
ಬೆಂಗಳೂರು (ಮೇ.4): ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಮಹತ್ವದ ಹೇಳಿಕೆ ನೀಡಿದ್ದಾರೆ. 'ಸಮಗ್ರವಾಗಿ ಈ ಚುನಾವಣೆಗಳನ್ನು ನೋಡಿದಾಗ ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಪೂರ್ಣವಾಗಿ ಮುಕ್ತವಾಗುತ್ತಿದೆ ಎಂಬ ಸ್ಪಷ್ಟ ಸಂದೇಶ ಸಿಕ್ಕಿದೆ. ಇಲ್ಲಿನ ಜನರು ಬಹಳ ಸೂಕ್ಷ್ಮವಂತರು, ಬಿಜೆಪಿಯವರು ಇಲ್ಲಿ ಬಾಲ ಬಿಚ್ಚಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಸರ್ಕಾರಿ ಯಂತ್ರ ಹಾಗೂ ಸಾಂವಿಧಾನಿಕ ಹುದ್ದೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ. ಪ.ಬಂಗಾಳದಲ್ಲಿ ಪೊಲೀಸ್ ಮತ್ತು ಮಿಲಿಟರಿ ಬಳಸಿಕೊಂಡು ಸುಮಾರು 93 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ನಮ್ಮ ಅಭ್ಯರ್ಥಿಗಳ ಮತಗಳನ್ನೇ ಲಿಸ್ಟ್‌ನಿಂದ ತೆಗೆದಿದ್ದಾರೆ. ಇಷ್ಟೊಂದು ಮತಗಳು ಹೋದರೆ ಪ್ರಜಾಪ್ರಭುತ್ವ ಎಲ್ಲಿ ಉಳಿಯುತ್ತದೆ? ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು ಅಂದರೆ ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದರು.
ತಮಿಳುನಾಡು ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ತಮಿಳುನಾಡಿನ ಜನರು ಪ್ರಬುದ್ಧರಾಗಿದ್ದಾರೆ. ಅಲ್ಲಿ ಕೋಮುವಾದ ಮತ್ತು ಹಿಂದಿ ಹೇರಿಕೆ ನಡೆಯುವುದಿಲ್ಲ ಎಂದು ಸರಿಯಾದ ಪಾಠ ಕಲಿಸಿದ್ದಾರೆ. ನಟ ವಿಜಯ್ ಅವರ ಟಿವಿಕೆ (TVK) ಪಕ್ಷಕ್ಕೆ ಶೇ. 24 ರಿಂದ 30 ರಷ್ಟು ವೋಟ್ ಶೇರ್ ಸಿಕ್ಕಿದೆ. ಅಲ್ಲಿ ಜೆನ್-ಝೀ (Gen Z) ಮತದಾರರು ಸಾಕಷ್ಟು ಕೆಲಸ ಮಾಡಿದ್ದಾರೆ. ತಮಿಳುನಾಡಿನಲ್ಲಿ ಯಾವುದಾದ್ರೂ ಪಕ್ಷ ಉಳಿದಿದೆ ಅಂದರೆ ಅದು ಕಾಂಗ್ರೆಸ್ ಮಾತ್ರ. ಇದನ್ನ ಯಾರೂ ಅಂಡರ್ ಎಸ್ಟಿಮೇಟ್ ಮಾಡಲಿಲ್ಲ. 24-30 ಪರ್ಸೆಂಟ್ ವೋಟ್ ಟಿವಿಕೆದು ಇತ್ತು. ಸಾಂವಿಧಾನಿಕವಾಗಿ ಹೋಗಿದ್ದರೆ ಬೇರೆ ಪಕ್ಷಗಳಿಗೆ ಹೀಗೆ ಆಗ್ತಾ ಇರಲಿಲ್ಲ. ಕವಡೆ ಶಾಸ್ತ್ರಕ್ಕೆ ಹೋಗಿದ್ದಕ್ಕೆ ಹೀಗಾಯ್ತು ಅಷ್ಟೆ ಎಂದು ಅಭಿಪ್ರಾಯಪಟ್ಟರು.
ಪುದುಚೇರಿಯಲ್ಲಿ ಬಿಜೆಪಿ ಜಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಅಲ್ಲಿ ಜಯ ಸಿಕ್ಕಿರುವುದು ರಂಗಸ್ವಾಮಿ ಅವರ ಪ್ರಭಾವದಿಂದಲೇ ಹೊರತು ಬಿಜೆಪಿಯ ಕಾರಣಕ್ಕಲ್ಲ.ರಂಗಸ್ವಾಮಿ ವರ್ಚಸು ಬಳಸಿ ಗೆದ್ದಿರುವ ಬಿಜೆಪಿ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ರಾಜ್ಯ ರಾಜಕೀಯದ ಮೇಲೆ ಈ ಫಲಿತಾಂಶದ ಪ್ರಭಾವದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಹರಿಪ್ರಸಾದ್ ನಿರಾಕರಿಸಿದರು. 'ಎಐಸಿಸಿ ಅಧ್ಯಕ್ಷರು ಮಾತನಾಡಿದ ಮೇಲೆ ನಾನು ಏನೂ ಹೇಳಬಾರದು. ಹಾಗೇನಾದರೂ ಮಾತನಾಡಿದರೆ ಅದು ಪಕ್ಷ ವಿರೋಧ ಚಟುವಟಿಕೆಯಾಗುತ್ತದೆ. ಈಗ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ಈ ಕವಡೆ ಶಾಸ್ತ್ರ, ಗಿಳಿ ಶಾಸ್ತ್ರಗಳನ್ನೆಲ್ಲಾ ಬಿಟ್ಟು ಹೈಕಮಾಂಡ್ ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತೆ ಅಂತ ಕಾದು ನೋಡಬೇಕು ಅಷ್ಟೇ ಎಂದು ಮಾರ್ಮಿಕವಾಗಿ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ