ಪ್ರತಿ ಲೀಟರ್‌ ಜೊತೆ 40 ML ಉಚಿತ ಹಾಲು: ಕೆಎಂಎಫ್‌ ಬಂಪರ್‌

By Kannadaprabha NewsFirst Published Jun 1, 2021, 7:50 AM IST
Highlights
  • ವಿಶ್ವ ಹಾಲು ದಿನಾಚರಣೆ ಅಂಗವಾಗಿ ತನ್ನ ಗ್ರಾಹಕರಿಗೆ ಬಂಪರ್‌ ಕೊಡುಗೆ
  • ಜೂ.1ರಿಂದ ಜೂ.30ರವರೆಗೆ ದರ ಹೆಚ್ಚಿಸದೆಯೇ ಹೆಚ್ಚುವರಿ ಹಾಲು
  • ಪ್ರತಿ ಲೀಟರ್‌ ಹಾಲಿನೊಂದಿಗೆ 40 ಎಂಎಲ್‌ ಹೆಚ್ಚುವರಿಯಾಗಿ ಹಾಲು

ಬೆಂಗಳೂರು (ಜೂ.01): ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌)ಯು, ವಿಶ್ವ ಹಾಲು ದಿನಾಚರಣೆ ಅಂಗವಾಗಿ ತನ್ನ ಗ್ರಾಹಕರಿಗೆ ಬಂಪರ್‌ ಕೊಡುಗೆ ನೀಡಲು ನಿರ್ಧರಿಸಿದ್ದು ಜೂ.1ರಿಂದ ಜೂ.30ರವರೆಗೆ ದರ ಹೆಚ್ಚಿಸದೆಯೇ ಪ್ರತಿ ಲೀಟರ್‌ ಹಾಲಿನೊಂದಿಗೆ 40 ಎಂಎಲ್‌ ಹೆಚ್ಚುವರಿಯಾಗಿ ಹಾಲು ಕೊಡಲು ತೀರ್ಮಾನಿಸಿದೆ.

ನಿತ್ಯ 35 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತದೆ. ಅದರಲ್ಲಿ ಒಂದು ಲೀಟರ್‌ (1000 ಎಂಎಲ್‌) ಹಾಲಿನೊಂದಿಗೆ 40 ಎಂಎಲ್‌ ಹಾಗೂ ಅರ್ಧ ಲೀಟರ್‌ (500 ಎಂಎಲ್‌) ಹಾಲಿನ ಜೊತೆಗೆ 20 ಎಂಎಲ್‌ ಹಾಲನ್ನು ಗ್ರಾಹಕರಿಗೆ ಹೆಚ್ಚುವರಿಯಾಗಿ ಕೊಡಲು ನಿರ್ಧರಿಸಿದ್ದೇವೆ. ಹೆಚ್ಚುವರಿ ಹಾಲಿಗೆ ಯಾವುದೇ ಅಧಿಕ ದರ ನಿಗದಿ ಮಾಡದೆ ಗ್ರಾಹಕರಿಗೆ ಹೊರೆಯಾಗದಂತೆ ಉಚಿತವಾಗಿ ಕೊಡಲಾಗುವುದು. ಕೊರೋನಾ ಸಂದರ್ಭದಲ್ಲಿ ಹೆಚ್ಚು ಹಾಲು ಮನೆಯಲ್ಲಿದ್ದು ಮಕ್ಕಳು ಕುಡಿದರೆ ಪೌಷ್ಠಿಕಾಂಶ ಸಿಗಲಿ ಎಂಬುದು ಕೆಎಂಎಫ್‌ ಉದ್ದೇಶ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಜನರಿಗೊಂದು ಗುಡ್‌ನ್ಯೂಸ್! ...

ಕೋವಿಡ್‌ ಹಿನ್ನೆಲೆ ಈ ವರ್ಷ ವಿಶ್ವ ಹಾಲು ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಸಾಧ್ಯವಾಗಿಲ್ಲ. ಆದ್ದರಿಂದ ಗ್ರಾಹಕರಿಗೆ ಹೆಚ್ಚುವರಿ ಹಾಲನ್ನು ಕೊಡುಗೆಯಾಗಿ ನೀಡಲು ಕೆಎಂಎಫ್‌ ನಿರ್ಧಾರ ಕೈಗೊಂಡಿದೆ.

ಬಾಲಚಂದ್ರ ಜಾರಕಿಹೊಳಿ. ಕೆಎಂಎಫ್‌ ಅಧ್ಯಕ್ಷ

13 ಕೋಟಿ ಹೊರೆ:  ಹೆಚ್ಚುವರಿಯಾಗಿ ಹಾಲು ನೀಡುವುದರಿಂದ 12ರಿಂದ 13 ಕೋಟಿ ರು.ಗಳಷ್ಟುಹೊರೆ ರಾಜ್ಯದ ಎಲ್ಲ 14 ಹಾಲು ಸಹಕಾರಿ ಒಕ್ಕೂಟಗಳ ಮೇಲೆ ಬೀಳಲಿದೆ. ಯಾವ ಒಕ್ಕೂಟಗಳು ಎಷ್ಟುಹಾಲನ್ನು ಮಾರಾಟ ಮಾಡುತ್ತಾರೋ ಅಷ್ಟುಹೊರೆಯನ್ನು ಅವು ಭರಿಸಲಿವೆ. ಜೂನ್‌ ತಿಂಗಳು ಪೂರ್ತಿ ಹೆಚ್ಚುವರಿ ಹಾಲು ಕೊಡುವುದರಿಂದ ಪ್ರತಿ ನಿತ್ಯ 2 ಲಕ್ಷ ಲೀಟರ್‌ ಹೆಚ್ಚುವರಿ ಹಾಲು ಬಳಕೆ ಮಾಡಲಾಗುವುದು.

88 ಲಕ್ಷ ಲೀ. ಸಂಗ್ರಹ:

ಇತ್ತೀಚಿಗೆ ಸುರಿದ ಮಳೆಯಿಂದ ರಾಜ್ಯದ ಅನೇಕ ಕಡೆಗಳಲ್ಲಿ ಹಸಿರು ಮೇವು ಯಥೇಚ್ಛವಾಗಿ ಸಿಗುತ್ತಿದ್ದು, ಹಾಲಿನ ಉತ್ಪಾದನೆಯೂ ಜಾಸ್ತಿಯಾಗಿದೆ. ಕಳೆದ ಮೂರು ವಾರಗಳಿಂದ ನಿತ್ಯ 88 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಇದರಿಂದ ಕೆಎಂಎಫ್‌ಗೆ 35ರಿಂದ 40 ಲಕ್ಷ ಲೀಟರ್‌ ಹಾಲು ಹೆಚ್ಚುವರಿಯಾಗಿ ಶೇಖರಣೆಯಾಗುತ್ತಿದ್ದು ಹಾಲು ಮಾರಾಟ ಕುಸಿದಿರುವುದರಿಂದ ಕೆಎಂಎಫ್‌ಗೆ ತಲೆನೋವಾಗಿ ಪರಿಣಮಿಸಿದೆ.

ಕ್ಷೀರಭಾಗ್ಯ ಯೋಜನೆಯಡಿ ಹಾಲು ಖರೀದಿ ಸಾಧ್ಯತೆ?:

ಕ್ಷೀರಭಾಗ್ಯ ಯೋಜನೆಯಡಿ ರಾಜ್ಯದ 1ರಿಂದ 10ನೇ ತರಗತಿ ವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಅರ್ಧ ಲೀಟರ್‌ ಕೆನೆಭರಿತ ಹಾಲು ವಿತರಣೆ ಮಾಡಬೇಕು. ಈ ಮೂಲಕ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು ಸಿಗುವಂತೆ ಮತ್ತು ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹಿಸಬೇಕು. ಹಾಗೆಯೇ ಹಾಲು ಒಕ್ಕೂಟಗಳ ಹಿತವನ್ನು ಕಾಯುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿರುವುದಾಗಿಯೂ ಜಾರಕಿಹೊಳಿ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದಾರೆ. ರೈತರ ಹಿತ ಕಾಪಾಡಲು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರ ಹಾಲು ಖರೀದಿಸುವುದು ಬಹುತೇಕ ಖಚಿತ ಎನ್ನಲಾಗಿದ್ದು ಸರ್ಕಾರ ತೀರ್ಮಾನವಷ್ಟೇ ಬಾಕಿ ಇದೆ. ಜೊತೆಗೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೂ ಕೂಡ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದು ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೆಎಂಎಫ್‌ ಮೂಲಗಳು ಮಾಹಿತಿ ನೀಡಿವೆ.

ಈ ಯೋಜನೆಯಿಂದ ಹಾಲು ಒಕ್ಕೂಟಗಳಿಗೆ 13 ಕೋಟಿ ರು. ಹೊರೆ

click me!