ಕೋರ್ಟ್‌ ಆದೇಶ ಪಾಲಿಸದ ತಹಶೀಲ್ದಾರ್‌ಗೆ 3 ಲಕ್ಷ ರು. ದಂಡ

By Kannadaprabha News  |  First Published Dec 13, 2022, 2:55 PM IST

ವೃದ್ಧೆಯೊಬ್ಬರಿಗೆ ಸೇರಿದ ಜಮೀನಿನ ಸರ್ವೇ ನಡೆಸಲು ಎಂಟು ವರ್ಷದ ಹಿಂದೆ ಹೊರಡಿಸಿದ ಆದೇಶವನ್ನು ಪಾಲಿಸದ ಮಂಡ್ಯ ಜಿಲ್ಲೆ ಪಾಂಡವಪುರದ ತಹಸೀಲ್ದಾರ್‌ಗೆ ಮೂರು ಲಕ್ಷ ರು. ದಂಡ ವಿಧಿಸಿ ಆದೇಶಿಸಿದ ಹೈಕೋರ್ಟ್‌ 


ಬೆಂಗಳೂರು(ಡಿ.13):  ವೃದ್ಧೆಯೊಬ್ಬರಿಗೆ ಸೇರಿದ ಜಮೀನಿನ ಸರ್ವೇ ನಡೆಸಲು ಎಂಟು ವರ್ಷದ ಹಿಂದೆ ಹೊರಡಿಸಿದ ಆದೇಶವನ್ನು ಪಾಲಿಸದ ಮಂಡ್ಯ ಜಿಲ್ಲೆ ಪಾಂಡವಪುರದ ತಹಸೀಲ್ದಾರ್‌ಗಳಿಗೆ ಮೂರು ಲಕ್ಷ ರು. ದಂಡ ವಿಧಿಸಿ ಹೈಕೋರ್ಟ್‌ ಆದೇಶಿಸಿದೆ. ಪಾರ್ವತಮ್ಮ (71) ಎಂಬುವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. 

2014ರ ಜು.24ರಿಂದ 2022ರ ಫೆ.10ರವರೆಗೆ ಪಾಂಡವಪುರ ತಾಲೂಕಿನಲ್ಲಿ ತಹಸೀಲ್ದಾರ್‌ಗಳಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಂದ ಈ ದಂಡದ ಮೊತ್ತವನ್ನು ವಸೂಲು ಮಾಡಬೇಕು. ಈ ವಿಚಾರವನ್ನು ಅವರ ಸೇವಾ ದಾಖಲೆಯಲ್ಲೂ ನಮೂದಿಸಬೇಕು. ದಂಡದ ಮೊತ್ತವನ್ನು ಒಂದು ತಿಂಗಳಲ್ಲಿ ಅರ್ಜಿದಾರರಿಗೆ ಪಾವತಿಸಬೇಕು. ಆ ಕುರಿತು ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು. ತಪ್ಪಿದರೆ ಜಿಲ್ಲಾಧಿಕಾರಿಯವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಸಿದೆ.

Tap to resize

Latest Videos

Karnataka High Court: ಪತ್ನಿ ಶೀಲ ಶಂಕಿಸಿ 2ನೇ ಸಲ ಮಗುವಿನ ಡಿಎನ್‌ಎ ಟೆಸ್ಟ್ ಕೋರಿದ್ದ ಅರ್ಜಿ ವಜಾ

ಪ್ರಕರಣದ ವಿವರ:

ತಮಗೆ ಸೇರಿದ ಭೂಮಿ ಸರ್ವೇ ಹಾಗೂ ಪೋಡಿ ಮಾಡಿಕೊಡಲು ನಿರ್ದೇಶನ ನೀಡುವಂತೆ ಕೋರಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕುರಹಳ್ಳಿ ಗ್ರಾಮದ ಪಾರ್ವತಮ್ಮ ಅವರು 2014ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, 9 ತಿಂಗಳಲ್ಲಿ ಅರ್ಜಿದಾರರಿಗೆ ಸೇರಿದ ಜಮೀನಿನ ಪೋಡಿ, ದುರಸ್ತಿ ಮಾಡಿಕೊಡಬೇಕು ಎಂದು ಕಂದಾಯಾಧಿಕಾರಿಗಳಿಗೆ 2014ರ ಜು.24ರಂದು ಆದೇಶಿಸಿತ್ತು.

ಅಧಿಕಾರಿಗಳು ಆ ಆದೇಶವನ್ನು ಪಾಲಿಸದೇ ಇದ್ದಾಗ 2018ರಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. 2022ರ ಫೆ.10ರಂದು ಕಂದಾಯ ಅಧಿಕಾರಿಗಳು ಸರ್ವೇ ಮಾಡಿದ್ದರು. ಇದೀಗ ಪ್ರಕರಣ ವಿಲೇವಾರಿ ಮಾಡಿರುವ ಹೈಕೋರ್ಟ್‌, 2014ರಲ್ಲಿಯೇ ಹೈಕೋರ್ಟ್‌ ಏಕಸದಸ್ಯಪೀಠ ಆದೇಶ ನೀಡಿದ್ದರೂ ದಪ್ಪ ಚರ್ಮದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಬೇಸರ ವ್ಯಕ್ತಪಡಿಸಿದೆ.
 

click me!