ರಾಜ್ಯದಲ್ಲಿ ಸರ್ಕಾರ ಆಸ್ತಿ ನಗದೀಕರಣ ಮಾಡಲು ಹೊರಟಿರುವುದು ಸರ್ಕಾರ ಸಂಪೂರ್ಣ ದಿವಾಳಿಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಗದಗ (ಜೂ.18): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳು ಸೇರಿ ವಿವಿಧ ತೆರಿಗೆಗಳು ಹಾಗೂ ದರಗಳನ್ನು ಹೆಚ್ಚಳ ಮಾಡಿರುವುದು ಮಾತ್ರವಲ್ಲದೇ ಈಗ ಆಸ್ತಿ ನಗದೀಕರಣ ಮಾಡಲು ಹೊರಟಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಬಡ ಜನ ಹಾಗೂ ಸಾಮಾನ್ಯ ಜನರ ಮೇಲೆ ಒಂದಾದ ಮೇಲೆ ಒಂದು ಬರೆ ಎಳೆಯುತ್ತಿದೆ. ಕಳೆದ ವರ್ಷ ಆಸ್ತಿ ನೋಂದಣಿಯ ಸ್ಟ್ಯಾಂಪ್ ಡ್ಯೂಟಿಯನ್ನು ಹೆಚ್ಚಿಸಿದ್ದು, ಮೋಟರ್ ವೆಹಿಕಲ್ ಟ್ಯಾಕ್ಸ್, ಹಾಲು, ಮದ್ಯದ ದರ ಹೆಚ್ಚಿಸಿ ಹಾಗೂ ಇತ್ತೀಚೆಗೆ ಪೆಟ್ರೋಲ್ ಡಿಸೇಲ್ ದರ ಹೆಚ್ಚಿಸಿ ಬಡವರಿಗೆ ನೇರವಾಗಿ ಬರೆ ಎಳೆದಿದೆ. ಎಲ್ಲ ವರ್ಗದ ಬಡವರ ಹೆಸರಿನಲ್ಲಿ ಆಯ್ಕೆಯಾದ ಕಾಂಗ್ರೆಸ್ ಅವರಿಗೇ ದ್ರೋಹ ಮಾಡಿದೆ ಎಂದು ಆರೋಪ ಮಾಡಿದರು.
undefined
ಒಂದು ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದಾಗ ಅದು ಕೊನೆಯದಾಗಿ ಪಿತ್ರಾರ್ಜಿತ ಆಸ್ತಿ ಮಾರುವುದು. ಅದೇ ರೀತಿ ಈ ಸರ್ಕಾರ ಕೊನೆಯ ಹಂತ ತಲುಪಿದೆ. ರಾಜ್ಯದ ಸಾವಿರಾರು ವರ್ಷದ ಆಸ್ತಿಯನ್ನು ಮಾರಲು ಮತ್ತು ನಗದೀಕರಣ ಮಾಡಲು ಹೊರಟಿರುವುದು ರಾಜ್ಯವನ್ನು ಹಣಕಾಸಿನ ದುರ್ಗತಿಗೆ ತೆಗೆದುಕೊಂಡು ಹೋಗಿರುವುದು ಸಾಕ್ಷಿ. ಈ ರೀತಿಯ ಕ್ರಮಗಳನ್ನು ಹಿಂದಿನ ಯಾವುದೇ ಸರ್ಕಾರಗಳು ತೆಗೆದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಚಾಮರಾಜನಗರದಲ್ಲಿ ಶ್ರೀಲಂಕಾ ಕ್ರಿಕೆಟರ್ ಮುತ್ತಯ್ಯ ಮುರುಳೀಧರನ್ 1,400 ಕೋಟಿ ರೂ. ಹೂಡಿಕೆ!
ಭ್ರಷ್ಟಾಚಾರದ ಹುನ್ನಾರ: ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹೇಳುವ ಪ್ರಕಾರ ಆಸ್ತಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಗದೀಕರಣ ಮಾಡುವುದು ರಿಯಲ್ ಎಸ್ಟೇಟ್ ಕುಳಗಳಿಗೆ ಸಾವಿರಾರು ಕೋಟಿ ರೂ. ಲಾಭ ಮಾಡಿಕೊಡುವ ಹುನ್ನಾರ ಇದೆ. ಮತ್ತು ಇದರಲ್ಲಿ ಸರ್ಕಾರ ಸಾವಿರಾರು ಕೋಟಿ ಭ್ರಷ್ಟಾಚಾರದ ಡೀಲನ್ನು ಮಾಡಿಕೊಳ್ಳುವ ಹುನ್ನಾರವೂ ಕಾಣಿಸುತ್ತದೆ. ಮುಖ್ಯಮಂತ್ರಿಗಳು ಏನೇ ಹೇಳಿದರೂ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಕೂಡ ಡೀಲ್ ಮಾಡಲು ಹೊರಟಿರುವ ರಾಜ್ಯ ಸರ್ಕಾರ ರಾಜ್ಯ ದ್ರೋಹ ಹಾಗೂ ಜನದ್ರೋಹ ಮಾಡುತ್ತಿದೆ. ಇದರ ವಿರುದ್ದ ಬಿಜೆಪಿ ಜನಾಂದೋಲನವನ್ನು ಮಾಡುವುದು ಅತ್ಯಂತ ಅವಶ್ಯ ಮತ್ತು ಅನಿವಾರ್ಯ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಹಂಚಿಕೆ ಮಾಡಿ ಅಪೂರ್ಣಗೊಂಡ ಕಾಮಗಾರಿಗಳಿಗೆ ಹೊಸ ಟೆಂಡರ್: ಸಿಎಂ ಸಿದ್ದರಾಮಯ್ಯ
ಈಗಾಗಲೇ ಬಜೆಟ್ ನಲ್ಲಿ 1.05 ಲಕ್ಷ ಕೋಟಿ ಸಾಲವನ್ನು ರಾಜ್ಯ ಸರ್ಕಾರ ಪಡೆದುಕೊಳ್ಳುತ್ತಿದ್ದು, ಮತ್ತು ಸುಮಾರು 20 ಸಾವಿರ ಕೋಟಿ ರೂ. ಹೊಸ ತೆರಿಗೆಯ ಭಾರವನ್ನು ರಾಜ್ಯದ ಬಡ ಜನತೆಯ ಮೇಲೆ ಹೇರುತ್ತಿದ್ದು, ಈ ಎಲ್ಲದರ ಬಗ್ಗೆಯೂ ಕೂಡ ಸಂಪೂರ್ಣ ವಿವರಗಳನ್ನು ಮುಖ್ಯಮಂತ್ರಿಗಳು ಜನರಿಗೆ ಕೊಡಬೇಕು. ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು 15 ಬಜೆಟ್ ಮಂಡನೆ ಮಾಡಿರುವ ಆರ್ಥಿಕ ತಜ್ಞರೆಂದು ಹೇಳಿಕೊಂಡಿದ್ದಾರೆ. ಇಬ್ಬರು ಆರ್ಥಿಕ ಸಲಹೆಗಾರರನ್ನು ತೆಗೆದುಕೊಂಡಿದ್ದಾರೆ. ಆದರೆ, ಅವರಿಗೂ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಾಸ್ಟನ್ ಎಂಬ ಸಂಸ್ಥೆಯಿಂದ ಆರ್ಥಿಕ ಸಲಹೆ ಪಡೆಯುವ ದಡ್ಡತನ ಮಾಡಿ ಈ ಥರದ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಸರ್ಕಾರ ಈ ಹಂತದಲ್ಲೇ ಒಪ್ಪಂದ ರದ್ದು ಪಡಿಸಲು ಆಗ್ರಹಿಸುತ್ತೇನೆ ಎಂದು ತಿಳಿಸಿದರು.