
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಇ-ಖಾತಾ ಅರ್ಜಿ ವಿಲೇವಾರಿ ಅನಗತ್ಯ ವಿಳಂಬ ಧೋರಣೆ ತಪ್ಪಿಸುವ ಉದ್ದೇಶದಿಂದ ‘ಫಸ್ಟ್ ಇನ್- ಫಸ್ಟ್ ಔಟ್’ ಎಂಬ ನಿಯಮವನ್ನು ಬಿಬಿಎಂಪಿ ಜಾರಿಗೊಳಿಸಿದ್ದು, ಈ ಮೂಲಕ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ತಮ್ಮಿಚ್ಚೆಯಂತೆ ಅರ್ಜಿ ವಿಲೇವಾರಿಯ ಅಧಿಕಾರಕ್ಕೆ ಮೂಗುದಾರ ಹಾಕಲಾಗಿದೆ.
ಈ ನೂತನ ಕಾರ್ಯವಿಧಾನ ಮೇ 9 ರಿಂದ ಅನುಷ್ಠಾನಗೊಳಿಸಲಾಗಿದ್ದು, ಇ-ಖಾತಾ ಪಡೆಯುವುದಕ್ಕೆ ಯಾರು ಮೊದಲು ಅರ್ಜಿ ಸಲ್ಲಿಕೆ ಮಾಡುತ್ತಾರೋ ಆ ಅರ್ಜಿ ವಿಲೇವಾರಿ ಆಗುವವರೆಗೆ ಮುಂದಿನ ಅರ್ಜಿ ಪರಿಶೀಲನೆ ಅಥವಾ ವಿಲೇವಾರಿ ಮಾಡುವುದಕ್ಕೆ ಅಧಿಕಾರಿಗಳಿಗೆ ಅವಕಾಶ ಇಲ್ಲದಂತೆ ಇ-ಖಾತಾ ಪೋರ್ಟಲ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಮೂಲಕ ಇ-ಖಾತಾ ಅರ್ಜಿ ವಿಲೇವಾರಿಯಲ್ಲಿಯೂ ಜೇಷ್ಠತೆ ನಿಯಮ ಅನುಕರಣೆಯನ್ನು ಕಡ್ಡಾಯಗೊಳಿಸಲಾಗಿದೆ.
ಈವರೆಗೆ ಬಿಬಿಎಂಪಿಯ ಕಂದಾಯ ಉಪ ವಿಭಾಗದ ಕೇಸ್ ವರ್ಕರ್, ಸಹಾಯಕ ಕಂದಾಯ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ತಮ್ಮಗೆ ಸಲ್ಲಿಕೆಯಾದ ಅರ್ಜಿಯಲ್ಲಿ ತಮ್ಮಿಚ್ಚೆಯಂತೆ ಅರ್ಜಿಗಳನ್ನು ಆಯ್ಕೆ ಮಾಡಿಕೊಂಡು ವಿಲೇವಾರಿ ಮಾಡುತ್ತಿದ್ದರು. ಇನ್ನು ಮುಂದೆ ಆ ರೀತಿ ಮಾಡುವುದಕ್ಕೆ ಅವಕಾಶ ಇಲ್ಲದಂತಾಗಿದ್ದು, ಫಸ್ಟ್ ಇನ್- ಫಸ್ಟ್ ಔಟ್ ನಿಯಮ ಪಾಲನೆ ಮಾಡಲೇ ಬೇಕಾಗಿದೆ.
ಒತ್ತಡ, ಪ್ರಭಾವಕ್ಕೆ ಅವಕಾಶ ಇಲ್ಲ:
ತ್ವರಿತವಾಗಿ ಇ ಖಾತಾ ಬೇಕಾದವವರು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅಥವಾ ಒತ್ತಡ ಹಾಕಿ ಇ ಖಾತಾ ಅನುಮೋದನೆ ಪಡೆದುಕೊಳ್ಳುತ್ತಿದ್ದರು. ಆದರೆ, ಇದೀಗ ಒತ್ತಡ ಅಥವಾ ಪ್ರಭಾವ ಬೀರಿದವರ ಇ-ಖಾತಾ ಅರ್ಜಿ ವಿಲೇವಾರಿ ಆಗಬೇಕಾದರೆ, ಆ ಅರ್ಜಿಗಿಂತ ಮೊದಲು ಸಲ್ಲಿಕೆಯಾದ ಎಲ್ಲಾ ಅರ್ಜಿಗಳು ವಿಲೇವಾರಿ ಆಗಬೇಕು. ಇಲ್ಲವಾದರೆ, ತಮಗೆ ಬೇಕಾದವರ ಅರ್ಜಿ ವಿಲೇವಾರಿ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.
ವಿಲೇವಾರಿ ಮಾಡಲೇ ಬೇಕು ಎಂದರೆ, ಎಲ್ಲಾ ಅರ್ಜಿಗಳಿಗೆ ಅನುಮೋದನೆ ನೀಡಬೇಕೆಂದಲ್ಲ. ದಾಖಲಾತಿಗಳು ಸರಿಯಾಗಿ ಇರದ ಅರ್ಜಿಗಳನ್ನು ತಿರಸ್ಕರಿಸಬಹುದಾಗಿದೆ. ತಿರಸ್ಕರಿಸುವುದಕ್ಕೆ ಸೂಕ್ತ ಕಾರಣ ನೀಡಬೇಕಾಗಲಿದೆ.
ವಲಯ ಮಟ್ಟದಲ್ಲಿಯೂ ಹೆಚ್ಚುವರಿ ತಂಡ:
ಈ ಎಲ್ಲವುಗಳ ಜತೆಗೆ, ಎಂಟು ವಲಯಗಳಿಗೆ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳಿಗೆ ನಿಯೋಜನೆ ಮಾಡಲಾಗಿದೆ. ಬಹುದಿನಗಳಿಂದ ಇ ಖಾತಾ ಅರ್ಜಿ ವಿಲೇವಾರಿ ಆಗದೇ ಬಾಕಿ ಇದ್ದರೆ, ವಲಯ ಮಟ್ಟದಲ್ಲಿ ನಿಯೋಜನೆಗೊಂಡ ಅಧಿಕಾರಿಗಳು ಅರ್ಜಿ ಪರಿಶೀಲನೆ ಮಾಡಿ ವಿಲೇವಾರಿ ಮಾಡುದಕ್ಕೂ ವ್ಯವಸ್ಥೆ ಮಾಡಲಾಗಿದೆ.
ತಾಂತ್ರಿಕ ಸಮಸ್ಯೆಗೆ ಎಲ್ಲವೂ ಸ್ಥಬ್ದ?:
ಹೊಸ ವ್ಯವಸ್ಥೆಯಿಂದ ಸಾಕಷ್ಟು ಅನುಕೂಲಗಳು ಇವೆ. ಆದರೆ, ಸರ್ವರ್ ಸಮಸ್ಯೆ, ತಾಂತ್ರಿಕ ಸಮಸ್ಯೆ ಉಂಟಾಗಿ ಯಾವುದೋ ಒಂದು ಅರ್ಜಿ ವಿಲೇವಾರಿ ನಿಂತು ಹೋದರೆ, ಎಲ್ಲಾ ಸಮಸ್ಯೆ ಪರಿಹಾರವಾಗುವವರೆ ಮುಂದಿನ ಯಾವುದೇ ಅರ್ಜಿ ವಿಲೇವಾರಿಗೆ ಅವಕಾಶ ಇರುವುದಿಲ್ಲ ಎಂಬ ಅಭಿಪ್ರಾಯವನ್ನು ಸಹಾಯ ಕಂದಾಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ತಿಂಗಳಲ್ಲಿ ಮತ್ತಷ್ಟು ಬದಲಾವಣೆ:
ಸದ್ಯ ಆಯಾ ಕಂದಾಯ ಉಪ ವಿಭಾಗದ ವ್ಯಾಪ್ತಿಯ ಆಸ್ತಿಗೆ ಸಂಬಂಧಿಸಿದ ಸಲ್ಲಿಕೆಯಾಗುವ ಇ ಖಾತಾ ಅರ್ಜಿಗಳನ್ನು ಸಂಬಂಧಪಟ್ಟ ಸಹಾಯ ಕಂದಾಯ ಅಧಿಕಾರಿ ಪರಿಶೀಲನೆ ಮಾಡಿ ಅನುಮೋದನೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲಮಾಪನ ಮಾದರಿಯಲ್ಲಿ ಇ-ಖಾತಾ ಅರ್ಜಿಗಳನ್ನು ಬೇರೆ ಬೇರೆ ಸಹಾಯಕ ಕಂದಾಯ ಅಧಿಕಾರಿಗಳ ಪರಿಶೀಲನೆ ವ್ಯವಸ್ಥೆ ಆರಂಭಿಸುವುದಕ್ಕೆ ಚಿಂತನೆ ನಡೆಸಲಾಗಿದೆ. ವ್ಯವಸ್ಥೆಯಲ್ಲಿ ಸುಧಾರಣೆ ತರುವುದಕ್ಕೆ ಕಂದಾಯ ವಿಭಾಗ ತಯಾರಿ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ