ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯ; ಆಸ್ಪತ್ರೆಯಲ್ಲಿ ನಡೆದಿದ್ದೇನೆಂದು ಹೇಳಿದ ಪುತ್ರ ಪ್ರಿಯಾಂಕ ಖರ್ಗೆ!

Published : Oct 01, 2025, 04:58 PM IST
Mallikarjun Kharge and Priyank Kharge

ಸಾರಾಂಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸಣ್ಣ ಸರ್ಜರಿಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ವಯೋಸಹಜ ಕಾರಣಗಳಿಂದ ವೈದ್ಯರು ಪೇಸ್‌ಮೇಕರ್ ಅಳವಡಿಕೆಗೆ ಸಲಹೆ ನೀಡಿದ್ದಾರೆ ಎಂದು ಅವರ ಪುತ್ರ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಅ.01): ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ವಸ್ಥತೆಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಣ್ಣ ಸರ್ಜರಿ ಮಾಡಲಾಗಿದ್ದು, ಎರಡ್ಮೂರು ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಖರ್ಗೆಯವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ದೊಡ್ಡ ಚಿಂತೆ ಮಾಡುವ ಅಗತ್ಯವಿಲ್ಲ. ಊಹಾಪೋಹಗಳಿಗೆ ಗಮನ ಕೊಡಬೇಡಿ ಎಂದು ಅವರ ಪುತ್ರ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಈ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯದ ಬಗ್ಗೆ ಹಬ್ಬಿದ್ದ ಆತಂಕ ಮತ್ತು ವದಂತಿಗಳಿಗೆ, ಬುಧವಾರ ಮಾಧ್ಯಮಗಳ ಮುಂದೆ ಬಂದು ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಬಹಳಷ್ಟು ಜನ ಆತಂಕದಿಂದ ಫೋನ್ ಮಾಡುತ್ತಿದ್ದರು. ಅದಕ್ಕೆ ನಾನೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಿವರ ನೀಡಿದ್ದೆ. ಅವರ ಆರೋಗ್ಯ ಸಂಪೂರ್ಣವಾಗಿ ಸ್ಥಿರವಾಗಿದೆ. ಯಾವುದೇ ರೀತಿಯಾದಂತಹ ಚಿಂತೆ ಮಾಡುವ ಅಗತ್ಯ ಇಲ್ಲ ಎಂದು ಪುನರುಚ್ಚರಿಸಿದ್ದಾರೆ.

ವಯೋಸಹಜ ಕಾರಣ, ಹೆಚ್ಚಿದ ಓಡಾಟ:

ಖರ್ಗೆ ಅವರಿಗೆ ಈಗ ಸುಮಾರು 83-84 ವರ್ಷ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಅವರು ಎಐಸಿಸಿ ಅಧ್ಯಕ್ಷರಾಗಿ ಪಕ್ಷದ ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಈ ಜವಾಬ್ದಾರಿಯನ್ನು ನಿಭಾಯಿಸುವುದು ಯಾರಿಗಾದರೂ ಕಷ್ಟಕರವಾದ ಕೆಲಸ. ಇತ್ತೀಚೆಗೆ ಅವರು ದೆಹಲಿ, ಬಿಹಾರ, ಗುಜರಾತ್ ಸೇರಿದಂತೆ ದೇಶದಾದ್ಯಂತ ಓಡಾಟವನ್ನು ಹೆಚ್ಚಿಸಿದ್ದರಿಂದ ಈ ಸಣ್ಣ ಅನಾರೋಗ್ಯ ಕಂಡುಬಂದಿದೆ.

ಪೇಸ್‌ಮೇಕರ್ ಅಳವಡಿಕೆಗೆ ವೈದ್ಯರ ಸಲಹೆ:

ಖರ್ಗೆಯವರಿಗೆ ಉಸಿರಾಟದ ಸಣ್ಣ ಸಮಸ್ಯೆ ಕಾಣಿಸಿಕೊಂಡಿತ್ತು. ಇದರ ಜೊತೆಗೆ, ಹೃದಯ ಬಡಿತ ಸ್ಥಿರವಾಗಿರಲು ನೆರವಾಗಲು ವೈದ್ಯರು ಅವರಿಗೆ ಪೇಸ್‌ಮೇಕರ್ ಅಳವಡಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಆದರೆ, ಇದು ವಯೋಸಹಜ ಕಾರಣದಿಂದ ಬಂದ ಸಮಸ್ಯೆಯೇ ಹೊರತು ಬೇರೆ ಯಾವುದೇ ರೀತಿಯಾದಂತಹ ಗಂಭೀರ ತೊಂದರೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಎರಡು-ಮೂರು ದಿನ ವಿಶ್ರಾಂತಿ ಕಡ್ಡಾಯ:

ಜನರ ಆಶೀರ್ವಾದ ಮತ್ತು ಹಾರೈಕೆ ಸದಾ ಇರುವುದರಿಂದ ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಜನರ ಆಶೀರ್ವಾದದಿಂದ ಅವರು ಗಟ್ಟಿಮಟ್ಟಾಗಿದ್ದಾರೆ. ಶಸ್ತ್ರಚಿಕಿತ್ಸೆ ಅಥವಾ ಪೇಸ್‌ಮೇಕರ್ ಅಳವಡಿಕೆಯ ನಂತರ ವೈದ್ಯರು ಕಡ್ಡಾಯವಾಗಿ ಎರಡು ಅಥವಾ ಮೂರು ದಿನಗಳ ವಿರಾಮ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಸದ್ಯಕ್ಕೆ ಅವರು ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿಯಲ್ಲಿದ್ದಾರೆ.

ಯಾರೂ ಆತಂಕ ಪಡಬೇಕಾಗಿಲ್ಲ. ಎರಡು ಮೂರು ದಿನಗಳ ನಂತರ ಅವರನ್ನು ಬಂದು ಭೇಟಿಯಾಗಬಹುದು ಎಂದು ಎಲ್ಲ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ವಿನಂತಿಸಿಕೊಂಡರು. ಒಟ್ಟಿನಲ್ಲಿ, ರಾಷ್ಟ್ರ ರಾಜಕಾರಣದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದ್ದು, ಕೆಲವು ದಿನಗಳ ವಿಶ್ರಾಂತಿಯ ನಂತರ ಅವರು ಮತ್ತೆ ಸಾರ್ವಜನಿಕ ಜೀವನಕ್ಕೆ ಮರಳಲಿದ್ದಾರೆ ಎಂಬ ಸಂದೇಶವನ್ನು ಅವರ ಪುತ್ರ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌