ಸಿದ್ದು VS ಈಶ್ವರಪ್ಪ: ಜಿಪಂ ಅಧ್ಯಕ್ಷ ಗಾದಿಯೇ ಅಖಾಡ!

By Web Desk  |  First Published Mar 2, 2019, 8:04 PM IST

ಸಿದ್ದರಾಮಯ್ಯ & ಈಶ್ವರಪ್ಪ ಮಧ್ಯೆ ಪ್ರತಿಷ್ಠೆಯಾಗಿರೋ ಬಾಗಲಕೋಟೆ ಜಿಪಂ ಅಧ್ಯಕ್ಷಗಿರಿ| ಕಾಂಗ್ರೆಸ್‌ನ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ರಾಜೀನಾಮೆ| ಒಟ್ಟು 36 ಬಲದ ಜಿಪಂನಲ್ಲಿ ಬಿಜೆಪಿ 18 , ಕಾಂಗ್ರೆಸ್ 17 ಸದಸ್ಯರು| 18 ಸದಸ್ಯರಿದ್ರೂ ಅಧಿಕಾರ ವಂಚಿತವಾಗಿದ್ದ ಬಿಜೆಪಿ| ಕುತೂಹಲ ಮೂಡಿಸಿರೋ ಜಿಪಂ ಸದಸ್ಯರ ನಡೆ|


ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಮಾ.02): ರಾಜ್ಯದಲ್ಲೀಗ ಎಲ್ಲಿ ನೋಡಿದ್ರೂ ಲೋಕಸಭೆ ಚುನಾವಣೆಯದ್ದೇ ಹವಾ. ಆದರೆ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಈಗ ಲೋಕಸಭಾ ಚುನಾವಣೆಗೂ ಮುನ್ನ ರಾಜಕೀಯ ನಾಯಕರಿಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನದ್ದೇ ಪ್ರತಿಷ್ಠೆಯಾಗಿದೆ. 

Tap to resize

Latest Videos

ಲೋಕಸಭಾ ಚುನಾವಣೆ ಹೊತ್ತಲ್ಲೇ ರಾಜೀನಾಮೆಯಿಂದ ತೆರವಾಗಿರೋ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರೋ ಪೈಪೋಟಿ ಇದೀಗ ಬಿಜೆಪಿಯಿಂದ ಜಿಲ್ಲೆಯ ಹೊಣೆ ಹೊತ್ತ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಮತ್ತು ಸ್ವಕ್ಷೇತ್ರದ ಜಿಲ್ಲೆಯ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯನವರ ಮಧ್ಯೆ ಪ್ರತಿಷ್ಠೆಯಾಗಿದೆ. 

 ರಾಜೀನಾಮೆಯಿಂದ ತೆರವಾಗಿರೋ ಬಾಗಲಕೋಟೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನ ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡುವಂತೆ ಮಾಡಿದೆ. ಲೋಕಸಭಾ ಚುನಾವಣೆಗೂ ಮುನ್ನ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನ ವಶಪಡಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಈಶ್ವರಪ್ಪ ನೇತೃತ್ವದ ಬಿಜೆಪಿ, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. 

ಒಟ್ಟು 36 ಸದಸ್ಯ ಬಲದ ಜಿಲ್ಲಾ ಪಂಚಾಯತಿಯಲ್ಲಿ ಬಿಜೆಪಿ 18 ಸದಸ್ಯರನ್ನು ಹೊಂದಿದ್ದರೆ ಇತ್ತ ಕಾಂಗ್ರೆಸ್ 17 ಸದಸ್ಯರನ್ನ ಹೊಂದಿದ್ದು, ಓರ್ವ ರೈತಸಂಘದ ಸದಸ್ಯರಿದ್ದಾರೆ. ಈ ಮೊದಲು ಬಿಜೆಯ ಓರ್ವ ಸದಸ್ಯೆಯನ್ನ ದೂರ ಉಳಿಯುವಂತೆ ನೋಡಿಕೊಂಡು ಅಧಿಕಾರದ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್, ಇದೀಗ ಸ್ವಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯರ ಅತೃಪ್ತ ನಡೆಯಿಂದ ಹಾಲಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾಜಿ ಸಿಎಂ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

"

ರಾಜೀನಾಮೆ ಕೊಡೋವರೆಗೂ ಮುನ್ನ ಅತೃಪ್ತ ಕೈ ಸದಸ್ಯರೊಂದಿಗೆ ಕೈ ಜೋಡಿಸಿ ಜಿಲ್ಲಾ ಪಂಚಾಯಿತಿ ಆಡಳಿತ ಮಾಡ್ತೇವೆ ಅಂತ ಬಿಜೆಪಿ ಸದಸ್ಯರು ಅಂದಿದ್ರು. ಆದ್ರೆ ಇದೀಗ ಅಧ್ಯಕ್ಷೆ ರಾಜೀನಾಮೆ ಕೊಟ್ಟಿದ್ದೇ ತಡ ಇತ್ತ ಉಪಾಧ್ಯಕ್ಷರು ರಾಜೀನಾಮೆ ನೀಡಿಲ್ಲ ಅನ್ನೋ ಕಾರಣಕ್ಕೆ ಬಿಜೆಪಿ ಸದಸ್ಯರು ಬಿಜೆಪಿ ಸ್ವಂತ ಬಲದ ಮೇಲೆ ಜಿಪಂ ಅಧ್ಯಕ್ಷ ಸ್ಥಾನ ಪಡೆಯೋಕೆ ಮುಂದಾಗಿದೆ.

ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯನವರು ಜಿಲ್ಲೆಯ ಶಾಸಕರಾಗಿರೋದ್ರಿಂದ ಶತಾಯಗತಾಯ ಮತ್ತೇ ಅಧ್ಯಕ್ಷ ಸ್ಥಾನವನ್ನ ಕಾಂಗ್ರೆಸ್ ಪಕ್ಷಕ್ಕೆ ಮರಳಿ ತರಬೇಕೆನ್ನವಲ್ಲಿ ಇನ್ನಿಲ್ಲದ ಕಸರತ್ತು ನಡೆಸಿದ್ದು, ಇತ್ತ ಬಹುಮತಕ್ಕೆ ಸಂಖ್ಯಾಬಲದ ಕೊರತೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ರಾಜಕೀಯ ಆಟಮೇಲಾಟಗಳು ನಡೆಯಬೇಕಿರೋದು ಈಗಿನ ಅನಿವಾರ್ಯತೆ ಆಗಿದೆ. 

ಈ ಮಧ್ಯೆ ಈಗಲೂ ಕೆಲವು ಕಾಂಗ್ರೆಸ್ ಸದಸ್ಯರು ಬಿಜೆಪಿಯೊಂದಿಗೆ ಕೈ ಜೋಡಿಸಿ ಆಡಳಿತ ನಡೆಸುತ್ತೇವೆ ಅನ್ನೋ ಲೆಕ್ಕಾಚಾರದಲ್ಲೂ ಇದ್ದಾರೆ. ಆದ್ರೆ ಲೋಕಸಭಾ ಚುನಾವಣೆಗೆ ಉಸ್ತುವಾರಿ ಹೊಣೆ ಹೊತ್ತಿರೋ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು, ಇನ್ನೊಂದೆಡೆ ಹಿಂದೆ ಆದ ತಪ್ಪನ್ನ ಮಾಡದೇ ರಾಜಕೀಯ ಜಾಣ್ಮೆಯ ನಡೆಯಿಂದ ಈ ಬಾರಿ ಸ್ವಂತ ಬಲದ ಮೇಲೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನ ಪಡೆಯೋಕೆ ಮುಂದಾಗಿದೆ.

"

ಇನ್ನು ಈ ಮಧ್ಯೆ ರೆಸಾರ್ಟ ರಾಜಕಾರಣ ನಡೆಯುವುದರೊಂದಿಗೆ ಕುದುರೆ ವ್ಯಾಪಾರ ನಡೆಯೋ ಲೆಕ್ಕಾಚಾರವೂ ಇದೆ.  ಇವೆಲ್ಲವುದರ ಮಧ್ಯೆ ಬಿಜೆಪಿ ಕಾಂಗ್ರೆಸ್ ಪಕ್ಷಗಳ ಎರಡರಲ್ಲಿಯೂ ಆಪ್ತರನ್ನ ಹೊಂದಿರೋ ರೈತಸಂಘದ ಸದಸ್ಯ, ಹಾಲಿ ಹಂಗಾಮಿ ಅಧ್ಯಕ್ಷ ಮುತ್ತಪ್ಪ ಕೋಮಾರ, ಅಧ್ಯಕ್ಷ ಗಾದಿಗೆ ಏನೇ ರಾಜಕೀಯ ನಡೆದ್ರೂ ತಮ್ಮನ್ನ ಗೆಲ್ಲಿಸಿದ ಮತಕ್ಷೇತ್ರದ ಜನ್ರ ಅಭಿಪ್ರಾಯ ಪಡೆದು ನಾನು ಮುನ್ನಡೆಯುತ್ತೇನೆ ಎನ್ನುವ ಮೂಲಕ ರಾಜಕೀಯ ಜಾಣ್ಮೆ ಪ್ರದರ್ಶನ ಮಾಡಿದ್ದಾರೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಮುಂದಾಗಿರೋ ರಾಜ್ಯ ರಾಜಕೀಯ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಡಿಸಿಎಂ ಈಶ್ವರಪ್ಪನವರಿಗೆ ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗದ್ದುಗೆ ಹಿಡಿಯೋದು ಅಗ್ನಿ ಪರೀಕ್ಷೆ ಎದುರಾಗಿದೆ.ಇಬ್ಬರು  ರಾಜಕೀಯ ದಿಗ್ಗಜರ ತಂತ್ರ-ಪ್ರತಿತಂತ್ರದ ಮೂಲಕ ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಯಾರ ಪಾಲಾಗುತ್ತೆ ಅಂತ ಕಾದು ನೋಡಬೇಕಿದೆ.

click me!