಕ್ಷಿಸಿರಲಿಲ್ಲ ಎಂಎದು ಯಡಿಯೂರಪ್ಪ ಅವರು ಸಭೆಯಲ್ಲಿ ಬೇಸರದಿಂದ ಹೇಳಿದರು ಎಂದು ಮೂಲಗಳು ಮಾಹಿತಿ ನೀಡಿವೆ.

click me!