* ರಾಯಚೂರು, ಚಿಕ್ಕಬಳ್ಳಾಪುರದಲ್ಲಿ ತಲಾ 4 ಪ್ರಕರಣ
* ಮಂಡ್ಯ ಜಿಲ್ಲೆಯಲ್ಲಿ 14 ದಿನದ ಹಸುಗೂಸು ಅನಾಥ
* ಅನಾಥ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶಿಕ್ಷಣ ವ್ಯವಸ್ಥೆ
ಬೆಂಗಳೂರು(ಜೂ.17): ಕೋವಿಡ್ ಮಹಾಮಾರಿಯಿಂದ ರಾಜ್ಯದಲ್ಲಿ ಏಪ್ರಿಲ್‌ನಿಂದೀಚೆಗೆ 44 ಮಕ್ಕಳು ಹೆತ್ತವರನ್ನು ಕಳೆದುಕೊಂಡು ರಾಗಿದ್ದಾರೆ. ಅಷ್ಟೇ ಅಲ್ಲ ನೂರಾರು ಮಕ್ಕಳು ತಂದೆ ಅಥವಾ ತಾಯಿ ಪೈಕಿ ಒಬ್ಬರನ್ನು ಕಳೆದುಕೊಂಡು ಹೆತ್ತವರ ಪ್ರೀತಿಯಿಂದ ವಂಚಿತರಾಗಿದ್ದಾರೆ.
ನವಜಾತ ಶಿಶು, ಹಾಲುಗಲ್ಲದ ಹಸುಳೆ, ಪ್ರಪಂಚದ ಜ್ಞಾನವನ್ನೇ ಅರಿಯದ ಕಂದಮ್ಮಗಳೂ ಕೊರೋನಾ ಹೊಡೆತಕ್ಕೆ ಸಿಲುಕಿ ನಲುಗಿವೆ. ಈ 44 ಮಕ್ಕಳಲ್ಲಿ 22 ಮಕ್ಕಳು ಹೆತ್ತವರ ಒಂದೇ ಕುಡಿಯಾಗಿದ್ದರೆ ಇನ್ನುಳಿದ 22 ಮಕ್ಕಳಿಗೆ ಸಹೋದರ ಅಥವಾ ಸಹೋದರಿ ಇದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 14 ದಿನದ ಹಸುಗೂಸು ಅನಾಥವಾಗಿದೆ.
undefined
ರಾಯಚೂರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚು ಅಂದರೆ ತಲಾ 4 ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ, ಬೀದರ್, ದಕ್ಷಿಣ ಕನ್ನಡ, ಧಾರವಾಡ, ಕೊಡಗು, ಕೋಲಾರದಲ್ಲಿ ತಲಾ 3 ಮಕ್ಕಳು ಹೆತ್ತವರನ್ನು ಕಳೆದುಕೊಂಡಿದ್ದಾರೆ. ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಗದಗ, ಹಾಸನ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ತಲಾ 2 ಪ್ರಕರಣ ವರದಿಯಾಗಿವೆ.
ಕೋವಿಡ್ ಅನಾಥ ಮಕ್ಕಳಿಗೆ ಎಲ್ಲೆಲ್ಲಿ ಏನೇನು ಅಭಯ?
ಮಾರ್ಗಸೂಚಿ ಶೀಘ್ರ ಬಿಡುಗಡೆ:
ಕೋವಿಡ್‌ನಿಂದಾಗಿಯೇ ರಾಜ್ಯದಲ್ಲಿ 44 ಮಕ್ಕಳು ಅನಾಥರಾಗಿದ್ದರೆ, ಮತ್ತೊಂದೆಡೆ ಮಾರ್ಚ್ 2020 ರಿಂದ ಇಲ್ಲಿಯವರೆಗೂ ಬೇರೆ-ಬೇರೆ ಕಾರಣಗಳಿಂದಾಗಿ 72 ಮಕ್ಕಳು ಹೆತ್ತವರನ್ನು ಕಳೆದುಕೊಂಡಿದ್ದಾರೆ. 6 ಮಕ್ಕಳು ಕುಟುಂಬದಿಂದ ಪರಿತ್ಯಕ್ತವಾಗಿವೆ. 798 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದಾರೆ.
ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ರಾಜ್ಯ ಸರ್ಕಾರ ಬಾಲ ಸೇವಾ ಯೋಜನೆಯನ್ನು ಘೋಷಿಸಿದೆ. ಹೆತ್ತವರ ಕಳೆದುಕೊಂಡ ಮಕ್ಕಳಿಗೆ ಮಾಸಿಕ 3500 ರು. ನೀಡುವುದು. 10 ವರ್ಷದೊಳಗಿನ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡುವುದು. 21 ವರ್ಷ ಪೂರೈಸಿರುವ ಹೆಣ್ಣು ಮಕ್ಕಳಿಗೆ 1 ಲಕ್ಷ ರುಪಾಯಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಿದೆ. ಈ ಸಂಬಂಧ ಶೀಘ್ರದಲ್ಲೇ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.
ಪೋಷಕರನ್ನು ಕಳೆದುಕೊಂಡ ಮಕ್ಕಳ ದುಃಖದಲ್ಲಿ ಭಾಗಿಯಾಗಿ ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಸಿಎಂ ಯಡಿಯೂರಪ್ಪನವರು ಈಗಾಗಲೇ ಬಾಲ ಸೇವಾ ಯೋಜನೆಯನ್ನು ಘೋಷಿಸಿದ್ದಾರೆ. ನಾನೂ ಸಹ ಜಿಲ್ಲಾವಾರು ಪ್ರವಾಸ ಮಾಡಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದೇನೆ. ಮಕ್ಕಳಿಗೆ ಅಗತ್ಯ ನೆರವನ್ನು ಸರ್ಕಾರ ನೀಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.