400 ದಿನ ಲಾಕ್‌ಡೌನ್‌ನಿಂದ ಗೆದ್ದ ಬೈಲುಕುಪ್ಪೆ ಟಿಬೆಟ್‌ ಕ್ಯಾಂಪ್‌: ಒಂದೂ ಕೊರೋನಾ ಪತ್ತೆ ಇಲ್ಲ!

By Kannadaprabha News  |  First Published Apr 28, 2021, 8:07 AM IST

400 ದಿನ ಲಾಕ್ಡೌನಿಂದ ಗೆದ್ದ ಬೈಲುಕುಪ್ಪೆ ಟಿಬೆಟ್‌ ಕ್ಯಾಂಪ್‌| ಪ್ರವಾಸಿಗರು, ಹೊರರಾಜ್ಯದವರಿಗೆ ಸಂಪೂರ್ಣ ನಿಷೇಧ| ಈವರೆಗೂ ಶಿಬಿರದಲ್ಲಿ ಒಂದೂ ಕೊರೋನಾ ಪತ್ತೆ ಇಲ್ಲ!| ಸಂಭ್ರಮ ಇಲ್ಲ, ಗುಂಪುಗೂಡುವಂತಿಲ್ಲ


ಕೀರ್ತನಾ

ಕುಶಾಲನಗರ(ಏ.28): ಇಲ್ಲಿ ಒಂದಲ್ಲ, ಎರಡಲ್ಲ 400 ದಿನಗಳಿಂದ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಹಬ್ಬವನ್ನು ಸಂಭ್ರಮಿಸುವಂತಿಲ್ಲ, ಜನ ಗುಂಪು ಸೇರುವಂತೆಯೂ ಇಲ್ಲ. ಕೊರೋನಾ ಮಹಾಮಾರಿ ತೊಲಗುವವರೆಗೂ ಇಲ್ಲಿನ ಜನರಿಗೆ ಇಂಥದ್ದೊಂದು ಕಠಿಣ ನಿಯಮ ದೈನಂದಿನ ಬದುಕಿನ ಭಾಗವೇ ಆಗಿದೆ.

Tap to resize

Latest Videos

ಹೌದು, ಇಂಥದ್ದೊಂದು ಕಠಿಣ ಲಾಕ್‌ಡೌನ್‌ ಪಾಲನೆಯಾಗುತ್ತಿರುವುದು ಕೊಡಗಿನ ಕುಶಾಲನಗರದ ಬೈಲುಕುಪ್ಪೆಯ ಟಿಬೆಟಿಯನ್‌ ಶಿಬಿರದಲ್ಲಿ. ಕೊರೋನಾ ಮಹಾಮಾರಿ ವಕ್ಕರಿಸಿದಂದಿನಿಂದ ಇಲ್ಲಿನ ಬೌದ್ಧ ಭಿಕ್ಕುಗಳು ಸ್ವಯಂಘೋಷಿತ ಲಾಕ್‌ಡೌನ್‌ ಪಾಲಿಸಿಕೊಂಡು ಬರುತ್ತಿದ್ದಾರೆ. ಇವರ ಶಿಬಿರದಲ್ಲಿ ಘೋಷಣೆಯಾಗಿರುವ ಲಾಕ್‌ಡೌನ್‌ ಮಂಗಳವಾರಕ್ಕೆ 400 ದಿನಗಳನ್ನು ಪೂರೈಸಿರುವುದು ವಿಶೇಷ.

ಕಳೆದ 2020 ಮಾಚ್‌ರ್‍ನಿಂದ ಈವರೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ತಮ್ಮ ಆಂತರಿಕ ಸರ್ಕಾರ ಹೊರಡಿಸಿದ ಕೋವಿಡ್‌-19 ನಿಯಮಗಳನ್ನು ಇಲ್ಲಿನ ಬೌದ್ಧ ಭಿಕ್ಕುಗಳು ಈಗಲೂ ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ಇಂದಿಗೂ ಶಿಬಿರದೊಳಗೆ ಕೊರೋನಾ ಮಹಾಮಾರಿ ಪ್ರವೇಶಿಸದಂತೆ ನೋಡಿಕೊಂಡಿದ್ದಾರೆ.

24 ಗಂಟೆಯೂ ನಿಗಾ:

ಬೈಲಕುಪ್ಪೆ ನಿರಾಶ್ರಿತರ ಶಿಬಿರದ ಲಾಮಾ ಕ್ಯಾಂಪ್‌ನಲ್ಲಿ ಕಳೆದ ವರ್ಷದ ಮಾಚ್‌ರ್‍ನಿಂದಲೇ ಶಿಬಿರದ ಒಳಗೆ ಬರುವವರು ಮತ್ತು ಹೊರ ತೆರಳುವವರ ಬಗ್ಗೆ ದಿನದ 24 ಗಂಟೆಯೂ ನಿಗಾ ವಹಿಸಲಾಗುತ್ತದೆ. ಸೋಂಕು ಶಿಬಿರ ಪ್ರವೇಶಿಸದಂತೆ ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ. 2020ರ ಮಾಚ್‌ರ್‍ 18ರಿಂದ ಬೈಲಕುಪ್ಪೆ ಟಿಬೆಟಿಯನ್‌ ನಿರಾಶ್ರಿತರ ಶಿಬಿರಕ್ಕೆ ಯಾವುದೇ ವಿದೇಶಿ ಪ್ರವಾಸಿಗರು, ಹೊರ ರಾಜ್ಯದ ಭಿಕ್ಕುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ದ್ವಾರದಲ್ಲಿ ಕಾವಲು:

ಶಿಬಿರದ ಪ್ರಮುಖ ದ್ವಾರದಲ್ಲಿ 3 ಪಾಳಿಯಲ್ಲಿ ಶಿಬಿರದ ಸ್ವಯಂಸೇವಕರು ಕಾವಲು ಕಾಯುತ್ತಿದ್ದು, ಕಟ್ಟುನಿಟ್ಟಾಗಿ ಕೋವಿಡ್‌ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಬಾರಿ ಟಿಬೆಟಿಯನ್‌ ನೂತನ ವರ್ಷ ಲೋರ್ಸಾ ಸಂದರ್ಭದಲ್ಲೂ ಧಾರ್ಮಿಕ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಿಕೊಂಡರು. ಶಿಬಿರದ ಸೀಮಿತ ಜನರಿಗಷ್ಟೇ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಕುಟುಂಬ ಸದಸ್ಯರನ್ನೂ ಹಬ್ಬಾಚರಣೆಯಿಂದ ದೂರ ಇಡಲಾಗಿತ್ತು. ಇದರ ಪರಿಣಾಮ ಶಿಬಿರದ ಒಳಭಾಗದಲ್ಲಿ ನೆಲೆಸಿರುವ ಬೌದ್ಧ ಭಿಕ್ಕುಗಳು, ಧರ್ಮಗುರುಗಳಿಗೆ ಸೋಂಕು ತಗುಲಿಲ್ಲ ಎನ್ನುತ್ತಾರೆ ಶಿಬಿರದ ಪ್ರಮುಖರಾದ ಫಾಲ್ಡೇನ್‌ ರಿಂಪೊಚೆ.

"

ಗೋಲ್ಡನ್‌ ಟೆಂಪಲ್‌ ಬಂದ್‌:

ಅದೇ ರೀತಿ ಪ್ರವಾಸಿಗರಿಗೂ ವಿಶ್ವವಿಖ್ಯಾತ ಗೋಲ್ಡನ್‌ ಟೆಂಪಲ್‌ ಬಾಗಿಲು ಬಂದ್‌ ಮಾಡಲಾಗಿದೆ. ಶಿಬಿರದ ನಿವಾಸಿಗಳಿಗೆ ಆಹಾರ ಸಾಮಗ್ರಿಗಳನ್ನು ಸಾಗಿಸುವ ವಾಹನಗಳು ತಪಾಸಣಾ ಗೇಟ್‌ ತನಕ ಬರುತ್ತವೆ. ನಂತರ ಶಿಬಿರದ ವಾಹನಗಳ ಸಹಾಯದಿಂದ ಒಳಗೆ ಸಾಗಿಸುವ ಕಾಯಕ ನಡೆಯುತ್ತಿದೆ. ಎಲ್ಲವನ್ನೂ ಸ್ಯಾನಿಟೈಸ್‌ ಮಾಡಿಯೇ ಶಿಬಿರದೊಳಗೆ ತರಲಾಗುತ್ತದೆ. ಶಿಬಿರದೊಳಗೆ ಬರುವ ಲಾಮಾಗಳಿಗೆ 14 ದಿನಗಳ ಕ್ವಾರಂಟೈನ್‌ ಕಡ್ಡಾಯ. ನಂತರವಷ್ಟೇ ಶಿಬಿರದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ. ಬೈಲುಕುಪ್ಪೆಯಲ್ಲಿ 30 ನಿರಾಶ್ರಿತರ ಶಿಬಿರಗಳಿದ್ದು, ಇವುಗಳಲ್ಲಿ ಗೋಲ್ಡನ್‌ ಟೆಂಪಲ್‌ ಮತ್ತು ಸುತ್ತಲಿನ ಎರಡ್ಮೂರು ಕ್ಯಾಂಪ್‌ಗಳಲ್ಲಿ ಈ ನಿಯಮ ಹೆಚ್ಚು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಉಳಿದ ಕ್ಯಾಂಪ್‌ಗಳ ನಿರಾಶ್ರಿತರು ಕೂಡ ಒಂದು ವರ್ಷದಿಂದ ಕೆಲಸಕ್ಕಾಗಿ ಹೊರಗೆ ಹೋಗಿಯೇ ಇಲ್ಲ. ಶಿಬಿರದ ಬಹುತೇಕ ಭಿಕ್ಕುಗಳು ಕೋವಿಡ್‌ ಲಸಿಕೆ ಕೂಡ ಹಾಕಿಸಿಕೊಂಡಿರುವುದಾಗಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಕೆಲ ಸಮಯದ ಹಿಂದೆ ನಡೆದ ಟಿಬೆಟಿಯನ್‌ ಆಂತರಿಕ ಸರ್ಕಾರದ ಪ್ರತಿನಿಧಿಗಳ ಚುನಾವಣೆ ಸಂದರ್ಭದಲ್ಲೂ ಕೋವಿಡ್‌-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ.

ಹೇಗಿದೆ ಲಾಕ್ಡೌನ್‌?

- 2020ರ ಮಾಚ್‌ರ್‍ನಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್‌ ಘೋಷಿಸಿತ್ತು

- ಬಳಿಕ ಹಂತಹಂತವಾಗಿ ಇಡೀ ದೇಶವನ್ನು ಅನ್‌ಲಾಕ್‌ ಮಾಡಿತು

- ಆದರೆ ಬೈಲುಕುಪ್ಪೆ ಟಿಬೆಟ್‌ ಶಿಬಿರದಲ್ಲಿ ಈಗಲೂ ಲಾಕ್‌ಡೌನ್‌ ಇದೆ

- ಸೋಂಕು ಶಿಬಿರ ಪ್ರವೇಶಸದಂತೆ 24 ತಾಸೂ ಕಟ್ಟೆಚ್ಚರ ವಹಿಸಲಾಗಿದೆ

- ಪ್ರವಾಸಿಗರು, ಹೊರರಾಜ್ಯದ ಭಿಕ್ಕುಗಳಿಗೆ ಪ್ರವೇಶ ನಿರ್ಬಂಧ

- ಒಂದು ವರ್ಷದಿಂದ ನಿವಾಸಿಗಳು ಶಿಬಿರದಿಂದ ಹೊರಹೋಗಿಲ್ಲ

- ಬಹುತೇಕರು ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!