
ಬೆಂಗಳೂರು(ಆ.13): ಬೆಳೆಯ ಸಮೀಕ್ಷೆಗೆ ಅನುಕೂಲವಾಗುವಂತೆ ಕೃಷಿ ಇಲಾಖೆ ನೂತನ ಆ್ಯಪ್ ಅಭಿವೃದ್ಧಿ ಪಡಿಸಿದ್ದು ಇನ್ನು ಮುಂದೆ ಅಂಗೈನಲ್ಲಿಯೇ ಬೆಳೆಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗಲಿದೆ.
ಬುಧವಾರ ಆನ್‌ಲೈನ್ ಮೂಲಕ ನೂತನ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಕೃಷಿಕರು ಮತ್ತು ಕೃಷಿ ಇಲಾಖೆ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲು ರಾಜ್ಯ ಇ- ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ‘ರೈತ ಬೆಳೆ ಸಮೀಕ್ಷೆ ಆಪ್’(ಫಾರ್ಮರ್ಸ್ ಕ್ರಾಪ್ ಸರ್ವೆ ಆ್ಯಪ್ 2020-21) ಅನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದರು.
ರೈತರು ಯಾವ ಬೆಳೆ ಬೆಳೆಯುತ್ತಾರೆ, ಎಷ್ಟು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ಆ್ಯಪ್‌ನಲ್ಲಿ ನಮೂದಿಸಬೇಕು. ಇದರಿಂದ ಒಂದು ವೇಳೆ ಪ್ರವಾಹ, ಬರ ಸೇರಿದಂತೆ ಇತರ ಕಾರಣಗಳಿಂದ ಬೆಳೆ ಹಾನಿ ಸಂಭವಿಸಿದ ಸಂದರ್ಭದಲ್ಲಿ ಸುಲಭವಾಗಿ ಸಮೀಕ್ಷೆ ನಡೆಸಲು, ಮಾಹಿತಿ ಪಡೆಯಲು ಇದು ಸಹಕಾರಿಯಾಗಲಿದೆ. ಈ ಆ್ಯಪ್ ಮೂಲಕ ಶೀಘ್ರವಾಗಿ ಪರಿಹಾರ ನೀಡಬಹುದಾಗಿದೆ ಎಂದು ಹೇಳಿದರು.
ಕಳೆದ ವರ್ಷಕ್ಕಿಂತ 5 ಲಕ್ಷ ಹೆಕ್ಟೇರ್ ಹೆಚ್ಚು ಬಿತ್ತನೆ!
ಆ್ಯಪ್‌ನಲ್ಲಿ ಮಾಹಿತಿ ನೋಂದಣಿ:
‘ಫಾರ್ಮರ್ಸ್ ಕ್ರಾಪ್ ಸರ್ವೆ ಆ್ಯಪ್’ ಅನ್ನು ರೈತರು ಆಂಡ್ರಾಯಿಡ್ ಮೊಬೈಲ್ ಸಹಾಯದಿಂದ ಪ್ಲೇ ಸ್ಟೋರ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ತಮ್ಮ ಮೊಬೈಲ್ ನಂಬರ್‌ಗೆ ಬರುವ ಓಟಿಪಿ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. ನೋಂದಣಿಯಾದ ನಂತರ ತಮ್ಮ ಜಮೀನಿನ ಸರ್ವೇ ನಂಬರ್ ಸೇರಿದಂತೆ ಇತರೆ ಮಾಹಿತಿಗಳು, ಗ್ರಾಮ, ತಾಲೂಕು, ಜಿಲ್ಲೆ ಇತ್ಯಾದಿ ವಿವರಗಳನ್ನು ನಮೂದಿಸಬೇಕು.
ಜಮೀನಿನ ಮಾಹಿತಿ ಹಾಗೂ ತಮ್ಮ ಗ್ರಾಮದ ಜಿಐಎಸ್ ನಕ್ಷೆಯನ್ನು ಡೌನ್ಲೋಡ್ ಮಾಡಿ ಜಮೀನಿನಲ್ಲಿ ಬೆಳೆದ ಬೆಳೆ ಹಾಗೂ ಇತರೆ ವಿವರಗಳನ್ನು ಮತ್ತು ಛಾಯಾಚಿತ್ರಗಳನ್ನು ಮೊಬೈಲ್ ಆಪ್ ನಲ್ಲಿ ಸಂಗ್ರಹಿಸಿ ಅಪ್ಲೋಡ್ ಮಾಡಬೇಕು. ಆಗ ರೈತರ ಸರ್ವೆ ನಂಬರ್, ಜಮೀನಿನ ಬೆಳೆಯ ವಿವರಗಳನ್ನು ‘ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್’ ನಲ್ಲಿ ಸಂಗ್ರಹಣೆ ಮಾಡಿ ವಿವಿಧ ಯೋಜನೆಗಳಿಗೆ ಬಳಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ