ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ತಕ್ಷಣ ಸಚಿವರು ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಜತೆಗೆ, ಮಳೆಗಾಲದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಪರಿಶೀಲಿಸಲು ರಾಜ್ಯ ಪ್ರವಾಸ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಚಿವರಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು (ಮೇ.23) : ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ತಕ್ಷಣ ಸಚಿವರು ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಜತೆಗೆ, ಮಳೆಗಾಲದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಪರಿಶೀಲಿಸಲು ರಾಜ್ಯ ಪ್ರವಾಸ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಚಿವರಿಗೆ ಸೂಚನೆ ನೀಡಿದ್ದಾರೆ.
ಜತೆಗೆ, ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಲೋಕಸಭಾ ಚುನಾವಣಾ ಮಾದರಿಯಲ್ಲೇ ಶ್ರಮವಹಿಸಬೇಕು ಎಂದೂ ತಾಕೀತು ಮಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬುಧವಾರ ರಾತ್ರಿ ಸಚಿವರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಉಭಯ ನಾಯಕರು ಸಚಿವರಿಗೆ ಹಲವು ಸೂಚನೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ: ಸತೀಶ್ ಜಾರಕಿಹೊಳಿ
ಸಭೆಯಲ್ಲಿ ಆಡಳಿತಕ್ಕೆ ಚುರುಕು ಮುಟ್ಟಿಸುವುದು, ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸುವ ನಿಟ್ಟಿನಲ್ಲಿ ರಣತಂತ್ರ ಹೆಣೆಯುವುದು ಸೇರಿದಂತೆ ಹಲವು ವಿಷಯಗಳ ಚರ್ಚೆ ನಡೆಸಲಾಗಿದೆ.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ತಕ್ಷಣ ಸಚಿವರು ರಾಜ್ಯ ಪ್ರವಾಸ ಕೈಗೊಂಡು ತಮ್ಮ ಇಲಾಖೆಗಳ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ವಿಧಾನ ಪರಿಷತ್‌ಗೆ ನಡೆಯಲಿರುವ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸುವಂತೆ ನೋಡಿಕೊಳ್ಳಬೇಕು. ಮಳೆಗಾಲ ಆರಂಭವಾಗಿದ್ದು ನಗರ ಸೇರಿದಂತೆ ರಾಜ್ಯಾದ್ಯಂತ ಅಗತ್ಯ ಮುಂಜಾಗ್ರತೆ ಕೈಗೊಳ್ಳಬೇಕೆಂದು ಸಚಿವರಿಗೆ ಸ್ಪಷ್ಟಪಡಿಸಲಾಗಿದೆ.
ಬೀಜ, ಗೊಬ್ಬರ ಗಲಾಟೆಗೆ ಆಸ್ಪದ ನೀಡಬೇಡಿ
ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ನೂಕುನುಗ್ಗಲು ಉಂಟಾಗಿ ಗಲಾಟೆ ಆಗದಂತೆ ನೋಡಿಕೊಳ್ಳಬೇಕು. ಬಿಜೆಪಿ ಮತ್ತು ಜೆಡಿಎಸ್‌ನವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಅಪಪ್ರಚಾರ ನಡೆಸುತ್ತಿದ್ದು ಇದಕ್ಕೆ ತಕ್ಕ ತಿರುಗೇಟು ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದ್ದು ಇದೇ ಫಲಿತಾಂಶವು ಮುಂಬರುವ ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ನಲ್ಲೂ ಪುನರಾವರ್ತನೆ ಆಗುವಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆಯಾಗಿದೆ.
'ಎಚ್ಡಿಕೆ ಸಿಎಂ ಆಗಿದ್ದಾಗ ಫೋನ್ ಕದ್ದಾಲಿಕೆ'; ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು!
ಕಾವೇರಿ ನ್ಯಾಯಾಧಿಕರಣವು ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದ್ದು, ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಈ ಆದೇಶವು ಸರ್ಕಾರಕ್ಕೆ ಪ್ರತೀಕೂಲ ಪರಿಣಾಮ ಉಂಟು ಮಾಡದಂತೆ ನೋಡಿಕೊಳ್ಳಬೇಕು. ರೈತರಿಗೆ ಬರ ಪರಿಹಾರದ ಹಣ ಸಮರ್ಪಕವಾಗಿ ತಲುಪಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಬೇಕು. ವಿರೋಧ ಪಕ್ಷಗಳ ಟೀಕೆಗೆ ಎಲ್ಲಾ ಸಚಿವರು ಸಂದರ್ಭಕ್ಕನುಸಾರವಾಗಿ ಪ್ರತ್ಯುತ್ತರ ನೀಡಬೇಕು ಎಂಬುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಔತಣಕೂಟದಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.