
ಕೋಲಾರ (ಫೆ.26): ರಾಜ್ಯ ಸರ್ಕಾರದಿಂದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಫೆಬ್ರವರಿ ತಿಂಗಳಿನಿಂದಲೇ ಹಣದ ಬದಲಾಗಿ 10 ಅಕ್ಕಿಯನ್ನು ವಿತರಣೆ ಮಾಡಲಾಗುವುದು. ಈಗಾಗಲೇ ಫೆಬ್ರವರಿ ತಿಂಗಳ ಅಕ್ಕಿ ವಿತರಣೆ ಮಾಡಿದ್ದರೂ, ಈ ತಿಂಗಳ ಹಣದ ಬದಲು ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರದ 5 ಕೆ.ಜಿ. ಅಕ್ಕಿಯ ಜೊತೆಗೆ ಅನ್ನಭಾಗ್ಯ ಯೋಜನೆಯ (ಫೆಬ್ರವರಿ-ಮಾರ್ಚ್) ತಿಂಗಳು ಸೇರಿ ಒಟ್ಟು 15 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.
ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನುಮುಂದಿನ ದಿನಗಳಲ್ಲಿ ಎಲ್ಲ ಅರ್ಹ ಪಡಿತರ ಕಾರ್ಡುದಾರರಿಗೆ ತಲಾ 10 ಕೆಜಿ ಅಕ್ಕಿ ಕೊಡಲು ತೀರ್ಮಾನವಾಗಿದೆ. ಕೇಂದ್ರ ಸರ್ಕಾರದಿಂದ ಕೊಡಲಾಗುವ 5 ಕೆ.ಜಿ. ಅಕ್ಕಿಯ ಜೊತೆಗೆ, ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ತಲಾ 5 ಕೆ.ಜಿ. ಅಕ್ಕಿ ನೀಡಲಾಗುವುದು. ಈ ಹಿಂದೆ ನಾವು ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಲು ಒಪ್ಪಿರಲಿಲ್ಲ. ಆದರೆ, ಇದೀಗ ಅಕ್ಕಿಕೊಡಲು ಒಪ್ಪಿಕೊಂಡಿದ್ದರಿಂದ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಖರೀದಿ ಮಾಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರು ಸೇರಿ 1.26 ಕೋಟಿ ಪಡಿತರ ಚೀಟಿದಾರರು ಇದ್ದಾರೆ. ಇವರಿಗೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಮಾಸಿಕ 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ. ಇದೀಗ ಕೇಂದ್ರ ಸರ್ಕಾರಕ್ಕೆ ನಾವು ಅಕ್ಕಿ ಖರೀದಿ ಮಾಡಲು ಹಣವನ್ನು ಕಟ್ಟಿದ್ದೇವೆ. ಹೀಗಾಗಿ ಅವರು ನಾವು ಕೇಳಿದ ಅಕ್ಕಿ ಸರಬರಾಜು ಮಾಡುತ್ತಿದ್ದಾರೆ. ಈವರೆಗೆ ರಾಜ್ಯದ ಜನತೆಗೆ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆಗೆ ಅನ್ನಭಾಗ್ಯದ ಅಕ್ಕಿಯ ಬದಲಾಗಿ ಹಣವನ್ನು ಕೊಡುತ್ತಿದ್ದೆವು. ಇನ್ನುಮುಂದೆ ಹಣದ ಬದಲು ಎಲ್ಲರಿಗೂ ಅಕ್ಕಿ ಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಿರೋಧಿಗಳಿಗೆ ದೊಡ್ಡದಾಗಿ ಮೆಸೇಜ್ ಕೊಟ್ಟ ಡಿ.ಕೆ.ಶಿವಕುಮಾರ್; ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ!
ರಾಜ್ಯದಲ್ಲಿ 1.26 ಕೊಟಿ ಪಡಿತರ ಚೀಟಿದಾರರ ಕುಟುಂಬಗಳಲ್ಲಿ 4.40 ಕೋಟಿ ಜನರು ಅನ್ನಭಾಗ್ಯ ಯೋಜನೆ ಫಲಾನುಭವಿಗಳು ಆಗಲಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಕೇಂದ್ರ ಸರ್ಕಾರಕ್ಕೆ ಹಣ ಸಂದಾಯ ಮಾಡಿದ್ದೇವೆ. ಮುಂದಿನ ತಿಂಗಳು ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಅಕ್ಕಿ ನೀಡುತ್ತೇವೆ. ಅಂದರೆ, ಈ ತಿಂಗಳಿನಿಂದಲೇ 10 ಕೆಜಿ ಅಕ್ಕಿ ಕೊಡುವ ಯೋಜನೆ ಜಾರಿಗೆ ತಂದಿದ್ದೇವೆ. ಆದರೆ, ಈಗಾಗಲೇ ಫೆಬ್ರವರಿ ತಿಂಗಳ ಅಕ್ಕಿ ವಿತರಿಸಲಾಗಿದ್ದು, ಈ ತಿಂಗಳ ಅಕ್ಕಿಯನ್ನು ಸೇರಿಸಿ ಮಾರ್ಚ್ ತಿಂಗಳಲ್ಲಿ 15 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ