
ಬಳ್ಳಾರಿ (ಜ.30): ಗಣಿ ಜಿಲ್ಲೆಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣದ ನಂತರ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಬಳ್ಳಾರಿಗೆ ವರ್ಗಾವಣೆಯಾಗಿದ್ದ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರ ವರ್ಗಾವಣೆ ಆದೇಶವನ್ನು ಸರ್ಕಾರ ದಿಢೀರ್ ರದ್ದುಗೊಳಿಸಿದೆ. ಅವರನ್ನು ಈಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿಯೊಬ್ಬರ ವರ್ಗಾವಣೆ ಆದೇಶವನ್ನು ಕೆಲವೇ ದಿನಗಳಲ್ಲಿ ತಿದ್ದುಪಡಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಬಳ್ಳಾರಿ ಡಿವೈಎಸ್‌ಪಿ ಆಗಿದ್ದ ನಂದಾ ರೆಡ್ಡಿ ಅವರ ವಿರುದ್ಧ ಕರ್ತವ್ಯಲೋಪದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಯಶ್ ಕುಮಾರ್ ಶರ್ಮಾ ಅವರನ್ನು ನೇಮಿಸಿತ್ತು. ಆದರೆ, ವರ್ಗಾವಣೆಯಾಗಿ ಬಂದರೂ ಯಶ್ ಕುಮಾರ್ ಶರ್ಮಾ ಅವರಿಗೆ ಅಧಿಕಾರ ಹಸ್ತಾಂತರಿಸಲು (ಚಾರ್ಜ್ ಕೊಡಲು) ನಂದಾ ರೆಡ್ಡಿ ನಿರಾಕರಿಸಿದ್ದರು ಎನ್ನಲಾಗಿದೆ. ಸದ್ಯ ಸರ್ಕಾರವು ತನ್ನ ಹಳೆಯ ಆದೇಶವನ್ನೇ ತಿದ್ದುಪಡಿ ಮಾಡಿದ್ದು, ನಂದಾ ರೆಡ್ಡಿ ಅವರ ಪ್ರಭಾವ ಎಷ್ಟಿದೆ ಎಂಬುದು ಈ ಮೂಲಕ ಸಾಬೀತಾಗಿದೆ.
ಬಳ್ಳಾರಿ ಡಿವೈಎಸ್‌ಪಿ ನಂದಾ ರೆಡ್ಡಿ ಅವರು ಸಾಕಷ್ಟು ಪ್ರಭಾವಿ ಅಧಿಕಾರಿಯಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ವರ್ಗಾವಣೆಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಕರ್ತವ್ಯಲೋಪದ ಗಂಭೀರ ಆರೋಪವಿದ್ದರೂ, ಒಬ್ಬ ಐಪಿಎಸ್ ಅಧಿಕಾರಿಯನ್ನೇ ಬೇರೆಡೆಗೆ ಕಳಿಸಿ ನಂದಾ ರೆಡ್ಡಿ ಅವರ ಸ್ಥಾನವನ್ನು ಭದ್ರಪಡಿಸಿರುವುದು ಇಲಾಖೆಯೊಳಗೆ ಆಂತರಿಕ ಅಸಮಾಧಾನಕ್ಕೂ ಕಾರಣವಾಗಿದೆ.
ಬಳ್ಳಾರಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಬ್ಯಾನರ್ ಹರಿದು ಹಾಕಿದ ವಿಚಾರವಾಗಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ, ಬಿಜೆಪಿ ಶಾಸಕ ಗಾಲಿ ಜನಾರ್ದನರೆಡ್ಡಿ ಎರಡು ಗುಂಪುಗಳ ನಡುವೆ ಭೀಕರ ಸಂಘರ್ಷ ನಡೆದಿತ್ತು. ಈ ಘಟನೆ ವೇಳೆ ಓರ್ವ ಕಾಂಗ್ರೆಸ್ ಮುಖಂಡನಿಗೆ ಗುಂಡು ತಗುಲಿ ಸಾವನ್ನಪ್ಪಿದ್ದ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸ್ಥಳೀಯ ಡಿವೈಎಸ್‌ಪಿ ನಂದಾ ರೆಡ್ಡಿ ಅವರು ವಿಫಲರಾಗಿದ್ದರ ಕುರಿತು ಎಡಿಜಿಪಿ ಹೀತೇಂದ್ರ ಅವರು ಸರ್ಕಾರಕ್ಕೆ ವರದಿ ಕೊಟ್ಟಿದ್ದರು. ಘಟನೆಯ ಎರಡನೇ ದಿನವೇ ಎಸ್ಪಿ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಲಾಗಿತ್ತು. ಆ ಬಳಿಕ ಡಿಐಜಿ ವರ್ತಿಕಾ ಕಟಿಯಾರ್ ಅವರ ವರ್ಗಾವಣೆಯೂ ಆಗಿತ್ತು. ಆದರೆ ಈಗ ಆ ಆದೇಶವೇ ಉಲ್ಟಾ ಆಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ