
ಬಳ್ಳಾರಿ (ಜ.8): ಕಳೆದ ವಾರ ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗುಂಡಿನ ದಾಳಿ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಶಾಸಕ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಬಂಧನಕ್ಕೆ ಒತ್ತಾಯಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೊಲೆ ಯತ್ನ ಪ್ರಕರಣದಲ್ಲಿ ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿ ಅವರನ್ನು ಕೂಡಲೇ ಬಂಧಿಸಬೇಕಿತ್ತು. ಆದರೆ ಪೊಲೀಸರು ಅವರನ್ನು ಅರೆಸ್ಟ್ ಮಾಡದೇ ಟೈಂಪಾಸ್ ಮಾಡುತ್ತಿದ್ದಾರೆ ಎಂದು ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಭರತ್ ರೆಡ್ಡಿಯನ್ನು ಎಸ್ಪಿ ಸರ್ಕಲ್‌ನಿಂದ ಪೊಲೀಸರೇ ರಕ್ಷಣೆ ಕೊಟ್ಟು ಕರೆತಂದಿದ್ದಾರೆ. ಇಡೀ ಘಟನೆಗೆ ಪೊಲೀಸರೇ ಕಾರಣ. ನನ್ನನ್ನೇ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಹಾಕಿದರೂ ಅವರ ಮೇಲೆ ಕ್ರಮ ಕೈಗೊಂಡಿಲ್ಲವೇಕೆ? ಎಂದು ಅವರು ಪ್ರಶ್ನಿಸಿದರು.
ಬಳ್ಳಾರಿಗೆ ಈಗ ಹೊಸದಾಗಿ ಖಡಕ್ ಅಧಿಕಾರಿಗಳು ಬಂದಿದ್ದಾರೆ ಎಂದು ಉಲ್ಲೇಖಿಸಿದ ರೆಡ್ಡಿ, ಹೊಸ ಅಧಿಕಾರಿಗಳು ಈಗಾಗಲೇ ನನ್ನ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಹೊಸ ಎಸ್ಪಿ ಹಾಗೂ ಐಜಿ ಇಬ್ಬರೂ ಸೇರಿ ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿಯನ್ನು ಬಂಧಿಸಬೇಕು. ಅವರು ಮುಂದೆ ಹೇಗೆ ತನಿಖೆ ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ. ಒಂದು ವೇಳೆ ಬಂಧಿಸದಿದ್ದರೆ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸರ ತನಿಖಾ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಜನಾರ್ದನ ರೆಡ್ಡಿ ಅವರು, ನಾನು ಕೊಟ್ಟಿರುವ ದೂರನ್ನು ಪೊಲೀಸರು ಸ್ವೀಕರಿಸಿಲ್ಲ. ಆದ್ದರಿಂದ ನಾನು ಅವರಿಂದ ಹಿಂಬರಹ ಪಡೆದುಕೊಂಡಿದ್ದೇನೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರೈವೇಟ್ ಕಂಪ್ಲೇಂಟ್ ದಾಖಲಿಸುತ್ತೇನೆ. ಅಡಿಷನಲ್ ಎಸ್ಪಿ ರವಿಕುಮಾರ್, ಡಿವೈಎಸ್ಪಿ ನಂದಾರೆಡ್ಡಿ ಹಾಗೂ ಭರತ್ ರೆಡ್ಡಿ ವಿರುದ್ಧ ದೂರು ನೀಡಿದ್ದೇನೆ. ಘಟನೆ ನಡೆದಾಗ ಇವರು ವಿಮ್ಸ್‌ಗೆ ಹೋಗಿದ್ದರು, ಆರೋಪಿಗಳನ್ನು ಪರಾರಿಯಾಗಲು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ನಮ್ಮ ಪೊಲೀಸರು ಸಮರ್ಥರಿದ್ದಾರೆ, ಈ ಕೇಸ್ ಅನ್ನು ಪೊಲೀಸರು ತನಿಖೆ ಮಾಡ್ತಾರೆ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಜನಾರ್ದನ ರೆಡ್ಡಿ, ಪೊಲೀಸರು ಬಿಡಿ ಗೃಹ ಸಚಿವ ಪರಮೇಶ್ವರ್ ಅವರೇ ಒಬ್ಬ ಅಸಮರ್ಥ ಸಚಿವರು, ಇದನ್ನು ಇಡೀ ಕರ್ನಾಟಕ ಹೇಳುತ್ತಿದೆ. ರಾಜ್ಯದ ಇತಿಹಾಸದಲ್ಲಿ ಒಬ್ಬ ಶಾಸಕನ ಮೇಲೆ ಮತ್ತೊಬ್ಬ ಶಾಸಕನ ಪ್ರೈವೇಟ್ ಗನ್ ಮ್ಯಾನ್ ಬಂದು ಫೈರ್ ಮಾಡುತ್ತಾನೆ ಎಂದರೆ ಏನರ್ಥ? ಇವರು(ಕಾಂಗ್ರೆಸ್ ಸರ್ಕಾರ) ಯಾವ ಸಂಸ್ಕೃತಿ ತರಲು ಹೊರಟಿದ್ದಾರೆ? ಕಾಂಗ್ರೆಸ್ ನಾಯಕರು ಅಸತ್ಯ ಹೇಳುತ್ತಿದ್ದಾರೆ, ನಮ್ಮ ಬಳಿ ವಿಡಿಯೋ ಸಾಕ್ಷ್ಯಗಳಿವೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ಸತ್ಯ ಶೋಧನಾ ಸಮಿತಿ ಎಂಬ ಹೆಸರಿನಲ್ಲಿ ಬಂದು ಅಸತ್ಯವನ್ನು ಹೇಳುತ್ತಿದ್ದಾರೆ ಅವರಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಸಿಬಿಐ (CBI) ಅಥವಾ ಹೈಕೋರ್ಟ್ ನ್ಯಾಯಾಧೀಶರ ಮೂಲಕವೇ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕಾಗಿ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಿ, ರಾಜ್ಯಮಟ್ಟದ ನಾಯಕರನ್ನು ಕರೆಸಿ ಬಳ್ಳಾರಿಯಲ್ಲಿ ಬೃಹತ್ ರ್ಯಾಲಿ ಮತ್ತು ಪ್ರತಿಭಟನೆ ನಡೆಸುವುದಾಗಿ ಅವರು ಘೋಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ