
ಬೆಂಗಳೂರು (ಮೇ 16): ನಟಿ ರುಕ್ಮಿಣಿ ವಿಜಯಕುಮಾರ್ ಅವರ ಕಾರಿನಿಂದ ಡೈಮೆಂಡ್ ರಿಂಗ್ ಸೇರಿದತೆ ಒಟ್ಟು ₹27 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ಪ್ರಮುಖ ಆರೋಪಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪಿ ಮಹಮ್ಮದ್ ಮಸ್ತಾನ್‌ನನ್ನು ಬಂಧಿಸಿ ಆತನಿಂದ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಮೇ 11ರಂದು ಬೆಳಗ್ಗೆ ನಟಿ ರುಕ್ಮಿಣಿ ಅವರು ವಾಕಿಂಗ್‌ಗೆ ತೆರಳಿದ್ದ ವೇಳೆ ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಗೇಟ್ ನಂ.18 ಬಳಿ ರುಕ್ಮಿಣಿ ತಮ್ಮ ಕಾರನ್ನು ನಿಲ್ಲಿಸಿದ್ದರು. ತಮ್ಮ ಕಾರಿನ ಒಳಗೆ ದುಬಾರಿ ಬೆಲೆಯ ಹ್ಯಾಂಡ್‌ಬ್ಯಾಗ್, ಪರ್ಸ್, ಎರಡು ಡೈಮಂಡ್ ರಿಂಗ್, ರೊಲೆಕ್ಸ್ ವಾಚ್ ಸೇರಿದಂತೆ ಹಲವಾರು ಅಮೂಲ್ಯ ವಸ್ತುಗಳನ್ನು ಇಟ್ಟುಹೋಗಿದ್ದರು. ಆದರೆ, ಅವರು ವಾಕಿಂಗ್ ಹೋಗುವಾಗ ತಮ್ಮ ಕಾರನ್ನು ಲಾಕ್ ಮಾಡುವುದನ್ನು ಮರೆತುಬಿಟ್ಟಿದ್ದರು. ಕಾರಿನ ಲಾಕ್ ಮಾಡುವುದನ್ನ ಮರೆತ ಕಾರಣದಿಂದಾಗಿ ಈ ಅವಕಾಶವನ್ನು ದುರುಪಯೋಗಿಸಿಕೊಂಡ ಹತ್ತಿರಲ್ಲಿಯೇ ಇದ್ದ ಕ್ಯಾಬ್ ಚಾಲಕ ಮಸ್ತಾನ್ ಕಾರಿನೊಳಗಿನ ವಸ್ತುಗಳನ್ನು ಕದ್ದು ಪರಾರಿ ಆಗಿದ್ದನು.
ಈ ಘಟನೆಯ ಬೆನ್ನಲ್ಲಿಯೇ ನಟಿ ರುಕ್ಮಿಣಿ ಅವರು ಸ್ತಳೀಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ದೂರು ಪಡೆದ ಕಬ್ಬನ್ ಪಾರ್ಕ್ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ಸಿಸಿಟಿವಿ ಹಾಗೂ ಇತರೆ ದೃಶ್ಯಾವಳಿಗಳನ್ನು ಆಧರಿಸಿದ ಆರೋಪಿ ಪತ್ತೆ ಮಾಡಿದ ಪೊಲೀಸರು ಸದ್ಯ, ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ, ಸಂಬಂಧಪಟ್ಟ ಆರೋಪಿಯಿಂದ ಸುಮಾರು ₹23 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯಿಂದ ವಶಪಡಿಸಕೊಂಡ ವಸ್ತುಗಳ ವಿವರ:
₹1.5 ಲಕ್ಷ ಮೌಲ್ಯದ ಬ್ರ್ಯಾಂಡೆಡ್ ಹ್ಯಾಂಡ್‌ಬ್ಯಾಗ್
₹75,000 ಮೌಲ್ಯದ ಡಿಸೈನರ್ ಪರ್ಸ್
₹10 ಲಕ್ಷ ಮೌಲ್ಯದ ಡಬಲ್ ಬ್ಯಾಂಡೆಡ್ ಡೈಮಂಡ್ ರಿಂಗ್
₹9 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್
₹3 ಲಕ್ಷ ಮೌಲ್ಯದ ಇನ್ನೊಂದು ಡೈಮಂಡ್ ರಿಂಗ್
ನಟಿ ರುಕ್ಮಿಣಿ ಅವರು ಕನ್ನಡದ 'ಭಜರಂಗಿ' ಸಿನಿಮಾದ ಕೃಷ್ಣೆ ಪಾತ್ರದ ಮೂಲಕ ಜನಪ್ರಿಯರಾಗಿದ್ದಾರೆ. ಈ ಸಿನಿಮಾದಲ್ಲಿ ಅವರ ಡ್ಯಾನ್ಸ್ ಮಾತ್ರ ಮನಮೋಹಕವಾಗಿತ್ತು. ಇನ್ನು ನಿಜ ಜೀವನದಲ್ಲಿಯೂ ಕೂಡ ಡ್ಯಾನ್ಸರ್ ವೃತ್ತಿಯನ್ನೇ ಅವರು ಅವಲಂಬಿಸಿದ್ದಾರೆ. ಇನ್ನು ನಟಿ ರುಕ್ಮಿಣಿ ಕನ್ನಡ ಚಿತ್ರವಲ್ಲದೇ ದಕ್ಷಿಣ ಭಾರತದ ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಕೊಚಾಡಿಯನ್, ಕಾಟ್ರು ವೆಳಿಯಿಡೈ ಚಿತ್ರಗಳು ಹಾಗೂ ಹಿಂದಿ ಚಿತ್ರ ಶಮಿತಾಭ್‌ನಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ನಟಿಯಾಗಿರುವ ರುಕ್ಮಿಣಿ ಅವರು ಬೆಂಗಳೂರಿನಲ್ಲಿ ಕಾರು ನಿಲ್ಲಿಸಿದಾಗ ಈ ಘಟನೆ ನಡೆದಿದ್ದು, ತೀವ್ರ ಆಘಾತಕ್ಕೆ ಒಳಗಾಗಿದ್ದರು. ಇದೀಗ ಪೊಲೀಸರು ಕಳ್ಳನನ್ನು ಬಂಧಿಸಿ ರುಕ್ಮಿಣಿ ಅವರ ವಸ್ತುಗಳನ್ನು ಜಪ್ತಿ ಮಾಡಿದ ಬೆನ್ನಲ್ಲಿಯೇ ನಿಟ್ಟುಸಿರು ಬಿಟ್ಟಿದ್ದಾರೆ.
ಕಾರಿನಲ್ಲಿದ್ದ ವಸ್ತುಗಳನ್ನು ಕದ್ದ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜೊತೆಗೆ, ಆತನ ವಿರುದ್ಧ ಮುಂದಿನ ಕಾನೂನಾತ್ಮಕ ಕ್ರಮದ ಬಗ್ಗೆ ತನಿಖೆ ಮುಂದುವರೆದಿದೆ. ನಟಿ ರುಕ್ಮಿಣಿ ಕಾರು ಲಾಕ್ ಮಾಡದೆ ಹೋದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಜಾಗ್ರತೆ ವಹಿಸುವ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತದೆ. ಇನ್ನು ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿ ಲಾಕ್ ಮಾಡಿ ಇಡುವುದನ್ನು ಬಿಟ್ಟು ಕಾರಿನಲ್ಲಿ ಇಟ್ಟುಕೊಂಡು ಓಡಾಡುವುದು ಸೂಕ್ತವಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ