#MeToo : ಸರ್ಜಾ ಎದುರಿಸಿದ ಆ ಮೂರು ತಾಸು..!

By Web DeskFirst Published Nov 6, 2018, 9:35 AM IST
Highlights

ನಟಿ ಶ್ರುತಿ ಹರಿಹರನ್‌ ಅವರು ನೀಡಿದ ದೂರಿನ ಮೇರೆಗೆ ನಟ ಅರ್ಜುನ್‌ ಸರ್ಜಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಅರ್ಜುನ್‌ ಸರ್ಜಾ ಮೂರು ತಾಸು 40 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. 

ಬೆಂಗಳೂರು :  ‘ವಿಸ್ಮಯ ಸಿನಿಮಾ ಚಿತ್ರೀಕರಣ ಸುಮಾರು 50 ಮಂದಿ ಎದುರಿಗೆ ಆಗಿದೆ. ನಾನು ಶ್ರುತಿ ಹರಿಹರನ್‌ ಅವರ ಜತೆ ಪತಿ ಆಗಿ ಅಭಿನಯಿಸಿದ್ದು, ಸೆಟ್‌ನಲ್ಲಿ ನಟಿ ಶ್ರುತಿ ಅವರನ್ನು ತಬ್ಬಿಕೊಂಡಿದ್ದು ಒಪ್ಪಂದದ ಭಾಗ. ನಿರ್ದೇಶಕರ ಅಣತಿಯಂತೆ ಅಭಿಯನ ಮಾಡಿದ್ದೇನೆ. ಯಾವುದೇ ದುರುದ್ದೇಶ ಇಲ್ಲ, ನನ್ನ ವಿರುದ್ಧದ ಆರೋಪ ಎಲ್ಲವೂ ದುರುದ್ದೇಶದಿಂದ ಕೂಡಿದೆ’ ಎಂದು ನಟ ಅರ್ಜುನ್‌ ಸರ್ಜಾ ತನಿಖಾಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾರೆ.

ನಟಿ ಶ್ರುತಿ ಹರಿಹರನ್‌ ಅವರು ನೀಡಿದ ದೂರಿನ ಮೇರೆಗೆ ನಟ ಅರ್ಜುನ್‌ ಸರ್ಜಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಅರ್ಜುನ್‌ ಸರ್ಜಾ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ಇನ್ಸ್‌ಪೆಕ್ಟರ್‌ ಅಯ್ಯಣ್ಣ ರೆಡ್ಡಿ ಅವರ ಬಳಿ ವಿಚಾರಣೆಗೆ ಹಾಜರಾದ ಸರ್ಜಾ ಅವರು ಸುಮಾರು ಮೂರು ಗಂಟೆಗಳ ಕಾಲ ಸುಮಾರು 40 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಲಿಖಿತ ಹೇಳಿಕೆಯನ್ನು ಸರ್ಜಾ ಅವರಿಂದ ಪಡೆದುಕೊಂಡಿದ್ದಾರೆ.

ಶ್ರುತಿಹರಿಹರನ್‌ ಅವರ ಆರೋಪ ಹಾಗೂ ನಾಲ್ವರು ಸಾಕ್ಷ್ಯಗಳು ನೀಡಿದ್ದ ಹೇಳಿಕೆ ಆಧಾರಿಸಿ ತನಿಖಾಧಿಕಾರಿ ಪ್ರಶ್ನೆಗಳನ್ನು ಕೇಳಿದರು. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸುತ್ತಿರುವ ನಟಿ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನನ್ನನ್ನು ಹಾಡಿ ಹೊಗಳಿದ್ದರು. ಚಿತ್ರೀಕರಣದ ವೇಳೆ ನನ್ನ ಮುಂದೆ ಅಥವಾ ನಿರ್ದೇಶಕರ ಮುಂದಾಗಲಿ ನಟಿ ಕಣ್ಣೀರು ಹಾಕಿರಲಿಲ್ಲ. ಬೇಕಿದ್ದರೆ ಚಿತ್ರೀಕರಣದ ವೀಡಿಯೋ ತರಿಸಿ ನೋಡಿ. ನಾನು ಕೆಟ್ಟಉದ್ದೇಶದಿಂದ ತಬ್ಬಿಕೊಂಡಿದ್ದರೆ ಅದು ನನ್ನ ಮುಖಭಾವದಲ್ಲಿ ಕಾಣಿಸುತ್ತದೆ. ಸಿನಿಮಾದ ದೃಶ್ಯಕ್ಕೆ ತಕ್ಕಂತೆ ನಾನು ಅವರನ್ನು ತಬ್ಬಿಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ರೂಮಿಗೆ ಬನ್ನಿ ಮಜಾ ಮಾಡೋಣ ಎಂದು ಕರೆದಿದ್ದಾರೆ ಎನ್ನುವ ಆರೋಪಕ್ಕೂ ಉತ್ತರಿಸಿದ ಸರ್ಜಾ, ಹೆಬ್ಬಾಳ ಸಮೀಪದ ಬಂಗಲೆಯಲ್ಲಿ ರಿಹರ್ಸಲ್‌ ನಡೆದಿತ್ತು. ಆಗಲೂ ಹಲವರು ನಮ್ಮ ಎದುರಿಗಿದ್ದರು. ಅವರೆಲ್ಲರ ಎದುರಿಗೆ ನಾನು ಅಸಭ್ಯವಾಗಿ ವರ್ತಿಸಿದ್ದರೆ ಆ ಕ್ಷಣದಲ್ಲೇ ಈ ವಿಷಯ ಎಲ್ಲರಿಗೂ ಗೊತ್ತಾಗಿರುತ್ತಿತ್ತು. ಯುಬಿ ಸಿಟಿಯಲ್ಲಿ ಚಿತ್ರೀಕರಣ ಇದ್ದಾಗಲೂ ನಾನು ಯಾರನ್ನೂ ಕೊಠಡಿಗೆ ಕರೆದಿಲ್ಲ. ನಾನು ಸೆಟ್‌ನಲ್ಲಿದ್ದ ಎಲ್ಲರ ಜತೆ ಊಟಕ್ಕೆ ಹೋಗಿದ್ದೆ. ಆಗ ಶ್ರುತಿ ಅವರನ್ನೂ ಕರೆದಿದ್ದೆ. ಅವರೊಬ್ಬರನ್ನೇ ಪ್ರತ್ಯೇಕವಾಗಿ ಕರೆದಿರಲಿಲ್ಲ. ಒಬ್ಬ ಸಹನಟಿಯಾಗಿ ಮಾತ್ರ ಅವರನ್ನು ನೋಡಿದ್ದೇನೆ. ಕೆಟ್ಟದೃಷ್ಟಿಯಿಂದ ಅವರನ್ನು ನೋಡಿದ್ದೇನೆ ಎಂದು ಉತ್ತರಿಸಿದರು ಎಂದು ತಿಳಿದುಬಂದಿದೆ.

ಶ್ರುತಿಯನ್ನು ಸಿನಿಮಾಗೆ ಆಯ್ಕೆ ಮಾಡುವ ಆಡಿಷನ್‌ನಲ್ಲೂ ನಾನು ಇರಲಿಲ್ಲ. ನಿರ್ದೇಶಕ ಅರುಣ್‌ ಹೇಳಿದ ಬಳಿಕವಷ್ಟೇ ನನಗೆ ಆಕೆಯ ಬಗ್ಗೆ ತಿಳಿಯಿತು. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಮಾತ್ರ ನಾನು ಆಕೆಯನ್ನು ನೋಡಿದ್ದು. ಅದಕ್ಕೂ ಮೊದಲು ಎಂದಿಗೂ ನೋಡಿಲ್ಲ. ಪರಿಚಯ ಕೂಡ ಇಲ್ಲ. ಶ್ರುತಿಯನ್ನು ಒಬ್ಬ ಕಲಾವಿದೆಯಾಗಿ ನೋಡಿದ್ದೇನೆಯೇ ಹೊರತು ಬೇರೆ ಯಾವ ದೃಷ್ಟಿಯಿಂದ ನೋಡಿಲ್ಲ ಎಂದು ಸರ್ಜಾ ಸ್ಪಷ್ಟನೆ ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೆಳಗ್ಗೆ ವಿಚಾರಣೆಗೆ ಹಾಜರಾದ ಅರ್ಜನ್‌ ಸರ್ಜಾ ಜತೆ ಅಳಿಯಂದಿರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹಾಗೂ ಆಪ್ತ ಪ್ರಶಾಂತ್‌ ಸಂಬರಗಿ, ಮ್ಯಾನೇಜರ್‌ ಶಿವಾರ್ಜುನ್‌ ಠಾಣೆಗೆ ಬಂದಿದ್ದರು.

ಅರ್ಜುನ್‌ ಸರ್ಜಾ ಕಬ್ಬನ್‌ಪಾರ್ಕ್ ಠಾಣೆಗೆ ಆಗಮಿಸುತ್ತಿರುವ ವಿಚಾರ ತಿಳಿದ ಕೂಡಲೇ ಸರ್ಜಾ ಅವರ ನೂರಾರು ಮಂದಿ ಅಭಿಮಾನಿಗಳು ಠಾಣೆ ಮುಂದೆ ಜಮಾಯಿಸಿದರು. ಸರ್ಜಾ ಪರ ಘೋಷಣೆ ಕೂಗಿದರು. ಮುಂಜಾಗ್ರತಾ ಕ್ರಮವಾಗಿ ಠಾಣೆ ಬಳಿ ಬಂದೋಬಸ್ತ್ ಮಾಡಲಾಗಿತ್ತು.

click me!