ನೇಕಾರರ ಸಬಲೀಕರಣಕ್ಕೆ ಎಲ್ಲ ಕ್ರಮ: ಸಿಎಂ ಬೊಮ್ಮಾಯಿ

By Kannadaprabha NewsFirst Published Jan 26, 2023, 7:21 AM IST
Highlights

ಬೆಂಗಳೂರಿನಲ್ಲಿ ಹರ್ಷಕಲಾ ರಾಷ್ಟ್ರೀಯ ಕೈಮಗ್ಗ ಮೇಳ ಉದ್ಘಾಟನೆ, ನೇಕಾರರ ಅಭಿವೃದ್ಧಿಗೆ ನೀಡಿದ ಯೋಜನೆಗಳನ್ನು ಸ್ಮರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು(ಜ.26):  ಉಚಿತ ವಿದ್ಯುತ್‌ ಸರಬರಾಜು, ಶೂನ್ಯ ಬಡ್ಡಿ ದರದಲ್ಲಿ ಸಾಲ ಸೇರಿದಂತೆ ನೇಕಾರರಿಗೆ ರಾಜ್ಯ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಮುಂದಿನ ದಿನಗಳಲ್ಲೂ ನೇಕಾರರ ಸಬಲೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಜಾಲಹಳ್ಳಿಯ ಎಚ್‌.ಎಂ.ಟಿ. ಮೈದಾನದಲ್ಲಿ ಆಯೋಜಿಸಿರುವ ‘ಹರ್ಷಕಲಾ-ರಾಷ್ಟ್ರೀಯ ಕೈಮಗ್ಗ ಮೇಳ 2023’ಕ್ಕೆ ನೂಲುವ ಮೂಲಕ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ನೇಕಾರರ ವಿದ್ಯುತ್ತಿನ ನಿಶ್ಚಿತ ಠೇವಣಿಯನ್ನು ಶೇ.50ರಷ್ಟುಕಡಿಮೆ ಮಾಡಲಾಗಿದೆ. ಸುಮಾರು 5 ಎಚ್‌.ಪಿ.ವರೆಗೆ ಉಚಿತ ವಿದ್ಯುತ್‌ ಸರಬರಾಜು, 2 ಲಕ್ಷ ರುಪಾಯಿವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ನೇಕಾರರಿಗೆ ಇನ್ನಷ್ಟುಬೆಂಬಲ ನೀಡಿ, ನೇಕಾರರನ್ನು ಸಬಲರನ್ನಾಗಿಸಿ ಹೆಚ್ಚು ಆದಾಯ ಗಳಿಸಲು ಸಹಾಯಕವಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

25 ತಾಲೂಕಿನಲ್ಲಿ ಮಿನಿ ಜವಳಿ ಪಾರ್ಕ್: ಸಿಎಂ ಬೊಮ್ಮಾಯಿ

ಮಾರುಕಟ್ಟೆ ವ್ಯವಸ್ಥೆ:

ನೇಕಾರರಿಗೆ ಮುಖ್ಯವಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ನೇಕಾರರು ಮನೆಯಲ್ಲಿ ತಯಾರಿಸುವ ಉತ್ಪನ್ನಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯಬೇಕು. ಈಗಾಗಲೇ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತಿತರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ನೇಕಾರರ ಸಂಘ, ವೇದಿಕೆಗಳ ಉತ್ಪನ್ನಗಳಿಗೆ ಮಾರುಕಟ್ಟೆಜೋಡಣೆಗೆ ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನೇಕಾರಿಕೆ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಕೈಮಗ್ಗ ಮತ್ತು ವಿದ್ಯುತ್‌ ಮಗ್ಗಗಳಿಂದ ವಿಶಿಷ್ಟವಾಗಿರುವ ಬಟ್ಟೆಗಳನ್ನು ತಯಾರಿಸಿ ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಕಡಿಮೆ ಬಂಡವಾಳದಲ್ಲಿ ಬಟ್ಟೆತಯಾರಿಸುವ ಹಾಗೂ ಅತಿ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪವರ್‌ಲೂಮ್‌ ಕಾರ್ಪೊರೇಷನ್‌ನಿಂದ ಶಾಲಾ ಮಕ್ಕಳ ಸಮವಸ್ತ್ರ ಖರೀದಿಸುತ್ತಿದ್ದು ಡಿಸೆಂಬರ್‌ನಿಂದಲೇ ಕೆಲಸ ಪ್ರಾರಂಭಿಸಲು ಆದೇಶ ನೀಡಲಾಗಿದೆ ಎಂದು ಹೇಳಿದರು.

ಭಾರತಕ್ಕೆ ದೊಡ್ಡ ಪ್ರಮಾಣದ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ವಸ್ತುಗಳಿಗಿಂತಲೂ ಬಹಳಷ್ಟುಜನ ಸೇರಿ ಕೈಗಳಿಂದ ಉತ್ಪಾದಿಸುವ ವಸ್ತುಗಳ ಅಗತ್ಯವಿದೆ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹೇಳಿದ್ದರು. ಆ ಮಾತನ್ನು ನೇಕಾರಿಕಾ ಕ್ಷೇತ್ರದಲ್ಲಿ ಅಕ್ಷರಶಃ ಪರಿಪಾಲನೆ ಮಾಡಲಾಗುತ್ತಿದೆ. ಈ ಮೇಳ ಯಶಸ್ವಿಯಾಗಲಿ ಎಂದು ಹಾರೈಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ತೋಟಗಾರಿಕಾ ಸಚಿವ ಮುನಿರತ್ನ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷ ಗೌಡ ಮತ್ತಿತರರು ಹಾಜರಿದ್ದರು.

BIG 3: ನೇಕಾರರ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ: ಸಚಿವ ಶಂಕರ್‌ ಪಾಟೀಲ್ ಮುನೇನಕೊಪ್ಪ ಭರವಸೆ

ಫೆ.10ರವರೆಗೂ ಉತ್ಸವ

‘ಹರ್ಷಕಲಾ-ರಾಷ್ಟ್ರೀಯ ಕೈಮಗ್ಗ ಮೇಳ’ಕ್ಕೆ ಬುಧವಾರ ಜಾಲಹಳ್ಳಿಯ ಎಚ್‌.ಎಂ.ಟಿ. ಮೈದಾನದ ಸಿಎಸ್‌ಡಿ ಕಟ್ಟಡದ ಎದುರು ಚಾಲನೆ ನೀಡಲಾಗಿದ್ದು ಫೆ.10ರವರೆಗೂ ನಡೆಯಲಿದೆ. ಆಕರ್ಷಕ ವಿನ್ಯಾಸದ ವಸ್ತ್ರಗಳು ಖರೀದಿಗೆ ಲಭ್ಯವಿವೆ. ಮೊಳಕಾಲ್ಮೂರು, ಇಳಕಲ್‌ ಮತ್ತು ಉಡುಪಿಯ ಸೀರೆ, ಗುಳೇದಗುಡ್ಡದ ಕಣ, ಕಲ್ಲೂರು ರೇಷ್ಮೆ ಸೀರೆ, ನವಲಗುಂದ ಜಮಖಾನ, ಅಪ್ಪಟ ಉಣ್ಣೆ ಕಂಬಳಿ, ಹತ್ತಿ ಟವಲ್‌, ಬೆಡ್‌ಶೀಟ್‌ಗಳಲ್ಲದೇ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಆಂಧ್ರ, ತೆಲಂಗಾಣ, ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ ಮತ್ತಿತರ ರಾಜ್ಯಗಳಿಂದಲೂ ನೇಕಾರರು ಆಗಮಿಸಿದ್ದು 100 ಮಳಿಗೆಯಲ್ಲಿ ವೈವಿಧ್ಯಮಯ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನ ಜಾಲಹಳ್ಳಿಯ ಎಚ್‌.ಎಂ.ಟಿ. ಮೈದಾನದಲ್ಲಿ ಆಯೋಜಿಸಿರುವ ‘ಹರ್ಷಕಲಾ-ರಾಷ್ಟ್ರೀಯ ಕೈಮಗ್ಗ ಮೇಳ’ವನ್ನು ನೂಲುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಮುನಿರತ್ನ ಮತ್ತಿತರರು ಹಾಜರಿದ್ದರು.

click me!