ಕೊರೋನಾಗೆ ರಾಜ್ಯದಲ್ಲಿ ಮತ್ತೊಂದು ಬಲಿ| ಕಲಬುರಗಿಯ 65 ವರ್ಷದ ವೃದ್ಧ ಸಾವು| ಕರ್ನಾಟಕದಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆ| ಕಲಬುರಗಿಯಲ್ಲಿ ಕೊರೋನಾಗೆ 2ನೇ ಬಲಿ| ಮತ್ತೆ 6 ಮಂದಿಗೆ ಸೋಂಕು, ಒಟ್ಟು 181ಕ್ಕೆ ಹೆಚ್ಚಳ
ಬೆಂಗಳೂರು(ಏ.09): ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈ ವ್ಯಾಧಿಗೆ ಬಲಿ ಆದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಜತೆಗೆ ಬುಧವಾರ ಹೊಸದಾಗಿ 6 ಪ್ರಕರಣ ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 181ಕ್ಕೆ ಏರಿದೆ. ಇದೇ ವೇಳೆ ಒಟ್ಟು ಸೋಂಕಿತರ ಪೈಕಿ 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬುಧವಾರ ಕಲಬುರಗಿಯಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಸೋಂಕು ದೃಢಪಡುವ ವರದಿ ಬರುವ ಮುನ್ನವೇ 65 ವರ್ಷದ ವ್ಯಕ್ತಿಯು ಮಂಗಳವಾರವೇ ಮೃತಪಟ್ಟಿದ್ದರು. ಮೃತ ವ್ಯಕ್ತಿಯು ಕಲಬುರಗಿ ಬಸ್ಸು ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದು, ಏ.4 ರಂದು ತೀವ್ರ ಉಸಿರಾಟ ತೊಂದರೆ (ಎಸ್‌ಎಆರ್‌ಐ) ಹಿನ್ನೆಲೆಯಲ್ಲಿ ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸರ್ಕಾರಿ ಕೊರೋನಾ ಆಸ್ಪತ್ರೆಗೆ ಶಿಫಾರಸು ಮಾಡಿದ ಆಸ್ಪತ್ರೆ ವೈದ್ಯರು, ಏ.6ರ ಸಂಜೆ ಕಲಬುರಗಿಯ ಇಎಸ್‌ಐ ಆಸ್ಪತ್ರೆಗೆ ಕಳುಹಿಸಿದ್ದರು. ಇಲ್ಲಿ ದಾಖಲಾದ ನಂತರ ನೀಡಲಾದ ಚಿಕಿತ್ಸೆ ಫಲಕಾರಿಯಾಗದೆ ಹಣ್ಣಿನ ವ್ಯಾಪಾರಿ ಮಂಗಳವಾರ ಮೃತಪಟ್ಟರು. ಬುಧವಾರ ಈ ವ್ಯಕ್ತಿಯ ಗಂಟಲಿನ ದ್ರವದ ವರದಿ ಬಂದಿದ್ದು, ಅವರಿಗೆ ಕೊರೋನಾ ಸೋಂಕು ಇದ್ದದ್ದು ಖಚಿತಪಟ್ಟಿದೆ.
ಇಡೀ ದೇಶದಲ್ಲೇ ಮೊದಲ ಕೊರೋನಾ ಸಾವು ಕಲಬುರಗಿಯಲ್ಲಿ ಸಂಭವಿಸಿತ್ತು.
ಸತ್ತವರನ್ನು ಸ್ವರ್ಗ ಸೇರಲು ಬಿಡುತ್ತಿಲ್ಲ ಕೊರೋನಾ ವೈರಸ್!
ಸೋಂಕಿತರ ಸಂಖ್ಯೆ ಹೆಚ್ಚಳ:
ಕಲಬುರಗಿಯಲ್ಲಿ ಮತ್ತೊಬ್ಬ 72 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಹಿಳೆಯು 175ನೇ ರೋಗಿಯಾಗಿರುವ 67 ವರ್ಷದ ಸೋಂಕಿತ ವ್ಯಕ್ತಿಯ ತಾಯಿಯಾಗಿದ್ದು, ಮಗನಿಂದ ಸೋಂಕಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಮತ್ತೊಬ್ಬ ವ್ಯಕ್ತಿಗೆ ಸೋಂಕು ವರದಿಯಾಗಿದ್ದು 23 ವರ್ಷದ ದೆಹಲಿ ಪ್ರಯಾಣ ಹಿನ್ನೆಲೆ ಹೊಂದಿರುವ ಯುವಕನಿಗೆ ಸೋಂಕು ತಗುಲಿದೆ.
ಬೆಂಗಳೂರಿನಲ್ಲಿ ದೆಹಲಿ ಪ್ರಯಾಣ ಹಿನ್ನೆಲೆ ಹೊಂದಿರುವ 27 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಮಂಡ್ಯದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು, 35 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಈ ವ್ಯಕ್ತಿಗೆ 134 ಹಾಗೂ 138ನೇ ಸೋಂಕಿತರೊಂದಿಗೆ ಸಂಪರ್ಕವಿತ್ತು.
ಉತ್ತರ ಕನ್ನಡದಲ್ಲಿ ದುಬೈನಿಂದ ಬಂದವರೊಂದಿಗೆ ಸಂಪರ್ಕ ಹೊಂದಿದ್ದ ಎಸ್‌ಎಆರ್‌ಐ (ಉಸಿರಾಟ ತೊಂದರೆ) ವ್ಯಕ್ತಿಗೆ ಸೋಂಕು ತಗುಲಿದೆ.
ಈವರೆಗೆ 28 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ವೆಂಟಿಲೇಟರ್‌ನಲ್ಲಿದ್ದ 102ನೇ ರೋಗಿ ಆರೋಗ್ಯ ಸುಧಾರಿಸಿದ್ದು ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂದರು.
ಟಾಸ್ಕ್ ಫೋರ್ಟ್ ತಂಡದಿಂದ ಸಿಎಂಗೆ ವರದಿ: ಲಾಕ್‌ಡೌನ್ ತೆರವು ಮಾಡ್ಬೇಕಾ? ಬೇಡ್ವಾ?
ಕಲಬುರಗಿ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಕೇಸು
ಕಲಬುರಗಿಯ ಮೃತ ವ್ಯಕ್ತಿಯು ಬಸ್ಸು ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದರು. ಹೀಗಾಗಿ ನೂರಾರು ಮಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುತ್ತಾರೆ. ರೋಗಿಗೆ ಸೋಂಕಿನ ಲಕ್ಷಣಗಳಿದ್ದರೂ ಕೊನೆ ಕ್ಷಣದವರೆಗೂ ಖಾಸಗಿ ಆಸ್ಪತ್ರೆಯವರು ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಿರಲಿಲ್ಲ. ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಖಾಸಗಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದ್ದು ಕ್ರಿಮಿನಲ್ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಎರಡು ದಿನಗಳ ಕಾಲ ಆಸ್ಪತ್ರೆ ಬಂದ್ ಮಾಡಿ ಎಲ್ಲಾ ಸಿಬ್ಬಂದಿಯನ್ನು 14 ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ’ ಎಂದು ಕೊರೋನಾ ದೈನಂದಿನ ಮಾಹಿತಿ ನೀಡಿದ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಮೃತಪಟ್ಟಹಣ್ಣಿನ ವ್ಯಾಪಾರಿಗೆ ಸೋಂಕು ತಗುಲಿದ್ದು ಹೇಗೆ? ನಿಗೂಢ
65 ವರ್ಷದ ಮೃತ ವ್ಯಕ್ತಿಯು ಕಲಬುರಗಿ ಬಸ್ಸು ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಇವರಿಗೆ ಯಾವುದೇ ವಿದೇಶಿಗರ ಜತೆ ನೇರ ಸಂಪರ್ಕ ಅಥವಾ ವಿದೇಶಿ ಪ್ರಯಾಣ ಹಿನ್ನೆಲೆ ಇರಲಿಲ್ಲ. ಹಾಗಿದ್ದೂ ಸೋಂಕು ತಗುಲಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಏ.4 ರಂದು ತೀವ್ರ ಉಸಿರಾಟ ತೊಂದರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕಿನ ವರದಿ ಬರುವ ಮೊದಲೇ ಮೃತಪಟ್ಟರು.