ಕೃಷ್ಣಾ ಯೋಜನೆ-3: ಆಲಮಟ್ಟಿ ಡ್ಯಾಂ 524 ಮೀ.ಗೆ ಎತ್ತರಿಸಲು ಸರ್ಕಾರ ನಿರ್ಧಾರ, ಎಕರೆಗೆ ₹40 ಲಕ್ಷ ಪರಿಹಾರ!

Published : Sep 16, 2025, 08:25 PM IST
Almatti Dam Hight Increase Siddaramaiah

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಆಲಮಟ್ಟಿ ಜಲಾಶಯದ ಎತ್ತರ 524.25 ಮೀಟರ್‌ಗೆ ಏರಿಸಲು ನಿರ್ಧಾರ. ಈ ಯೋಜನೆಯಿಂದ ಮುಳುಗಡೆಯಾಗುವ ಜಮೀನುಗಳಿಗೆ ಎಕರೆಗೆ 40 ಲಕ್ಷ ರೂ. ವರೆಗೆ ಪರಿಹಾರ. ಇದರಿಂದ 5.94 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.

ಬೆಂಗಳೂರು (ಸೆ.16): ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಗೆ ಏರಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈವರೆಗೆ ಸಮುದ್ರ ಸೇರಿ ವ್ಯರ್ಥವಾಗುತ್ತಿದ್ದ ನೀರನ್ನು ಸದ್ಬಳಕೆ ಮಾಡಿಕೊಂಡು, ಲಕ್ಷಾಂತರ ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ನಿರ್ಣಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಈ ದಿಸೆಯಲ್ಲಿ ರಾಜ್ಯಕ್ಕೆ ಸಮೃದ್ಧಿ ತರಬಲ್ಲ ಐತಿಹಾಸಿಕ ತೀರ್ಮಾನವನ್ನು ನಾವು ಕೈಗೊಂಡಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಗೆ ಏರಿಸಲು ಅನುಮತಿ ನೀಡಲಾಗಿದೆ. ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಆಲಮಟ್ಟಿಯ ಹಿನ್ನೀರಿನಿಂದ ಸುಮಾರು 75,000 ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುವ ಸಂಭವವಿದೆ. ಇದರಿಂದ 5.94 ಲಕ್ಷ ಹೆಕ್ಟೇರ್(ಸುಮಾರು 14 ರಿಂದ 15 ಲಕ್ಷ ಎಕರೆ) ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ಯುಕೆಪಿ ಹಂತ 3 ಬೃಹತ್ ನೀರಾವರಿ ಯೋಜನೆಯಾಗಿದ್ದು, ಈ ಭಾಗದ ರೈತರ ಜಮೀನಿಗೆ ನೀರೊದಗಿಸಿ, ಅವರ ಜೀವನ ಮಟ್ಟದ ಸುಧಾರಿಸಲು ನಾವು ಪಣತೊಟ್ಟಿದ್ದೇವೆ ಎಂದು ತಿಳಿಸಿದರು.

ಒಂದು ಎಕರೆೆ ಭೂ ಸ್ವಾಧೀನಕ್ಕೆ 40 ಲಕ್ಷ ರೂ. ಪರಿಹಾರ:

ಇಂದಿನ ವಿಶೇಷ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ರೈತರು, ರೈತ ಹೋರಾಟ ಸಂಘಗಳು, ಸಂಬಂಧಪಟ್ಟ ಶಾಸಕರು, ಸಚಿವರೊಂದಿಗೆ ಚರ್ಚೆ ನಡೆಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಯೋಜನೆಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 40 ಲಕ್ಷ ರೂ,  ಖುಷ್ಕಿ ಒಣಭೂಮಿಯ ಎಕರೆಯೊಂದಕ್ಕೆ 30 ಲಕ್ಷ ಪರಿಹಾರವನ್ನು ನೀಡಬೇಕೆಂದು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.

ಕಾಲುವೆ ತೋಡಲು ಸುಮಾರು 51,837 ಎಕರೆ ಬೇಕಾಗಿದ್ದು, ಇದರಲ್ಲಿ 23,631 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಕೈಗೊಳ್ಳಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿದಂತೆ ಒಣಭೂಮಿಯ ಎಕರೆಯೊಂದಕ್ಕೆ 25 ಲಕ್ಷ ಹಾಗೂ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 30 ಲಕ್ಷ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ. ಕಾಲುವೆ ನಿರ್ಮಾಣದಲ್ಲಿ ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ ಎಂದರು.

ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರವನ್ನು ಮೂರು ಆರ್ಥಿಕ ವರ್ಷದೊಳಗೆ ನೀಡಲು ತೀರ್ಮಾನಿಸಲಾಗಿದೆ. ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳಲು ರೈತರ ಮನವೊಲಿಸುವುದಾಗಿ ಸಂಬಂಧಪಟ್ಟ ಸಚಿವರು, ಶಾಸಕರು, ರೈತಮುಖಂಡರು ತಿಳಿಸಿದ್ದಾರೆ. ರಾಜ್ಯದ ಜನರಿಗೆ ಒಳಿತು ಮಾಡುವ ಈ ಸಾರ್ಥಕ ಯೋಜನೆಗೆ ಭೂಮಿ ನೀಡಲು ರೈತರು ಸಮ್ಮತಿಸಬಹುದೆಂಬ ಭರವಸೆಯಿದೆ. ಇದೊಂದು ಐತಿಹಾಸಿಕ ತೀರ್ಮಾನ. 2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪರಿಹಾರದ ಮೊತ್ತ ಕಡಿಮೆಯಿದ್ದುದ್ದರಿಂದ ಯಾವ ರೈತರೂ ಭೂಮಿ ನೀಡಲು ಒಪ್ಪಲಿಲ್ಲ ಹಾಗೂ ಯೋಜನೆಗೆ ಚಾಲನೆಯೂ ದೊರೆಯದೇ ನೆನೆಗುದಿಗೆ ಬಿದ್ದಿತ್ತು ಎಂದು ತಿಳಿಸಿದರು.

ಈ ಹಿಂದೆ ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಶಾಸಕರು, ರೈತಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಒಂದೇ ಬಾರಿಗೆ ಕನ್ಸೆಂಟ್ ಅವಾರ್ಡ್ ನೀಡುವ ಬಗ್ಗೆ ಪರಿಗಣಿಸಿದ್ದರೂ, ಪರಿಹಾರಧನ ನಿಗದಿಯಾಗಿರಲಿಲ್ಲ. ನಮ್ಮದು ಎಂದೆಂದಿಗೂ ನುಡಿದಂತೆ ನಡೆಯುವ ಸರ್ಕಾರ. ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡುತ್ತದೆ. ಆದರೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದುವರೆಗೂ ಅಧಿಸೂಚನೆ ಹೊರಡಿಸಿಲ್ಲ. ಯೋಜನೆಯ ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಅಧಿಸೂಚನೆ ಹೊರಡಿಸಲು ಕೇಂದ್ರವನ್ನು ಹಲವು ಬಾರಿ ಭೇಟಿ ಮಾಡಿ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಲಾಗಿದೆ ಎಂದರು.

ಒಟ್ಟಾರೆ ಯೋಜನೆಗೆ 70 ಸಾವಿರ ಕೋಟಿ ರೂ. ಖರ್ಚು:

ಒಟ್ಟಾರೆ ಈ ಯೋಜನೆಗೆ 1,33,867 ಎಕರೆ ಜಮೀನು ಬೇಕಾಗಿದ್ದು, 75,563 ಎಕರೆ ಮುಳುಗಡೆಯಾಗಲಿದೆ. 51,837 ಎಕರೆ ಕಾಲುವೆ ನಿರ್ಮಾಣಕ್ಕೆ ಬೇಕಾಗಿದೆ. ರೈತರ ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆ ಕಾರ್ಯಗಳಿಗೆ 6,469 ಎಕರೆಗಳ ಅವಶ್ಯಕತೆಯಿದೆ. ಇದರಿಂದ ಸುಮಾರು 20 ಗ್ರಾಮಗಳು, ಕೆಲವು ಪಟ್ಟಣದ ವಾರ್ಡ್ ಗಳು ಮುಳುಗಡೆಯಾಗುತ್ತಿದ್ದು, ಒಟ್ಟು 1,33,867 ಎಕರೆಗೆ ಭೂಸ್ವಾಧೀನ ಪರಿಹಾರ ನೀಡುವ ಐತಿಹಾಸಿಕ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಉದ್ದೇಶಕ್ಕಾಗಿ ಪ್ರತಿವರ್ಷ ಸುಮಾರು 15 ರಿಂದ 20 ಸಾವಿರ ಕೋಟಿ ರೂ.ಗಳ ವೆಚ್ಚ ಬರಲಿದೆ. ಒಟ್ಟಾರೆ ಈ ಯೋಜನೆಗೆ ಸುಮಾರು 70 ಸಾವಿರ ಕೋಟಿ ರೂ. ಗಳು ವೆಚ್ಚವಾಗುವ ಅಂದಾಜು ಇದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ