ಹೊಸ ವರ್ಷದ ಕಿಕ್‌ನಲ್ಲಿ ಡ್ರಿಂಕ್ ಆಂಡ್ ಡ್ರೈವ್ ಮಾಡಿದ್ರೆ ಅಷ್ಟೇ.. ಬೆಂಗಳೂರಿನ 50 ಫ್ಲೈ ಓವರ್‌ಗಳು ಬಂದ್; ರಸ್ತೆಗಿಳಿಯುವ ಮುನ್ನ ತಿಳಿಯಿರಿ

Published : Dec 31, 2025, 07:23 PM IST
Bangalore 2026 NYE countdown Police watch over MG Road Koramangala

ಸಾರಾಂಶ

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಂತಹ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ಫ್ಲೈ ಓವರ್‌ಗಳನ್ನು ಮುಚ್ಚಲಾಗಿದ್ದು, ಡ್ರಿಂಕ್ ಆಂಡ್ ಡ್ರೈವ್ ವಿರುದ್ಧ ಕಠಿಣ ತಪಾಸಣೆ ನಡೆಸಲಾಗುತ್ತಿದೆ.

ಬೆಂಗಳೂರು (ಡಿ.31): ಹೊಸ ವರ್ಷಾಚರಣೆಗಾಗಿ ಜನರು ಅತಿ ಹೆಚ್ಚು ಸೇರುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲದಲ್ಲಿ ಜನರ ಸುರಕ್ಷತೆಗಾಗಿ ಪೊಲೀಸರು ಬಿಗಿ ಬಂದೋಬಸ್್ ಕೈಗೊಂಡಿದ್ದಾರೆ. ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆ ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಬ್ಬರ ತಪಾಸಣೆ ನಡೆಸಲಾಗುತ್ತಿದೆ. ಬಾಂಬ್ ಸ್ಕ್ವಾಡ್ ಮತ್ತು ಡ್ರೋನ್ ಕ್ಯಾಮೆರಾಗಳ ಮೂಲಕ ನಿರಂತರ ಕಣ್ಗಾವಲು ಇರಿಸಲಾಗಿದ್ದು, ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಬ್ರೇಕ್: 8 ಗಂಟೆಗೆ ಎಂಟ್ರೆನ್ಸ್ ಕ್ಲೋಸ್

ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದಂತೆ, ರಾತ್ರಿ 8 ಗಂಟೆಗೆ ಬ್ರಿಗೇಡ್ ರಸ್ತೆಯ ಎಂಟ್ರೆನ್ಸ್ ಅನ್ನು ವಾಹನ ಸಂಚಾರಕ್ಕೆ ಬಂದ್ ಮಾಡಲಾಗುತ್ತದೆ. ಪಾದಚಾರಿಗಳ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ. ಬ್ರಿಗೇಡ್ ರಸ್ತೆಗೆ ಪ್ರವೇಶಿಸುವ ಪ್ರತಿಯೊಬ್ಬರನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ ನಂತರವಷ್ಟೇ ಒಳಗೆ ಬಿಡಲಾಗುವುದು.

ಫ್ಲೈ ಓವರ್‌ಗಳ ಬಂದ್ ಮತ್ತು ಏರ್‌ಪೋರ್ಟ್ ರಸ್ತೆ ನಿಯಮ

ಮುನ್ನೆಚ್ಚರಿಕೆ ಕ್ರಮವಾಗಿ ಇಂದು ರಾತ್ರಿ 8 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ನಗರದ ಸುಮಾರು 50 ಫ್ಲೈ ಓವರ್‌ಗಳನ್ನು ಬಂದ್ ಮಾಡಲಾಗುತ್ತದೆ. ಆದರೆ, ಏರ್‌ಪೋರ್ಟ್ ಫ್ಲೈ ಓವರ್ ಮೇಲೆ ಇಡೀ ರಾತ್ರಿ ಕಾರುಗಳ ಸಂಚಾರಕ್ಕೆ ಅವಕಾಶವಿರಲಿದೆ. ವಿಶೇಷ ಸೂಚನೆಯೆಂದರೆ, ಏರ್‌ಪೋರ್ಟ್ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನಗಳ (Two Wheelers) ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಡ್ರಿಂಕ್ ಆಂಡ್ ಡ್ರೈವ್ ವಿರುದ್ಧ ಆಪರೇಷನ್: 166 ಕಡೆ ತಪಾಸಣೆ

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದ 166 ಆಯಕಟ್ಟಿನ ಸ್ಥಳಗಳಲ್ಲಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತದೆ. ಕಳೆದ ಒಂದು ವಾರದಲ್ಲೇ ಸುಮಾರು 4,000 ಪ್ರಕರಣಗಳು ದಾಖಲಾಗಿದ್ದು, ಇಂದು ರಾತ್ರಿ ಅತಿರೇಕದ ವರ್ತನೆ ತೋರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಸ್ವಂತ ವಾಹನಗಳ ಬದಲಿಗೆ ಹೆಚ್ಚುವರಿ ಬಸ್ ಮತ್ತು ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪೊಲೀಸ್ ಜಾಗೃತಿ ವಿಡಿಯೋ

ಕೋರಮಂಗಲ ಸೇರಿದಂತೆ ನಗರದ ಪ್ರಮುಖ ಪಬ್, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಎಲ್‌ಇಡಿ (LED) ಸ್ಕ್ರೀನ್‌ಗಳ ಮೇಲೆ ಪೊಲೀಸ್ ಇಲಾಖೆಯ ಜಾಗೃತಿ ವಿಡಿಯೋಗಳನ್ನು ಪ್ರದರ್ಶಿಸಲಾಗುತ್ತಿದೆ. 'ಜವಾಬ್ದಾರಿಯುತವಾಗಿ ಹೊಸ ವರ್ಷವನ್ನು ಆಚರಿಸಿ' ಎಂಬ ಸಂದೇಶವನ್ನು ಈ ವಿಡಿಯೋಗಳ ಮೂಲಕ ನೀಡಲಾಗುತ್ತಿದೆ. ಪಬ್ ಸಿಬ್ಬಂದಿಗಳು ಸಹ ಪೊಲೀಸರೊಂದಿಗೆ ಕೈಜೋಡಿಸಿದ್ದು, ಜಾಗೃತಿ ಮೂಡಿಸುತ್ತಿದ್ದಾರೆ.

ಮಹಿಳಾ ಸುರಕ್ಷತೆಗೆ ಬೌನ್ಸರ್‌ಗಳ ನಿಯೋಜನೆ ಮತ್ತು ಕ್ಯಾಬ್ ವ್ಯವಸ್ಥೆ

ಮಹಿಳಾ ಸುರಕ್ಷತೆಗೆ ವಿಶೇಷ ಒತ್ತು ನೀಡಿರುವ ಪಬ್ ಮತ್ತು ಕ್ಲಬ್‌ಗಳು ಮಹಿಳಾ ಬೌನ್ಸರ್‌ಗಳನ್ನು ನೇಮಿಸಿಕೊಂಡಿವೆ. ಜನಸಂದಣಿ ನಿಯಂತ್ರಿಸಲು ಕೇವಲ ಶೇ. 80ರಷ್ಟು ಮಾತ್ರ ಪಾಸ್‌ಗಳನ್ನು ವಿತರಿಸಲಾಗಿದೆ. ಒಂದು ವೇಳೆ ಯಾರಾದರೂ ಮದ್ಯಪಾನ ಮಾಡಿ ಅತಿಯಾಗಿ ಅಮಲೇರಿದ್ದರೆ, ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಪೊಲೀಸರ ಸಹಯೋಗದೊಂದಿಗೆ ವಿಶೇಷ ಕ್ಯಾಬ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸರ್ಕಾರಕ್ಕೆ 'ಮನೆಗೆದ್ದು ಮಾರು ಗೆಲ್ಲು' ಎಂದ ಶ್ರೀಶೈಲ ಶ್ರೀಗಳು; ಹೊಸ ವರ್ಷದ ಅಬ್ಬರಕ್ಕೆ ಶ್ರೀಗಳ ಎಚ್ಚರಿಕೆ ಏನು?
ಮಗನ ಅಂತರ್ಜಾತಿ ವಿವಾಹವೇ ಪ್ರಾಣಕ್ಕೆ ಮುಳುವಾಯ್ತು: ಉಮೇಶನ ಕೊಲೆಗೈದ ದಂಪತಿ ಪೊಲೀಸರಿಗೆ ಶರಣು!