ಬ್ರಿಟನ್‌ನಿಂದ ಬೆಂಗಳೂರಿಗೆ ಬಂದಿದ್ದ ಮತ್ತೊಬ್ಬರಿಗೆ ಕೊರೋನಾ ದೃಢ

By Kannadaprabha NewsFirst Published Dec 29, 2020, 7:53 AM IST
Highlights

ರೂಪಾಂತರಿ ಕೊರೋನಾ ವೈರಸ್‌ ಪತ್ತೆಯಾಗಿರುವ ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ಹಿಂದಿರುಗಿರುವವರ ಪೈಕಿ ಸೋಮವಾರ ಮತ್ತೊಬ್ಬ ಒಬ್ಬ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಬೆಂಗಳೂರು(ಡಿ.29): ರೂಪಾಂತರಿ ಕೊರೋನಾ ವೈರಸ್‌ ಪತ್ತೆಯಾಗಿರುವ ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ಹಿಂದಿರುಗಿರುವವರ ಪೈಕಿ ಸೋಮವಾರ ಮತ್ತೊಬ್ಬ ಒಬ್ಬ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ16 ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಬ್ರಿಟನ್ನಿಂದ ಬೆಂಗಳೂರಿಗೆ ವಾಪಸಾದ ಪ್ರಯಾಣಿಕರಲ್ಲಿ ನಾಪತ್ತೆಯಾದವರ ಸಂಖ್ಯೆ 204 ರಿಂದ 214ಕ್ಕೆ ಏರಿಕೆಯಾಗಿದ್ದು, ಹುಡುಕಾಟ ಮುಂದುವರೆದಿದೆ.

ಡಿ.1ರಿಂದ 21ವರೆಗೆ ಬ್ರಿಟನ್‌ನಿಂದ ಒಟ್ಟು 1,594 ಮಂದಿ ಬೆಂಗಳೂರು ನಗರಕ್ಕೆ ವಾಪಸ್ಸಾಗಿದ್ದಾರೆ. ಈ ಪೈಕಿ 1,380 ಮಂದಿಯನ್ನು ಪತ್ತೆ ಹಚ್ಚಿರುವ ಬಿಬಿಎಂಪಿ, 1,234 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದೆ. 931 ಮಂದಿಯ ಪರೀಕ್ಷಾ ವರದಿ ಲಭ್ಯವಾಗಿದ್ದು, 16 ಮಂದಿಗೆ ಸೋಂಕು ಪತ್ತೆಯಾಗಿದೆ. 915 ಕೋವಿಡ್‌ ಪರೀಕ್ಷಾ ವರದಿ ನೆಗಟಿವ್‌ ಬಂದಿದೆ. ಇನ್ನೂ 303 ಮಂದಿಯ ಫಲಿತಾಂಶ ಬಾಕಿ ಇದೆ. ಉಳಿದ 146 ಮಂದಿಯನ್ನು ಪರೀಕ್ಷೆ ಬಾಕಿ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಇದುವರೆಗೆ ಪತ್ತೆಯಾಗಿರುವ 16 ಕೋವಿಡ್‌ ಸೋಂಕು ಪ್ರಕರಣಗಳಲ್ಲಿ ಮಹದೇವಪುರ ವಲಯದಲ್ಲಿ 5, ಬೊಮ್ಮನಹಳ್ಳಿ 4, ಪಶ್ಚಿಮ 3, ಪೂರ್ವ 2 ದಾಸರಹಳ್ಳಿ ಹಾಗೂ ದಕ್ಷಿಣ ವಲಯದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ.

ನಾಪತ್ತೆ ಸಂಖ್ಯೆ 214ಕ್ಕೆ ಏರಿಕೆ:

ಕಳೆದ ಶನಿವಾರ ಬಿಬಿಎಂಪಿ ಅಧಿಕಾರಿಗಳು ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ಆಗಮಿಸಿದವರ ಪೈಕಿ 220 ಮಂದಿ ನಾಪತ್ತೆಯಾಗಿದ್ದು, ಅವರ ಸಂಪರ್ಕಕ್ಕೆ ಲಭ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದರು.

ಭಾನುವಾರದ ವೇಳೆ ಕೆಲವರು ಪತ್ತೆಯಾಗಿದ್ದು, ಸಂಪರ್ಕಕ್ಕೆ ಲಭ್ಯವಾಗದವರ ಸಂಖ್ಯೆ 204ಕ್ಕೆ ಇಳಿಕೆಯಾಗಿತ್ತು. ಆದರೆ ಸೋಮವಾರದ ವರದಿಯಲ್ಲಿ ನಾಪತ್ತೆ ಸಂಖ್ಯೆ ಮತ್ತೆ 214ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!