
ಬೆಂಗಳೂರು (ಫೆ.02): ಗ್ರಾಚ್ಯುಟಿ ಸೇರಿ ವಿವಿಧ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಫ್ರೀಡಂ ಪಾರ್ಕ್ನಲ್ಲಿ 10 ದಿನದಿಂದ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಅಂಗನವಾಡಿ ಕಾರ್ಯಕರ್ತೆಯರು ಬುಧವಾರ ವಾಪಸ್ ಪಡೆದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಗ್ರಾಚ್ಯುಟಿ ನೀಡಬೇಕು, ಶಾಲಾ ಪೂರ್ವ ಶಿಕ್ಷಣಕ್ಕೆ ಸಮಯ ನಿಗದಿ, ಪದೋನ್ನತಿ ಕುರಿತ ಆದೇಶ ವಾಪಸ್ ಸೇರಿ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ. ಆದ್ದರಿಂದ ರಾಜ್ಯದ ಹಲವೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಜ.23 ರಿಂದ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಘೋಷಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಶಾಲಾ ಪೂರ್ವ ಶಿಕ್ಷಣಕ್ಕಾಗಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಮಯ ಮೀಸಲಿರಿಸಿ ಸರ್ಕಾರ ಸ್ಪಷ್ಟಆದೇಶ ಹೊರಡಿಸಿದೆ. ಮಿನಿ ಅಂಗನವಾಡಿ ಹಾಗೂ ಸಹಾಯಕಿಯರ ಪದೋನ್ನತಿಯ ಕುರಿತು ಲೋಪಗಳಿದ್ದ ಆದೇಶ ವಾಪಸ್ ಪಡೆದು ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ. ಕಟ್ಟಡದ ವೆಚ್ಚವನ್ನು 12 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ಒಪ್ಪಿದೆ ಎಂದು ಸ್ಪಷ್ಟಪಡಿಸಿದರು. ಮಕ್ಕಳಿಗೆ ಶೂ, ಸಮವಸ್ತ್ರ ಹಾಗೂ ಮೂಲಸೌಕರ್ಯ ಹೆಚ್ಚಿಸಲು ಸಮ್ಮತಿ ಸೂಚಿಸಲಾಗಿದೆ. ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಪಡೆದ ದೃಢೀಕರಣ ಪತ್ರ ನೀಡಲು ಒಪ್ಪಿಗೆ ಸಿಕ್ಕಿದೆ.
ಅಂಗನವಾಡಿ ಶಿಕ್ಷಣ ಅವಧಿ 3 ತಾಸು ಕಡಿತ: ಸರ್ಕಾರದಿಂದ ಆದೇಶ
ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಪೂರ್ಣ ಆರೋಗ್ಯ ತಪಾಸಣೆ ಮತ್ತಿತರ ಬೇಡಿಕೆಗಳಿಗೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಆದ್ದರಿಂದ ಪ್ರತಿಭಟನೆ ವಾಪಸ್ ಪಡೆದಿದ್ದೇವೆ ಎಂದು ವಿವರಿಸಿದರು. ಸಾವಿರಾರು ಮಹಿಳೆಯರು ಬೀದಿಯಲ್ಲಿ ಸತತ ಹತ್ತು ದಿನ ಹೋರಾಟ ನಡೆಸಿದರು. ಹೋರಾಟದ ತೀವ್ರತೆಯಿಂದಾಗಿ ಸರ್ಕಾರ ಬೇಡಿಕೆಗಳ ಬಗ್ಗೆ ಸೂಕ್ತವಾಗಿ ಸ್ಪಂದಿಸಿದೆ. ಈ ಮೊದಲೂ ಇಲಾಖೆಯ ಸಚಿವರು, ಪ್ರಧಾನ ಕಾರ್ಯದರ್ಶಿಗಳು, ಜಂಟಿ ನಿರ್ದೇಶಕರು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ್ದರೂ ಸ್ಪಷ್ಟತೆ ಇಲ್ಲದಿದ್ದರಿಂದ ಹೋರಾಟ ಮುಂದುವರೆಸಲಾಗಿತ್ತು ಎಂದು ತಿಳಿಸಿದರು.
ಮಾಸಿಕ ಪೆನ್ಷನ್ ಜಾರಿಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
ಗ್ರಾಚ್ಯುಟಿ ಆದೇಶ ಶೀಘ್ರ: ಅಂಗನವಾಡಿ ನೌಕರರೂ ಗ್ರಾಚ್ಯುಟಿ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು. ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆಯಂತೆ ಸಂಘದ ಪದಾಧಿಕಾರಿಗಳು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಮುಖ್ಯಮಂತ್ರಿಗಳ ಅನುಮೋದನೆ ಮೇರೆಗೆ ಹಣಕಾಸು ಇಲಾಖೆ ಗ್ರಾಚ್ಯುಟಿ ನೀಡಲು ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ. ಇನ್ನುಳಿದ ಕೆಲ ಬೇಡಿಕೆಗಳ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ