
ಬೆಂಗಳೂರು(ಮೇ.16): ಕೊರೋನಾ ಸೋಂಕು ಪ್ರಕರಣಗಳು ಹೆಚ್ಚು ಕಾಣಿಸಿಕೊಳ್ಳುತ್ತಿರುವ ‘ಹಾಟ್ ಸ್ಪಾಟ್’ ಪಾದರಾಯನಪುರದ ಜನರ ಗಂಟಲ ದ್ರವದ ಮಾದರಿ ಸಂಗ್ರಹಿಸಲು ಬಿಬಿಎಂಪಿ ಆರೋಗ್ಯ ವಿಭಾಗದ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.
ತ್ವರಿತವಾಗಿ ಮತ್ತು ಹೆಚ್ಚಿನ ಜನರನ್ನು ಆರೋಗ್ಯ ತಪಾಸಣೆ ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಲು ಬಿಬಿಎಂಪಿ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇದರ ಜೊತೆಗೆ ಇರುವ ಸಿಬ್ಬಂದಿ ಪಾದರಾಯನಪುರದಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಶುಕ್ರವಾರ ಗಂಟಲು ದ್ರವದ ಮಾದರಿ ಸಂಗ್ರಹಿಸುವ ಕುರಿತು ಏಳು ಮಂದಿಯ ವೈದ್ಯಕೀಯ ತಂಡಕ್ಕೆ ಪಾದರಾಯನಪುರದಲ್ಲಿಯೇ ತರಬೇತಿ ನೀಡಿ ಮಾದರಿ ಸಂಗ್ರಹಿಸುವ ಕಾರ್ಯಕ್ಕೆ ತೊಡಗಿಸಿಕೊಳ್ಳಲಾಗಿದೆ.
ಕ್ವಾರಂಟೈನ್ ಆಗಲು ಒಪ್ಪದವರು ಮತ್ತೊಂದು ರೈಲಲ್ಲಿ ದೆಹಲಿಗೆ ವಾಪಸ್..!
ಮಾದರಿ ಸಂಗ್ರಹ ಆರಂಭ:
ಗುರುವಾರದಿಂದ ಪಾದರಾಯನಪುರದ ಸುಮಾರು ಏಳು ಸಾವಿರ ಕುಟುಂಬದ 40 ಸಾವಿರ ಮಂದಿಯನ್ನು ಆರೋಗ್ಯತಪಾಸಣೆಗೆ ಒಳಪಡಿಸಿ ಮನೆಗೆ ಒಬ್ಬರಂತೆ ಗಂಟಲ ದ್ರವದ ಮಾದರಿ ಸಂಗ್ರಹಿಸುವ ಕೆಲಸ ಆರಂಭವಾಗಿದೆ. ಗುರುವಾರ 11 ಮಂದಿಯ ಗಂಟಲ ದ್ರವದ ಮಾದರಿ ಸಂಗ್ರಹಿಸಿದ್ದು, ಶುಕ್ರವಾರ ಸುಮಾರು 15 ಮಂದಿಯ ಗಂಟಲು ದ್ರವದ ಮಾದರಿಯನ್ನು ಮಾತ್ರ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ.
ಶುಕ್ರವಾರ ಕೇವಲ 14 ಸಿಬ್ಬಂದಿ ಎರಡು ತಂಡದಲ್ಲಿ 15 ಮಂದಿಯ ಗಂಟಲ ದ್ರವದ ಮಾದರಿ ಸಂಗ್ರಹಿಸಿದ್ದಾರೆ. ಗಂಟಲು ದ್ರವದ ಮಾದರಿ ಸಂಗ್ರಹಿಸುವ ಕುರಿತು ತರಬೇತಿ ಹೊಂದಿರುವ ಸಿಬ್ಬಂದಿ ನೀಡುವಂತೆ ಪಾಲಿಕೆಯ ಕ್ಲಿನಿಕಲ್ ವಿಭಾಗಕ್ಕೆ ಮನವಿ ಮಾಡಿದರೂ ಸಿಬ್ಬಂದಿ ನಿಯೋಜನೆಯಾಗಿಲ್ಲ. ಹೀಗಾಗಿ, ತಡವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸೋಂಕು ತಪಾಸಣೆಗೆ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಯ ನಿರಾಸಕ್ತಿ!
ಪರೀಕ್ಷೆಗೆ ಒಪ್ಪದ ಜನ
ಈ ಮಧ್ಯ ಪಾದರಾಯನಪುರದಲ್ಲಿ ಸಾರ್ವಜನಿಕರು ಆರೋಗ್ಯ ತಪಾಸಣೆಗೆ ಹಾಗೂ ಗಂಟಲು ದ್ರವದ ಮಾದರಿ ನೀಡುವುದಕ್ಕೆ ಒಪ್ಪುತ್ತಿಲ್ಲ. ನಾವು ಆರೋಗ್ಯವಾಗಿದ್ದೇವೆ. ನಮಗೆ ಯಾವುದೇ ಪರೀಕ್ಷೆ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಆರೋಗ್ಯ ಸಿಬ್ಬಂದಿ ಅವರಿಗೆ ಮನವರಿಕೆ ಮಾಡಿ ಗಂಟಲು ದ್ರವದ ಮಾದರಿ ಸಂಗ್ರಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ, ಶುಕ್ರವಾರ ಎರಡು ತಂಡದಲ್ಲಿ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಶನಿವಾರದಿಂದ ಮತ್ತಷ್ಟುಚುರುಕುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ