
ಆನೇಕಲ್ (ಜ20): ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ಇಂದು ಸಂಜೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸ್ಕ್ರಾಪ್ ಶೆಡ್‌ಗಳು ಬೆಂಕಿಗೆ ಆಹುತಿಯಾಗಿವೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪದ ಎಸ್. ಬಿಂಗೀಪುರ ಕೆರೆಯ ಪಕ್ಕದಲ್ಲಿರುವ ಸ್ಕ್ರಾಪ್ ಶೆಡ್‌ಗಳಲ್ಲಿ ಇಂದು ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಇಡೀ ಪ್ರದೇಶ ಹೊಗೆಮಯವಾಗಿದೆ.
ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವ ಎಸ್ ಬಿಂಗೀಪುರ ಕೆರೆಯ ಬಳಿಯ ಸ್ಕ್ರಾಪ್ ಶೆಡ್‌ಗಳು ಬೆಂಕಿಗಾಹುತಿಯಾಗಿವೆ. ಸ್ಕ್ರಾಪ್ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ದಹನಕಾರಿ ವಸ್ತುಗಳು ಇದ್ದಿದ್ದರಿಂದ ಬೆಂಕಿಯ ಕೆನ್ನಾಲಿಗೆ ಅತಿ ವೇಗವಾಗಿ ಹರಡಿದೆ. ಸ್ಥಳದಲ್ಲಿ ಧಗ ಧಗ ಉರಿಯುತ್ತಿರುವ ಬೆಂಕಿಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡರು.
ಬಾಂಗ್ಲಾ ವಲಸಿಗರು ವಾಸವಿದ್ದ ಶೆಡ್‌ಗಳು
ಈ ಸ್ಕ್ರಾಪ್ ಶೆಡ್‌ಗಳು ಇತ್ತೀಚೆಗೆ ಸುದ್ದಿಯಾಗಿದ್ದವು. ಇಲ್ಲಿ ಶಂಕಿತ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸುಮಾರು ಒಂದು ವಾರದ ಹಿಂದೆಯಷ್ಟೇ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಈ ಸ್ಥಳಕ್ಕೆ ಭೇಟಿ ನೀಡಿ ಶೆಡ್‌ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಈ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಇಲ್ಲಿ ನೆಲೆಸಿದ್ದ ಶಂಕಿತ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದಿದ್ದರು.
ಮುಗಿಲೆತ್ತರಕ್ಕೆ ಎದ್ದ ದಟ್ಟ ಹೊಗೆ
ಇಂದು ಸಂಜೆ ದಿಢೀರನೆ ಸ್ಕ್ರಾಪ್ ತುಂಬಿದ ಶೆಡ್‌ಗಳಿಗೆ ಬೆಂಕಿ ಬಿದ್ದಿದ್ದು, ಕಪ್ಪು ದಟ್ಟ ಹೊಗೆ ಆಗಸದ ಎತ್ತರಕ್ಕೆ ಚಾಚಿದೆ. ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತಲಿನ ಕಿಲೋಮೀಟರ್‌ಗಳವರೆಗೆ ದಟ್ಟ ಹೊಗೆ ಆವರಿಸಿ ಸುತ್ತಮುತ್ತಲಿ ಪ್ರದೇಶದಲ್ಲಿ ಉಸಿರುಗಟ್ಟುವ ರೀತಿ ಹೊಗೆ ಆವರಿಸಿದೆ.
ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ
ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಕ್ರಾಪ್ ವಸ್ತುಗಳು ಹೆಚ್ಚಾಗಿರುವುದರಿಂದ ಬೆಂಕಿ ಹತೋಟಿಗೆ ತರುವುದು ಸವಾಲಾಗಿ ಪರಿಣಮಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ಬೇರೆಡೆ ಹರಡದಂತೆ ತಡೆಯಲು ಹರಸಾಹಸ ಪಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ