
ವಿಧಾನ ಪರಿಷತ್ತು(ಫೆ.14): ಕಾನೂನಿಗೆ ತಿದ್ದುಪಡಿ ತಂದು ಪದೋನ್ನತಿ ಪಡೆದ ಶಿಕ್ಷಕರ ನಡುವಿನ ವೇತನ ತಾರತಮ್ಯ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಜೆಡಿಎಸ್ ನ ಮರಿತಿಬ್ಬೇಗೌಡ, ಭೋಜೇಗೌಡ, ಬಿಜೆಪಿ ಸದಸ್ಯ ಎಸ್.ವಿ.ಸಂಕನೂರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಡ್ತಿ ಪಡೆದ ಹಿರಿಯರು ಮತ್ತು ಪ್ರಸ್ತುತ ಇರುವ ಕಿರಿಯ ಶಿಕ್ಷಕರ ನಡುವೆ ವೇತನ ತಾರತಮ್ಯ ಇರುವುದು ನನ್ನ ಗಮನಕ್ಕೆ ಬಂದಿದೆ. ಸಮಸ್ಯೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಅದನ್ನು ಸರಿಪಡಿಸಲು ಕಾನೂನು ತಿದ್ದುಪಡಿ ಮಾಡಬೇಕಾಗಿದ್ದು ಅದಕ್ಕೆ ನಮ್ಮ ಸಹಮತವಿದೆ. ಕಾಲಮಿತಿಯಲ್ಲಿ ತಿದ್ದುಪಡಿ ಮಾಡಬೇಕಾಗಿದ್ದು ತಾರತಮ್ಯ ಸರಿಪಡಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ ಎಂದರು.
ಈಶ್ವರಪ್ಪ ವಿರುದ್ಧ ಕೇಸ್ ಮುಖೇನ ಕಾನೂನಿದೆ ಎಂಬುದು ಸಾಬೀತು: ಸಚಿವ ಮಧು ಬಂಗಾರಪ್ಪ
‘ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರು ಪ್ರೌಢಶಾಲೆಯಲ್ಲಿ ತಮಗಿಂತ ಕಿರಿಯ ಶಿಕ್ಷಕ ಪಡೆಯುವ ವೇತನಕ್ಕೂ ಕಡಿಮೆ ವೇತನ ಪಡೆಯುತ್ತಿದ್ದಾರೆ. ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆದು ಉಪನ್ಯಾಸಕರಾಗಿರುವ ಹಿರಿಯರು ಕಿರಿಯ ಉಪನ್ಯಾಸಕರಿಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಬಡ್ತಿ ಪಡೆಯದೇ ಇರುವ ಶಿಕ್ಷಕ, ಉಪನ್ಯಾಸಕರಿಗಿಂತ ಕಡಿಮೆ ಇಲ್ಲದಂತೆ ವೇತನ ನಿಗದಿ ಬೇಡಿಕೆ, ಕಾಲಮಿತಿ ಬಡ್ತಿ ಬೇಡಿಕೆ ಇದೆ. ಅದರಂತೆ ಶಿಕ್ಷಕರ ವೇತನ ವ್ಯತ್ಯಾಸ, ಬಡ್ತಿಯಲ್ಲಿನ ವೇತನ ಅಸಮಾನತೆ ಸರಿಪಡಿಸಲಾಗುತ್ತದೆ. ಇದಕ್ಕೆ ಕಾನೂನು ತಿದ್ದುಪಡಿ ಮಾಡೋಣ. ಶಾಶ್ವತ ಸಮಸ್ಯೆ ಪರಿಹಾರ ಮಾಡಲಾಗುತ್ತದೆ’ ಎಂದು ಹೇಳಿದರು.
ವೇತನ ಸರಿಪಡಿಸುವ ಕುರಿತು ಆರನೇ ವೇತನ ಆಯೋಗದ ಶಿಫಾರಸನ್ನು ಅರ್ಥಿಕ ಇಲಾಖೆ ತಿರಸ್ಕರಿಸಿದೆ. ಹಾಗಾಗಿ ಕಾನೂನು ತಿದ್ದುಪಡಿ ಮಾಡಬೇಕಿದೆ. ಶಿಕ್ಷಕರ ಕ್ಷೇತ್ರದ ಜನಪ್ರತಿನಿಧಿಗಳ ಸಭೆ ನಡೆಸಿ ಅವರ ಸಲಹೆ ಪಡೆದು ಎರಡ್ಮೂರು ದಿನಗಳಲ್ಲೇ ಈ ಪ್ರಯತ್ನ ಆರಂಭಿಸಲಾಗುವುದು. 2017ರಲ್ಲೇ ಈ ಸಮಸ್ಯೆ ಇದ್ದು ಅಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಇದ್ದರು. ಆದ್ದರಿಂದ ಅವರಿಗೆ ಈ ಸಮಸ್ಯೆ ಅರ್ಥವಾಗಿದೆ. ಅವರ ಗಮನಕ್ಕೆ ತಂದು ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ