ಕಮಿಷನ್‌ ಆರೋಪ: ಕೆಂಪಣ್ಣ ಮೇಲೆ 50 ಕೋಟಿ ಮಾನನಷ್ಟ ಕೇಸ್‌ ಹಾಕುವೆ, ಮುನಿರತ್ನ

By Kannadaprabha NewsFirst Published Aug 26, 2022, 5:00 AM IST
Highlights

ಏಳು ದಿನದೊಳಗೆ ದಾಖಲೆ ಬಿಡುಗಡೆ ಮಾಡಬೇಕು. ಇಲ್ಲವಾದರೆ, ಮಾಧ್ಯಮಗಳಲ್ಲಿ ಕ್ಷಮೆ ಕೋರಬೇಕು. ಹೀಗೆ ಮಾಡದಿದ್ದರೆ ಮಾನನಷ್ಟ ಹಾಗೂ ಕ್ರಿಮಿನಲ್‌ ಮಾನನಷ್ಟಮೊಕದ್ದಮೆ ಹೂಡುತ್ತೇನೆ ಎಚ್ಚರಿಸಿದ: ಮುನಿರತ್ನ

ಬೆಂಗಳೂರು(ಆ.26):  ರಾಜ್ಯ ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್‌ ಆರೋಪ ಮಾಡುತ್ತಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಏಳು ದಿನಗಳೊಳಗೆ ಕಮಿಷನ್‌ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ, ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಪದಾಧಿಕಾರಿಗಳ ವಿರುದ್ಧ ಶಾಸಕರ ವಿಶೇಷ ನ್ಯಾಯಾಲಯದಲ್ಲಿ 50 ಕೋಟಿ ರು. ಮಾನನಷ್ಟ ಮೊಕದ್ದಮೆ ಹಾಗೂ ಕ್ರಿಮಿನಲ್‌ ಮಾನನಷ್ಟಮೊಕದ್ದಮೆ ದಾಖಲಿಸುತ್ತೇನೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನೂ ಸೇರಿದಂತೆ ರಾಜ್ಯ ಸರ್ಕಾರವು ಗುತ್ತಿಗೆದಾರರ ಬಳಿ ಶೇ.40ರಷ್ಟು ಕಮಿಷನ್‌ ಕೇಳುತ್ತಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು. ಸುದ್ದಿಗೋಷ್ಠಿ ಕರೆದು ದಾಖಲೆ ಬಿಡುಗಡೆ ಮಾಡಬೇಕು ಅಥವಾ ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ನೀಡಬೇಕು ಅಥವಾ ರಾಜ್ಯಪಾಲರಿಗೆ ದಾಖಲೆ ಸಹಿತ ದೂರು ನೀಡಬೇಕು. ಏಳು ದಿನದೊಳಗೆ ದಾಖಲೆ ಬಿಡುಗಡೆ ಮಾಡಬೇಕು. ಇಲ್ಲವಾದರೆ, ಮಾಧ್ಯಮಗಳಲ್ಲಿ ಕ್ಷಮೆ ಕೋರಬೇಕು. ಹೀಗೆ ಮಾಡದಿದ್ದರೆ ಮಾನನಷ್ಟ ಹಾಗೂ ಕ್ರಿಮಿನಲ್‌ ಮಾನನಷ್ಟಮೊಕದ್ದಮೆ ಹೂಡುತ್ತೇನೆ ಎಚ್ಚರಿಸಿದರು.

40% ಕಮಿಷನ್ ಆರೋಪ: ಇದಕ್ಕೆ ಇನ್ನೇನು ಸಾಕ್ಷಿ ಬೇಕು, ತನಿಖೆಗೆ ಆಗ್ರಹಿಸಿದ ಪ್ರಿಯಾಂಕ್ ಖರ್ಗೆ

ದಾಖಲೆ ಇಲ್ಲದೆ ಸುಳ್ಳು ಆರೋಪ ಮಾಡಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಚಾರಕ್ಕಾಗಿ ಪ್ರಧಾನಮಂತ್ರಿಗೆ ಪತ್ರ ಬರೆಯೋದಲ್ಲ. ದಾಖಲೆ ಇದ್ದರೆ ಬಿಡುಗಡೆ ಮಾಡಿ ಕಮಿಷನ್‌ ಪಡೆದ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಬಯಲಿಗೆ ತರಲಿ. ಯಾವುದೋ ಒಂದು ಅರ್ಜಿ ಕೊಟ್ಟತಕ್ಷಣ ನ್ಯಾಯಾಂಗ ತನಿಖೆ ಮಾಡಿಸಲು ಸಾಧ್ಯವಿಲ್ಲ. ಸೂಕ್ತ ದಾಖಲೆ ಇದ್ದರೆ ಬಿಡುಗಡೆಗೊಳಿಸಲಿ. ಸುಮ್ಮನೆ 14 ತಿಂಗಳಿಂದ ಗಾಳಿಯಲ್ಲಿ ಗುಂಡು ಹೊಡೆದುಕೊಂಡು ಓಡಾಡುವುದು ಸರಿಯಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ವಿರೋಧ ಪಕ್ಷದ ನಾಯಕರ ಮನೆಗೆ ತೆರಳಿ ಆದೇಶ ತೆಗೆದುಕೊಂಡು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾರೆ. ಅಂದರೆ, ಇದೆಲ್ಲಾ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ನಾನೂ ಆರಂಭದಲ್ಲಿ ಗುತ್ತಿಗೆದಾರನೇ. ನಾನೂ ಈ ಸಂಘದ ಸದಸ್ಯನೇ. ಕಳೆದ 35-40 ವರ್ಷಗಳಿಂದ ಸಂಘ ನೋಡಿದ್ದೇನೆ. ಈಗ ಗುತ್ತಿಗೆ ವೃತ್ತಿ ಬಿಟ್ಟು ತುಂಬಾ ದೂರ ಬಂದಿದ್ದೇನೆ. ಗುತ್ತಿಗೆದಾರರ ಬ್ಯಾಂಕ್‌ ಇತ್ತು. ಇಂಥವರೆಲ್ಲ ಸೇರಿಕೊಂಡು ಆ ಬ್ಯಾಂಕ್‌ ಹಾಳು ಮಾಡಿ ಮುಚ್ಚಿಸಿದ್ದಾರೆ ಎಂದು ಸಚಿವರು ಕಿಡಿಕಾರಿದರು.

ಸರ್ಕಾರ ನಡಿಸ್ತಾ ಇಲ್ಲ, ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೇ: ಮಾಧುಸ್ವಾಮಿ ರಾಜೀನಾಮೆಗೆ ಮುನಿರತ್ನ ಆಗ್ರಹ

ಸಂಘ ವಿಪಕ್ಷದ ಕೈಗೊಂಬೆ:

ರಾಜ್ಯದಲ್ಲಿ ಜಿಲ್ಲೆಗೊಂದು ಗುತ್ತಿಗೆದಾರರ ಸಂಘವಿದೆ. ಆ ಸಂಘಗಳಿಗೆ ಚುನಾವಣೆ ಇಲ್ಲ. ಅವಿರೋಧ ಆಯ್ಕೆ ನಡೆಯುತ್ತದೆ. ಸಂಘದ ಅಧ್ಯಕ್ಷನಾದವನಿಗೆ ಗುತ್ತಿಗೆದಾರರ ಕಷ್ಟಗಳು, ನೋವು, ಸಮಸ್ಯೆಗಳು ಗೊತ್ತಿರಬೇಕು. ಕೆಂಪಣ್ಣ ಅವರು ಗುತ್ತಿಗೆದಾರರಾಗಿ ಕಾಮಗಾರಿ ಮಾಡಿ ಎಷ್ಟುವರ್ಷ ಕಳೆದಿದೆಯೋ ಗೊತ್ತಿಲ್ಲ. ನಾನು ಬಿಬಿಎಂಪಿ ಗುತ್ತಿಗೆದಾರನಾಗಿದ್ದಾಗ ಅವರನ್ನು ನೋಡಿದ್ದೆ. ಗುತ್ತಿಗೆದಾರರ ಸಂಘ ವಿರೋಧ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದೆ. ಗುತ್ತಿಗೆದಾರರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಕೈ ಮುಗಿಯುತ್ತೇನೆ ಕೇಸ್‌ ಹಾಕಿ: ಕೆಂಪಣ್ಣ!

ಬೆಂಗಳೂರು: ಸಚಿವ ಮುನಿರತ್ನ ಅವರು ನನ್ನ ವಿರುದ್ಧ 50 ಕೋಟಿ ರು. ಮಾನನಷ್ಟಮೊಕದ್ದಮೆ ಹೂಡುವುದಾಗಿ ಹೇಳಿರುವುದು ತುಂಬಾ ಸಂತಸದ ಸಂಗತಿ. ಅವರನ್ನು ಕೈಮುಗಿದು ಪ್ರಾರ್ಥಿಸುತ್ತೇನೆ. ಮೊದಲು ಮೊಕದ್ದಮೆ ದಾಖಲಿಸಲಿ. ನ್ಯಾಯಾಲಯಕ್ಕೆ ಎಲ್ಲಾ ರೀತಿಯ ದಾಖಲೆಗಳನ್ನೂ ಸಲ್ಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿರುಗೇಟು ನೀಡಿದ್ದಾರೆ.
 

click me!