* ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಗೆ ಸಂಕಷ್ಟ
* ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಗೆ ಭುಗಿಲೆದ್ದ ಆಕ್ರೋಶ
* ಪೇಜಾವರ ಶ್ರೀಗಳ ಬೃಂದಾವನದ ಮುಂದೆ ಬಂದು ಕ್ಷಮೆ ಕೇಳುವಂತೆ ಆಗ್ರಹ
ಬೆಂಗಳೂರು, (ನ.17): ಪೇಜಾವರ ಶ್ರೀ ವಿರುದ್ಧ ಹೇಳಿಕೆಗೆ ಸಂಬಂಧಿಸಿದಂತೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಹಂಸಲೇಖ ಅವರು ಈಗಾಗಲೇ ಕ್ಷಮೆ ಕೇಳಿದ್ದರೂ ಸಹ ವಿವಾದ (Hamsalekha Controversy) ತಣ್ಣಗಾಗಿಲ್ಲ.
ಪೇಜಾವರ ಶ್ರೀಗಳ ವಿರುದ್ಧ ಮಾತನಾಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಿಷನರ್ ಕಮಲ್ ಪಂತ್ಗೆ ದೂರು ನೀಡಲಾಗಿದೆ. ಅಖಿಲ ಭಾರತ ಬ್ರಾಹ್ಮಣ ಸಮಾಜದ (Akhila Bharatha Brahmana Mahasabha) ಉಪಾಧ್ಯಕ್ಷ ಕೃಷ್ಣ ಅವರು ದೂರು ನೀಡಿದ್ದಾರೆ.
Hamsalekha: ಕ್ಷಮೆ ಕೇಳಿದ್ದರೂ ಹಂಸಲೇಖ ವಿರುದ್ಧ ದಾಖಲಾಯ್ತು ದೂರು
ಪೇಜಾವರ ಶ್ರೀಗಳ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ್ದು ತಪ್ಪು. ಅದಕ್ಕಾಗಿ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪೇಜಾವರ ಶ್ರೀಗಳ ಬೃಂದಾವನದ ಮುಂದೆ ಬಂದು ಹಂಸಲೇಖ ಬಹಿರಂಗವಾಗಿ ಕ್ಷಮೆ ಕೇಳಬೇಕು. ನಾಲ್ಕು ಗೋಡೆ ಮಧ್ಯೆ ಕ್ಷಮೆ ಕೇಳಿರುವುದನ್ನು ಒಪ್ಪುವುದಿಲ್ಲ. ಎಲ್ಲಿ ಅಪಮಾನ ಆಗಿದ್ಯೋ ಅಲ್ಲಿಯೇ ಕ್ಷೆಮೆ ಕೇಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಈಗಾಗಲೇ ಹಂಸಲೇಖ ವಿರುದ್ಧ ಬೆಂಗಳೂರಿನ ಹನಮಂತನಗರದಲ್ಲಿ ದೂರು ದಾಖಲಾಗಿದೆ. ಇದೀಗ ಖುದ್ದು ಕಮೀಷನರ್‌ಗೆ ದೂರು ನೀಡಲಾಗಿದೆ.
ಪ್ರಕರಣ ಹಿನ್ನಲೆ:
ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ ಅವರು, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ರು ಅಂತ ಕೇಳಿದ್ದೆ. ದಲಿತರ ಮನೆಗೆ ಬಂದು ಅವರು ಕುಳಿತುಕೊಳ್ಳಬಹುದು. ಆದ್ರೆ, ಅವರಿಗೆ ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತಾ..? ಕೋಳಿ ಬೇಡ ಕುರಿಯ ರಕ್ತವನ್ನು ಫ್ರೈ ಮಾಡಿ ಕೊಟ್ರೆ ತಿನ್ನೋಕೆ ಆಗುತ್ತಾ..? ಲಿವರ್ ಕೊಟ್ರೆ ತಿನ್ನೋಕೆ ಆಗುತ್ತಾ..? ಎಂದು ಪ್ರಶ್ನಿಸಿದ್ದರು.
ಹಂಸಲೇಖ ಅವರ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅತೀವ ಪರ-ವಿರೋಧಗಳ ಚರ್ಚೆಯ ನಂತರ ಹಂಸಲೇಖ ಅವರು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದರು.
ನಾನು ಒಬ್ಬ ಸಂಗೀತಗಾರ. ನಮಗ್ಯಾಕೆ ಟ್ರೋಲು? ಕಂಟ್ರೋಲ್ ಆಗಿರುವುದು ನಮ್ಮ ಕೆಲಸ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರ ಯಾವುದರ ಮೂಲಕ ಇದ್ದರೂ ಅದನ್ನು ಮಾಡಿಯೇ ಮಾಡುತ್ತೇನೆ’ ಎಂದು ಹಂಸಲೇಖ ಅವರು ವಿಡಿಯೋ ಮೂಲಕ ಹೇಳಿದ್ದರು.
ಮೇಲುಜಾತಿ ಹಾಗೂ ಕೀಳುಜಾತಿ, ಜಾತಿ ತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮಾತನಾಡುತ್ತಾ ಅವರು ಪ್ರಯೋಗಿಸಿದ್ದ ಪದಗಳು ವಿವಾದಕ್ಕೆ ಕಾರಣವಾಗಿತ್ತು. ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ಹಂಸಲೇಖ ಕ್ಷಮೆ ಕೇಳಬೇಕು ಎಂಬ ಒತ್ತಾಯ ಜೋರಾಗಿತ್ತು.