
ಹುಬ್ಬಳ್ಳಿ: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಘಟನೆಯ ಪ್ರಮುಖ ಆರೋಪಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಆಗಿದ್ದು, ಸರ್ಕಾರ ಇವರ ಮೇಲೆ ದ್ವೇಷಭಾಷಣ ಕಾಯ್ದೆಯಡಿ ಮೊದಲ ಪ್ರಕರಣ ದಾಖಲಿಸಿ ಬಂಧಿಸುವಂತೆ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಸಿದಾಗ ನಡೆದ ಗಲಾಟೆಯ ವೇಳೆ ಶಾಸಕ ಜನಾರ್ದನ ರೆಡ್ಡಿ ಸ್ಥಳದಲ್ಲಿರಲಿಲ್ಲ. ಆಗ ಸ್ಥಳಕ್ಕೆ ಬಂದ ಶಾಸಕ ಭರತ್ ರೆಡ್ಡಿ, ಐದು ನಿಮಿಷದಲ್ಲಿ ಜನಾರ್ದನ ರೆಡ್ಡಿ ಅವರ ಮನೆ ಸುಟ್ಟು ಹಾಕುತ್ತಿದ್ದೆ, ಮೂರ್ತಿ ಪ್ರತಿಷ್ಠಾಪನೆಯಿಂದಾಗಿ ಬಿಟ್ಟಿದ್ದೇನೆ ಎಂದು ಬೆದರಿಕೆ ಹಾಕಿದ್ದರು. ಇದು ದ್ವೇಷ ಭಾಷಣ ಕಾಯ್ದೆಯಡಿ ಬರುವುದಿಲ್ಲವೇ? ಎಂದು ಪ್ರಶ್ನಿಸಿದರು.
ಸರ್ಕಾರಿ ಗನ್ ಮ್ಯಾನ್‌ಗಳು ಬಳಸುವ ಗುಂಡಿಗೆ ಕಡ್ಡಾಯವಾಗಿ ಲೆಕ್ಕ ನೀಡಬೇಕು. ಈಗಿನ ಶಾಸಕರು ಖಾಸಗಿಯಾಗಿ ಸಾಕಷ್ಟು ಮಂದಿ ಗನ್ ಮ್ಯಾನ್‌ಗಳನ್ನು ಇಟ್ಟುಕೊಂಡಿದ್ದಾರೆ. ಗುಂಡು ಹಾರಿಸಿ ಎಲ್ಲೋ ತಲೆ ಮರೆಸಿಕೊಳ್ಳುತ್ತಾರೆ. ಅವರು ಬಳಸುವ ಗುಂಡಿಗೆ ಲೆಕ್ಕ ಏಕೆ ಇಲ್ಲ? ಗುಂಪುಗೂಡಿದ್ದು, ಗಲಾಟೆ ನಡೆಸಿದ್ದು, ಹಲ್ಲೆ ನಡೆಸಿದ್ದು, ಗುಂಡು ಹೊಡೆದಿದ್ದು ಹಾಗೂ ಸತ್ತಿದ್ದು ಕಾಂಗ್ರೆಸ್ ಪಕ್ಷದವರು. ಆದರೆ, ಪ್ರಕರಣ ದಾಖಲಾಗಿದ್ದು ಮಾತ್ರ ಬಿಜೆಪಿಯ ಜನಾರ್ದನ ರೆಡ್ಡಿ, ಶ್ರೀರಾಮುಲು ಹಾಗೂ ಇತರರ ವಿರುದ್ಧ ಏಕೆ ಎಂದು ಹರಿಹಾಯ್ದರು.
ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಕಾರಣ ಯಾರು ಎನ್ನುವುದು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ತಿಳಿದಿದೆ. ಹೀಗಾಗಿಯೇ ಈ ಘಟನೆಯನ್ನು ಅವರು ಸಮರ್ಥಿಸಿಕೊಂಡಿಲ್ಲ. ಶಾಸಕ ಭರತ್ ರೆಡ್ಡಿ ದೂರವಾಣಿ ಕರೆ ಮಾಡಿದರೂ ಸಿಎಂ ಅವರ ಜೊತೆ ಮಾತನಾಡಲಿಲ್ಲ. ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಜತೆ ಮಾತನಾಡಿ, ಶಾಸಕರಿಗೆ ಬುದ್ಧಿ ಹೇಳುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಯಾರು ತನ್ನವರು ಎಂದುಕೊಂಡಿದ್ದರೋ ಅವರಿಂದಲೇ ಹೆಸರು ಹಾಳಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ