* ಬುಧವಾರ 7345 ಹೊಸ ಪ್ರಕರಣ ದೃಢ, 148 ಸೋಂಕಿತರ ಸಾವು
* ದೈನಂದಿನ ಪಾಸಿಟಿವಿಟಿ ಶೇ.4.35
* ಸಕ್ರಿಯ ಕೇಸು 1.51 ಲಕ್ಷಕ್ಕೆ ಇಳಿಕೆ
ಬೆಂಗಳೂರು(ಜೂ.17): ರಾಜ್ಯದಲ್ಲಿ ಬುಧವಾರ ಕೊರೋನಾ ಸೋಂಕಿನ ಪ್ರಮಾಣ ಮತ್ತು ಅಸು ನೀಗಿದವರ ಸಂಖ್ಯೆಯಲ್ಲಿ ತುಸು ಏರಿಕೆ ದಾಖಲಾಗಿದೆ. 7,345 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು, 148 ಮಂದಿ ಮರಣವನ್ನಪ್ಪಿದ್ದಾರೆ. 17,913 ಮಂದಿ ಗುಣಮುಖರಾಗಿದ್ದಾರೆ.
ಮಂಗಳವಾರ 5,041 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. 115 ಮಂದಿ ಮರಣವನ್ನಪ್ಪಿದ್ದರು. ಬೆಂಗಳೂರು ನಗರದಲ್ಲಿ 1,611 ಮಂದಿಯಲ್ಲಿ ಕೊರೋನಾ ಕಂಡು ಬಂದಿದ್ದು ದೈನಂದಿನ ಸೋಂಕಿತರ ಸಂಖ್ಯೆ ಮತ್ತೆ ಸಾವಿರ ಮೀರಿ ವರದಿಯಾಗಿದೆ. ಮೈಸೂರು 841, ದಕ್ಷಿಣ ಕನ್ನಡ 790, ಹಾಸನ 531 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿದೆ.
undefined
1.68 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು ಶೇ.4.35ರ ಪಾಸಿಟಿವಿಟಿ ದರ ದಾಖಲಾಗಿದೆ. ಮಂಗಳವಾರಕ್ಕಿಂತ ಹೆಚ್ಚು ಪರೀಕ್ಷೆ ಮತ್ತು ಪಾಸಿಟಿವಿಟಿ ದರ ವರದಿಯಾಗಿದೆ. ರಾಜ್ಯದಲ್ಲಿ ಮೈಸೂರಿನಲ್ಲಿ ಗರಿಷ್ಠ 28 ಸಾವು ಘಟಿಸಿದೆ. ಬೆಂಗಳೂರು ನಗರದಲ್ಲಿ 19, ಬೆಳಗಾವಿ 14, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಸಾವು ಸಂಭವಿಸಿದೆ. ಬಾಗಲಕೋಟೆ, ಬೀದರ್, ಚಿತ್ರದುರ್ಗ, ಹಾವೇರಿ, ಕಲಬುರಗಿ ಮತ್ತು ರಾಯಚೂರಿನಲ್ಲಿ ಬುಧವಾರ ಕೋವಿಡ್ ಸಾವು ವರದಿಯಾಗಿಲ್ಲ.
ಸಕ್ರಿಯ ಪ್ರಕರಣಗಳ ಸಂಖ್ಯೆ 1.51 ಲಕ್ಷಕ್ಕೆ ಕುಸಿದಿದೆ. 27.84 ಲಕ್ಷ ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು 25.99 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 33,296 ಮಂದಿ ಮರಣವನ್ನಪ್ಪಿದ್ದಾರೆ. ಒಟ್ಟು 3.20 ಕೋಟಿ ಪರೀಕ್ಷೆ ನಡೆದಿದೆ.
ಎರಡುವರೆ ಲಕ್ಷ ಸಾವಿನ ಸಂಖ್ಯೆಗಳನ್ನು ಮುಚ್ಚಿಟ್ಟಿದೆ: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ
ಲಸಿಕೆ ಅಭಿಯಾನ:
ಬುಧವಾರ 1.58 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಇವರಲ್ಲಿ 1.34 ಲಕ್ಷ ಮಂದಿ ಮೊದಲ ಡೋಸ್ ಸ್ವೀಕರಿಸಿದ್ದು, 24,463 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆದವರಲ್ಲಿ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ.
ಯಾದಗಿರಿ 12, ಬೀದರ್ 14, ರಾಯಚೂರು 22, ಕಲಬುರಗಿ 26, ಹಾವೇರಿ 27, ಬಾಗಲಕೋಟೆ 47, ಗದಗ 52, ರಾಮನಗರ 58, ವಿಜಯಪುರ 73, ಕೊಪ್ಪಳ 77, ಚಿತ್ರದುರ್ಗ 95, ಚಾಮರಾಜ ನಗರ ಜಿಲ್ಲೆಯಲ್ಲಿ 97 ಕಡಿಮೆ ಪ್ರಕರಣಗಳು ದಾಖಲಾಗಿದೆ.
45 ವರ್ಷ ಮೇಲ್ಪಟ್ಟ 65,634 ಮಂದಿ, 18 ರಿಂದ 44 ವರ್ಷದೊಳಗಿನ 61,878 ಮಂದಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು 6,500 ಮಂದಿ ಮೊದಲ ಡೋಸ್ ಸ್ವೀಕರಿಸಿದ್ದಾರೆ. 45 ವರ್ಷ ಮೇಲ್ಪಟ್ಟ20,559 ಮಂದಿ, 18 ರಿಂದ 44 ವರ್ಷದ 1,970 ಮಂದಿ ಮತ್ತು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು 1,934 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 1.76 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ.