
ಬೆಂಗಳೂರು (ಜೂ.08): ರಾಜ್ಯದಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರದಿಂದ ಉಂಟಾದ ಬೆಳೆ ಹಾನಿಗೆ 1791 ಕೋಟಿ ರು. ಬೆಳೆ ವಿಮೆ ಲೆಕ್ಕಾಚಾರ ಮಾಡಿದ್ದು, ಬಹುತೇಕ ಇತ್ಯರ್ಥಪಡಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಶುಕ್ರವಾರ ಅವರು ಕೃಷಿ, ಜಲಾನಯನ ಇಲಾಖೆಗಳು, ಕರ್ನಾಟಕ ರಾಜ್ಯ ಬೀಜ ನಿಗಮ, ಕೃಷಿಕ ಸಮಾಜದ ಅಧಿಕಾರಿಗಳ ಸಭೆ ನಡೆಸಿದರು.
ಇದೇ ವೇಳೆ ಕಳೆದ ಸಾಲಿನ ವಿಮೆ ಇತ್ಯರ್ಥದ ಜೊತೆಗೆ ಈ ಮುಂಗಾರಿಗೂ ಬೆಳೆ ವಿಮೆ ನೋಂದಣಿ ಹಾಗೂ ರೈತ ಜಾಗೃತಿಗೆ ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 2023-24ರ ಮುಂಗಾರಿನಲ್ಲಿ 19.14 ಲಕ್ಷ ರೈತರು 15.10 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆಗೆ ನೋಂದಾಯಿಸಿದ್ದರು. ನಿಯಮಾನುಸಾರ ಪರಿಶೀಲಿಸಿ ಅಂತಿಮವಾಗಿ ಬಾಕಿ ಇರುವ 130 ಕೋಟಿ ರು.ಗಳನ್ನು ಶೀಘ್ರ ವಿತರಣೆ ಮಾಡಿ ಎಂದು ನಿರ್ದೇಶನ ನೀಡಿದರು.
₹130 ಕೋಟಿ ಮಾತ್ರ ಪಾವತಿ ಬಾಕಿ: 2023-24 ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 5.88 ಲಕ್ಷ ರೈತರು 5.43 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಾಯಿಸಿದ್ದರು. ಈವರೆಗೆ ಬಿತ್ತನೆ ತಡೆ, ಸ್ಥಳೀಯ ಪ್ರಕೃತಿ ವಿಕೋಪ ಅಡಿ 16,053 ರೈತರಿಗೆ 7.93 ರು.ಕೋಟಿ ಪರಿಹಾರ ಇತ್ಯರ್ಥ ಪಡಿಸಲಾಗಿದೆ. ಉಳಿದ ರೈತರಿಗೆ ವಿಮೆ ಹಣವನ್ನು ಶೀಘ್ರವೇ ತಲುಪಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು. ರಾಜ್ಯಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿದ್ದು, ಮುಂಗಾರು ಕೂಡ ಆರಂಭವಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆ ಆಧಾರದಲ್ಲಿ ಪೂರೈಕೆಯಾಗಿದೆ.
ನೀಟ್ ಪರೀಕ್ಷೆ ಅಕ್ರಮದ ಕುರಿತು ತನಿಖೆ ಮಾಡಿ: ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ
ಎಲ್ಲೂ ಕೊರತೆಯಾಗದಂತೆ ಎಚ್ಚರ ವಹಿಸಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ತಿಳಿಸಿದರು. ಕೃಷಿ ಇಲಾಖೆ ಆಯುಕ್ತರಾದ ಎ.ವೈ. ಪಾಟೀಲ್ ಮಾತನಾಡಿ ಆರ್ಥಿಕ ಸಾಂಖ್ಯಿಕ ನಿರ್ದೇಶನಾಲಯ ಬೆಳೆ ಕಟಾವು ಪ್ರಯೋಗಗಳ ಇಳುವರಿ ನೀಡಿರುವ ಹಿಂಗಾರು ಹಂಗಾಮಿನ 4,368 ವಿಮಾ ಘಟಕಗಳಿಗೆ 1,03,044 ರೈತರ 152.71 ಕೋಟಿ ಬೆಳೆ ವಿಮೆ ಪರಿಹಾರ ಮೊತ್ತ ಲೆಕ್ಕಾಚಾರ ಮಾಡಿದ್ದು ವಿಮಾ ಸಂಸ್ಥೆಗಳಿಂದ ಇತ್ಯರ್ಥ ಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ