
ದಾವಣಗೆರೆ (ಅ.8): ಅರ್ಕಾವತಿ ಡಿನೊಟಿಫಿಕೇಶನ್ ಹಗರಣ ಮುಚ್ಚಿ ಹಾಕುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ದಾಖಲಾತಿಗಳನ್ನು ಮುಚ್ಚಿಹಾಕಲು ಯತ್ನಿಸಿದ್ದು, ನಮ್ಮ ಸರ್ಕಾರ ಹೊರತೆಗೆಯುತ್ತದೆ. ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ನಗರದ ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲಾವಧಿಯಲ್ಲಿನ ಹಗರಣಗಳು ಹೊರಬರುತ್ತವೆ ಎಂದು ತಿಳಿಸಿದರು. ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಖಾಲಿ ಇರುವ ಸ್ಥಾನಗಳನ್ನು ತುಂಬಬೇಕು ಎಂಬರ್ಥದಲ್ಲಿ ಹೇಳಿದ್ದಾರೆ. ಅವರು ನಿರಂತರವಾಗಿ ನಮ್ಮ ಜೊತೆಯಲ್ಲಿದ್ದಾರೆ. ಯಾವುದೇ ಗೊಂದಲ ಇಲ್ಲ. ಸಂಪುಟ ವಿಸ್ತರಣೆ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಅದು ಸರಿಯಾಗಿಯೇ ಇದೆ. ಈ ಬಗ್ಗೆ ಚರ್ಚಿಸಿ ವಿಸ್ತರಣೆ ಮಾಡಲಾಗುತ್ತದೆ. ಸಂಪುಟ ವಿಸ್ತರಣೆ ಮಾಡುವ ವಿಚಾರ ಸಿಎಂ ವಿವೇಚನೆಗೆ ಬಿಟ್ಟದ್ದು. ಅದರಲ್ಲಿ ಚರ್ಚೆ ಮಾಡುವುದೇನಿಲ್ಲ ಎಂದು ಹೇಳಿದರು. ಭಾರತ್ ಜೋಡೊ ಯಾತ್ರೆ ಮಾಡುತ್ತಿರುವುದರಿಂದ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿಲ್ಲ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಅಧಿಕಾರದಲ್ಲಿದ್ದಾಗ ಯಾಕೆ ಮಾಡಲಿಲ್ಲ. ಆಗ ಈ ಸಮುದಾಯಗಳ ಬಗ್ಗೆ ಕಾಳಜಿ ಇರಲಿಲ್ವಾ. ನುಡಿದಂತೆ ನಡೆದ ಮುಖ್ಯಮಂತ್ರಿ, ಮಾತು ತಪ್ಪದ ಸರ್ಕಾರ ನಮ್ಮದು. ಅವರ ಕಾಳಜಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಎಲ್ಲವನ್ನೂ ಅಧ್ಯಯನ ಮಾಡಿ ಕ್ರಮ ವಹಿಸಲಾಗಿದೆ ಎಂದರು.
ಭಾರತ್ ಜೋಡೊ ಯಾತ್ರೆ ಅಲ್ಲ, ಓಡೋ ಯಾತ್ರೆ. ದೇಶದ ವಿಭಜನೆ ಮಾಡಿದ್ದು ಕಾಂಗ್ರೆಸ್ಸಿಗರು. ಗಾಂಧೀಜಿಗೂ ಈ ಗಾಂಧೀಜಿಗೂ ಏನು ಸಂಬಂಧ ಎಂದು ಮಕ್ಕಳು ಕೇಳುತ್ತಿದ್ದಾರೆ. ದೇಶದ ವಿಭಜನೆಗೆ ಕಾರಣ ಹಾಗೂ ಬಹುಸಂಖ್ಯಾತ ಸಮುದಾಯದ ಜಾತಿ ಜಾತಿಗಳ ನಡುವೆ ಜಗಳ, ಮುಸಲ್ಮಾನ ಸಮುದಾಯವನ್ನು ಹಿಂದುಗಳ ಮೇಲೆ ಎತ್ತಿಕಟ್ಟುವ ಕೆಲಸ ಮಾಡಿದ್ದೇ ಕಾಂಗ್ರೆಸ್. ಜಾತಿ, ಭಾಷೆ, ಭೌಗೋಳಿಕ ವಿಭಜನೆ ಮಾಡಿ ದೇಶ ಇಬ್ಬಾಗ ಮಾಡಿ ಈಗ ಯಾತ್ರೆ ನಡೆಸಿದರೆ ಏನು ಪ್ರಯೋಜನ. ಪಾಕಿಸ್ತಾನ ಜಿಂದಾಬಾದ್ ಎನ್ನುವ ತಬ್ಲಿಘಿಗಳು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮನಸ್ಸು ವಿಭಜನೆ ಮಾಡುವ ಯಾತ್ರೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸಲ್ಮಾನ ಸಮುದಾಯದವರು ಟಿಪ್ಪು ಜಯಂತಿ ಕೇಳಿರಲಿಲ್ಲ. ಆದರೂ ಸಿದ್ದರಾಮಯ್ಯ ಜಯಂತಿ ಮಾಡಲು ಅವಕಾಶ ಕೊಟ್ಟರು. ಈ ಮೂಲಕ ಮುಸ್ಲಿಂರ ಭಾವನೆ ಕೆರಳುವಂತೆ ಮಾಡಿದ್ದೇ ಸಿದ್ದರಾಮಯ್ಯ. ವೀರಶೈವ ಲಿಂಗಾಯತ ಸಮುದಾಯ ಒಡೆಯಲು ಯತ್ನಿಸಿ ಸಮಾಜ ಇಬ್ಬಾಗ ಮಾಡಲು ಹೋಗಿ ಏನಾದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅರ್ಕಾವತಿ ಯೋಜನೆ ಭ್ರಷ್ಟಾಚಾರ ನಡೆದಿಲ್ಲವೇ?: ಈಶ್ವರಪ್ಪ ಪ್ರಶ್ನೆ
ಅ. 11ರಿಂದ ಬಿಜೆಪಿ ಯಾತ್ರೆ ಶುರುವಾಗುತ್ತದೆ. ನಾನು ಈಗಾಗಲೇ ಪ್ರವಾಸ ಶುರು ಮಾಡಿದ್ದೇನೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರವಾಸ ನಡೆಸಲಿದ್ದಾರೆ ಎಂದು ತಿಳಿಸಿದ ಅವರು, ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರ ಭಾವನೆಗಳ ಬೆಂಬಲವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡು ಸಮಯದಾಯಗಳಿಗೆ ನ್ಯಾಯ ಸಿಕ್ಕಂತಾಗಿದೆ. ಬೇರೆ ಸಮುದಾಯಗಳಿಗೆ ಕಾನೂನು ವಿವರ ಪಡೆದು ಯೋಚನೆ ಮಾಡಿಯೇ ಮಾಡಲಾಗುತ್ತದೆ ಎಂದರು.
Karnataka Politics: ಕಾಂಗ್ರೆಸ್‌ನ ಮಟಾಶ್ ಲೆಗ್ ಬಗ್ಗೆ ಹುಷಾರು: ಸಿ.ಟಿ.ರವಿ
ಬೆಂಗಳೂರು – ಮೈಸೂರು ನಡುವೆ ಸಂಚರಿಸುವ ಟಿಪ್ಪು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಟಿಪ್ಪು ಹೆಸರು ಕೈಬಿಟ್ಟಿರುವುದನ್ನು ಸಮರ್ಥಿಸಿಕೊಂಡ ನಳೀನ್ ಕುಮಾರ್ ಕಟೀಲ್, ಟಿಪ್ಪು ಹೆಸರಿನ ಬದಲಿಗೆ ಒಡೆಯರ್ ಹೆಸರು ಇಟ್ಟಿರುವುದು ಒಳ್ಳೆಯದು. ರಾಜ್ಯಕ್ಕೆ ಒಡೆಯರ್ ದೊಡ್ಡ ಕೊಡುಗೆ ನೀಡಿದ ಅಭಿವೃದ್ದಿಯ ಹರಿಕಾರರು. ಮೊದಲ ಬಾರಿಗೆ ಸಕ್ಕರೆ ಕಾರ್ಖಾನೆ ಆರಂಭಿಸಿದವರು. ಹತ್ತಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ